Mandya: ಶೋಕಿಗಾಗಿ ನಾನು ರಾಜಕೀಯ ಮಾಡಲ್ಲ: ಎನ್‌.ಚಲುವರಾಯಸ್ವಾಮಿ

By Govindaraj SFirst Published Dec 1, 2022, 9:35 PM IST
Highlights

ನಾಗಮಂಗಲ ಕ್ಷೇತ್ರ ನನ್ನ ಸೋಲಿನಿಂದ ಅಭಿವೃದ್ಧಿಯಲ್ಲಿ ಕುಂಠಿತಗೊಂಡು ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ನಾಗಮಂಗಲ (ಡಿ.01): ನಾಗಮಂಗಲ ಕ್ಷೇತ್ರ ನನ್ನ ಸೋಲಿನಿಂದ ಅಭಿವೃದ್ಧಿಯಲ್ಲಿ ಕುಂಠಿತಗೊಂಡು ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಕಸಬಾ ಹೋಬಳಿಯ ಅಂಚೆಚಿಟ್ಟನಹಳ್ಳಿ, ಪಾಲಗ್ರಾಹರ ಮತ್ತು ಹುಲಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಾಲೂಕಿನಲ್ಲಿ ಯಾವ ಅಭಿವೃದ್ಧಿಯಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಏನಾಗಿತ್ತು ಎಂಬುದನ್ನು ತುಲನೆ ಮಾಡಿ ಯೋಚಿಸಿ ಮುಂದಿನ ಚುನಾವಣೆ ಮತ ನೀಡಬೇಕು ಎಂದರು.

ಕಳೆದ ಚುನಾವಣೆಯಲ್ಲಿ 47 ಸಾವಿರ ಮತಗಳ ಅಂತರದಿಂದ ನನ್ನನ್ನು ಸೋಲಿಸಿದ್ದೀರಿ. ನನ್ನ ವಿರುದ್ಧ ಮತ ಚಲಾಯಿಸುವಾಗ ತಾಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ನಿಮಗೆ ನೆನಪಿಗೆ ಬರಲಿಲ್ಲವೆ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ಗೆದ್ದವರು ಕ್ಷೇತ್ರವನ್ನು ನನಗಿಂತಲೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ್ದಾರೆಯೇ. ಇಲ್ಲ ಎನ್ನುವುದಾದರೆ ಯಾವ ಕಾರಣಕ್ಕೆ ನನ್ನನ್ನು ಸೋಲಿಸಿದಿರಿ. ನಾನು ಮಾಡಿದ ಅಪರಾಧವೇನು. ತಾಲೂಕನ್ನು ಅಭಿವೃದ್ಧಿ ಪಡಿಸಿದ್ದೇ ತಪ್ಪಾಗಿ ಹೋಯ್ತಾ ಎಂದು ಬೇಸರ ವ್ಯಕ್ತಪಡಿಸಿದರು.

Mandya: ಕಮಿಷನ್‌ ಮೇಲಾಟ: ನಗರಾಭಿವೃದ್ಧಿ ಕಾಮಗಾರಿ ವಿಳಂಬ

ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲ್ಲ: ಈಗ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಈ ಬಾರಿ ನನ್ನನ್ನು ಕೈಹಿಡಿಯುತ್ತೀರಿ ಎಂಬ ನಂಬಿಕೆ ಇದೆ. ಮಂಡ್ಯ, ಕೆ.ಆರ್‌.ಪೇಟೆ ಸೇರಿದಂತೆ ಇತರೆಡೆಗಳಲ್ಲಿ ನನ್ನನ್ನು ಕರೆಯುತ್ತಿದ್ದಾರೆ. ಆದರೆ, ನಾಗಮಂಗಲವನ್ನು ಬಿಟ್ಟು ಬೇರೆ ಕ್ಷೇತ್ರಗಳಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಿಮ್ಮಿಂದ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನಿಮ್ಮ ಪ್ರೀತಿ, ಅಭಿಮಾನ, ವಿಶ್ವಾಸ ಕಳೆದುಕೊಳ್ಳಲು ಸಿದ್ಧನಿಲ್ಲ. ನಾಗಮಂಗಲವೇ ನನ್ನ ಕರ್ಮಭೂಮಿ. ಇಲ್ಲಿಂದಲೇ ನನ್ನ ಸ್ಪರ್ಧೆ ಮಾಡುತ್ತೇನೆ. 

ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು. ನಾನು ಶೋಕಿಗಾಗಿ ರಾಜಕೀಯ ಮಾಡಲ್ಲ. ಸದಾ ತಾಲೂಕಿನ ಅಭಿವೃದ್ಧಿಗೆ ಚಿಂತಿಸುತ್ತೇನೆ. ನನ್ನನ್ನು ಗೆಲ್ಲಿಸಿದರೆ ಮೂರು ತಲೆಮಾರಿಗಾಗುವಷ್ಟುಅಭಿವೃದ್ಧಿ ಕೆಲಸ ಮಾಡುತ್ತೇನೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮೊತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ತಾಲೂಕಿನ ಅಂಚೆಚಿಟ್ಟನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಆಗಮಿಸಿದ ಚಲುವರಾಯಸ್ವಾಮಿ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. 

ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ: ಸಿದ್ದರಾಮಯ್ಯ

ಕೋಟೆಬೆಟ್ಟದಲ್ಲಿ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಹುಲಿಕೆರೆ ಪಂಚಾಯಿತಿ ವ್ಯಾಪ್ತಿಯ ಸಭೆಗೆ ತಾಲೂಕಿನ ಬಿ.ಜಿ.ನಗರದಿಂದ ಬೈಕ್‌ ರಾರ‍ಯಲಿ ಮೂಲಕ ಸ್ವಾಗತ ಕೋರಲಾಯಿತು. ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ದೇವರಾಜು ಬಲರಾಮೇಗೌಡ, ನಾರಾಯಣಗೌಡ, ಮಾಯಣ್ಣ, ಪವಿ, ಹಾಲ್ತಿ ಗಿರೀಶ್‌, ಹೊನ್ನರಾಜು ಸೇರಿದಂತೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

click me!