
ಬೆಳಗಾವಿ (ಮೇ.26): ಬೆಳಗಾವಿಯ ಇಂದಿನ ಪರಿಸ್ಥಿತಿಗೆ ಇಲ್ಲಿನ ನೀಚ ರಾಜಕಾರಣಿಗಳೇ ಕಾರಣ. ಇವತ್ತು ಬೆಳಗಾವಿಯಲ್ಲಿ ಕನ್ನಡ ಇನ್ನೂ ಉಳಿದಿದ್ದರೆ ಅದಕ್ಕೆ ಕಾರಣ ಕನ್ನಡ ಚಳುವಳಿಗಾರರು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಇಂದು 29ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಿದ್ದು, ಇಲ್ಲಿಂದಲೇ ಹೊಸ ಕ್ರಾಂತಿ ಆರಂಭವಾಗಲಿದೆ ಎಂದು ಘೋಷಿಸಿದರು. 'ಕನ್ನಡ ಹೆಸರಿನಲ್ಲಿ ಸರ್ಕಾರ ಬರಬೇಕು. ವಿಧಾನಸೌಧದಲ್ಲಿ ಕನ್ನಡಪರ ಸಂಘಟನೆಗಳಿಗೆ ವಿಶೇಷ ಕೊಠಡಿ ಕೊಡಬೇಕು. ವರ್ಷಕ್ಕೆ ಒಂದು ಕೋಟಿ ಅನುದಾನ ಕೊಡಬೇಕು. ಪ್ರೆಸ್ ಕ್ಲಬ್‌ಗೆ ಐದು ಕೋಟಿ ನೀಡಬೇಕು. ಇವೆಲ್ಲ ಆಗಬೇಕಾದರೆ ನಾನು ಮುಖ್ಯಮಂತ್ರಿ ಆಗಬೇಕು, ಮುಂದಿನ ಬಾರಿ ನಾನೇ ಸಿಎಂ ಆಗುತ್ತೇನೆ' ಎಂದು ವಾಟಾಳ್ ಸ್ಫೋಟಕ ಹೇಳಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ' ಎಂಬ ನಿರ್ಣಯವನ್ನು ಜೂನ್ 2ರೊಳಗೆ ಅಂಗೀಕರಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು. ಆ ನಿರ್ಣಯ ಮಾಡದಿದ್ರೆ ಬೆಳಗಾವಿಯಲ್ಲಿ ಕಂಡರಿಯದ ಕ್ರಾಂತಿ ಆಗುತ್ತೆ” ಎಂದು ಎಚ್ಚರಿಸಿದರು. ಜೊತೆಗೆ ಜೂನ್ 4ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದೆ ಎಂದರು. ಆ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಜೂನ್ 4ರ ಸಭೆಯ ಬಳಿಕ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡುವುದಾಗಿ ವಾಟಾಳ್ ಘೋಷಿಸಿದರು. 'ಬೆಳಗಾವಿಯಿಂದಲೇ ಕರ್ನಾಟಕ ಬಂದ್ ಆರಂಭವಾಗುತ್ತೆ. ಎಲ್ಲ ಕನ್ನಡಪರ ಸಂಘಟನೆಗಳನ್ನೂ ಒಂದಾಗಿಸುತ್ತೇವೆ. ಕರ್ನಾಟಕ ಇತಿಹಾಸದಲ್ಲಿ ಆಗದ ರೀತಿಯ ಹೋರಾಟ ನಡೆಯಲಿದೆ' ಎಂದು ಹೇಳಿದರು. ಬಂದ್ ದಿನ ಬೆಳಗಾವಿಗೆ ಬಂದು ಬೀದಿ ಬೀದಿಯಲ್ಲಿ ಮೆರವಣಿಗೆ ಹಾಗೂ ಹೋರಾಟ ನಡೆಸುವುದಾಗಿ ತಿಳಿಸಿದ ಅವರು, ಸರ್ಕಾರದ ಮೇಲೆ ಭಾರೀ ಒತ್ತಡ ತರುತ್ತೇವೆ ಎಂದರು. ಅದಕ್ಕೂ ಸ್ಪಂದನೆ ಸಿಗದಿದ್ರೆ ಪಾಲಿಕೆಯ ಎಲ್ಲಾ ಸದಸ್ಯರನ್ನ ಮನೆಗೆ ಕಳುಹಿಸಬೇಕು' ಎಂದು ವಾಟಾಳ್ ತೀವ್ರ ಎಚ್ಚರಿಕೆ ನೀಡಿದರು.