ಮನೆಬಿಟ್ಟು ಹೋಗಿದ್ದ ಯುವಕ 20 ವರ್ಷ ಬಳಿಕ ಗುಜರಾತ್‌ನ ಕಾಳಿಕದೇವಿ ಮಠದ ಸ್ವಾಮೀಜಿಯಾಗಿ ಪತ್ತೆ!

Kannadaprabha News   | Kannada Prabha
Published : May 26, 2026, 12:49 PM IST
Missing Ballari Man Shankarachari Found as Swamiji After 20 Years

ಸಾರಾಂಶ

ಬಳ್ಳಾರಿಯ ಕುರುಗೋಡು ಪಟ್ಟಣದಿಂದ ಸುಮಾರು 20 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಶಂಕರಾಚಾರಿ ಎಂಬ ಯುವಕ, ಇದೀಗ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಪತ್ತೆಯಾಗಿದ್ದಾರೆ. ಪೋಷಕರ ಕೋರಿಕೆಯ ಮೇರೆಗೆ ಹುಟ್ಟೂರಿಗೆ ಮರಳುತ್ತಿದ್ದಾರೆ.

ಬಳ್ಳಾರಿ (ಮೇ.26): ಸುಮಾರು ಎರಡು ದಶಕಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಯುವಕನೊಬ್ಬ ಇದೀಗ ಗುಜರಾತ್ ರಾಜ್ಯದ ಅಹ್ಮದಾಬಾದ್‌ ಸಮೀಪದ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಪತ್ತೆಯಾಗಿದ್ದು, ತಂದೆ-ತಾಯಿ ಒತ್ತಾಸೆಯಂತೆ ತನ್ನ ಹುಟ್ಟೂರಿಗೆ ಮರಳುತ್ತಿರುವ ಸ್ವಾಮೀಜಿಯ ಬದುಕಿನ ಪಯಣ ತೀವ್ರ ಕುತೂಹಲ ಮೂಡಿಸಿದೆ.

ಜಿಲ್ಲೆಯ ಕುರುಗೋಡು ಪಟ್ಟಣದ ನಿವಾಸಿಗಳಾದ ಚಂದ್ರಶೇಖರ ಆಚಾರಿ ಹಾಗೂ ಚಂದ್ರಕಲಾ ದಂಪತಿಯ ಏಕೈಕ ಪುತ್ರ ಶಂಕರಾಚಾರಿ ಎಂಟನೇ ತರಗತಿ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ. ಆರ್ಥಿಕ ಸಂಕಷ್ಟದ ಹಿನ್ನೆಲೆ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕೆಲ ವರ್ಷದ ಬಳಿಕ ಬಳ್ಳಾರಿಗೆ ಮರಳಿ ಬಂದು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ನಂತರ ಮತ್ತೆ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳುವುದಾಗಿ ಹೇಳಿ ಮನೆಬಿಟ್ಟು ಹೋದ ಆತ, ಬಳಿಕ ಕುಟುಂಬದ ಸಂಪರ್ಕದಿಂದ ಸಂಪೂರ್ಣ ದೂರವಾದ. ಪೋಷಕರು ಮೊದ ಮೊದಲು ಬೆಂಗಳೂರಿನಲ್ಲಿ ಹುಡುಕಾಡಿದ್ದಾರೆ. ಮಗನ ಸುಳಿವು ಸಿಗದೇ ಕೊನೆಗೆ ಸುಮ್ಮನಾಗಿದ್ದಾರೆ.

ಇದೀಗ ಎರಡು ದಶಕಗಳ ಬಳಿಕ ಆತ ಗುಜರಾತ್ ರಾಜ್ಯದ ಅಹ್ಮದಾಬಾದ್‌ ಬಳಿಯ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಬದಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಕುರುಗೋಡು ಭಾಗದ ವ್ಯಕ್ತಿಯೋರ್ವ ಗುಜರಾತ್‌ಗೆ ಹೋದ ವೇಳೆ ಆಕಸ್ಮಿಕವಾಗಿ ಶಂಕರಾಚಾರಿ ಇರುವ ಮಠಕ್ಕೆ ಭೇಟಿ ನೀಡಿದ್ದು, ಅವರ ಜೊತೆ ಮಾತನಾಡುವಾಗ ಸ್ವಾಮೀಜಿ ತಮ್ಮೂರಿನ ಶಂಕರಚಾರಿ ಎಂದು ಖಚಿತವಾಗಿದೆ. ಕೂಡಲೇ ಈತನ ಬಗ್ಗೆ ತಂದೆ-ತಾಯಿ ಗಮನಕ್ಕೆ ತಂದಿದ್ದು, ಪೋಷಕರು ಹಾಗೂ ಊರಿನವರು ಸಂತಸಗೊಂಡಿದ್ದಾರೆ. ಊರಿಗೊಮ್ಮೆ ಬಂದು ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ಶಂಕರಚಾಚಾರಿ ಕುರುಗೋಡಿಗೆ ಬರಲು ಒಪ್ಪಿಕೊಂಡಿದ್ದು, ಮೇ 26ರಂದು ಕುರುಗೋಡಿಗೆ ಆಗಮಿಸುವ ಸ್ವಾಮೀಜಿಯ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿದೆ.

ಶಂಕರಚಾರಿ ಬದುಕಿನ ಮಧ್ಯಂತರದ ಪಯಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆತ ಗುಜರಾತ್‌ಗೆ ಹೇಗೆ ತಲುಪಿದ? ಅಲ್ಲಿನ ಯಾವ ಗುರುಗಳ ಸಂಪರ್ಕಕ್ಕೆ ಹೇಗೆ ಬಂದ? ಮಠ ನಿರ್ಮಾಣದಲ್ಲಿ ಯಾರ ಪಾತ್ರವಿತ್ತು? ಸಾಮಾನ್ಯ ಕಾರ್ಮಿಕ ಜೀವನದಿಂದ ಧಾರ್ಮಿಕ ಕ್ಷೇತ್ರದ ಪ್ರಮುಖ ಸ್ಥಾನಕ್ಕೇರಿದ ಹಿನ್ನೆಲೆ ಏನು? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಶಂಕರಚಾರಿ ಊರು ಬಿಟ್ಟು 20 ವರ್ಷಗಳಾಗಿರುವುದರಿಂದ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತಿಲ್ಲ. ಹಿಂದಿ, ಇಂಗ್ಲೀಷ್‌ನಲ್ಲಿಯೇ ಸಂಭಾಷಣೆ ಮಾಡುತ್ತಾರೆ ಎಂದು ಶಂಕರಾಚಾರಿಯ ಸಂಬಂಧಿಕ ಶ್ರೀಧರಗಡ್ಡೆ ಗ್ರಾಮದ ಚಂದ್ರ ಆಚಾರಿ ಕನ್ನಡಪ್ರಭಕ್ಕೆ ತಿಳಿಸಿದರು.

ಎರಡು ದಶಕಗಳ ಬಳಿಕ ತಮ್ಮ ಏಕೈಕ ಪುತ್ರನನ್ನು ಕಾಣಲಿರುವ ತಂದೆ-ತಾಯಿ ಕಾತುರದಿಂದ ಕಾಯುತ್ತಿದ್ದಾರೆ. ಮಗನ ನೆನಪಿನಲ್ಲೇ ವರ್ಷಗಳನ್ನು ಕಳೆದಿದ್ದ ಕುಟುಂಬವೀಗ ಸಂತಸದ ಕ್ಷಣದಲ್ಲಿದೆ. ತಂದೆ-ತಾಯಿ ದರ್ಶನ ಮಾಡಿಕೊಂಡು ಶಂಕರಾಚಾರಿ ಮತ್ತೆ ಗುಜರಾತಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಶಂಕರಾಚಾರಿಯ ಜೀವನಗಾಥೆ ಕುರಿತ ಹೆಚ್ಚಿನ ಮಾಹಿತಿಯ ತೀವ್ರ ಕುತೂಹಲವಿದೆ.

ಕುರುಗೋಡಿನ ಚಂದ್ರಶೇಖರ ಆಚಾರಿ, ಚಂದ್ರಕಲಾ ದಂಪತಿಯ ಒಬ್ಬನೇ ಮಗನಾಗಿದ್ದ ಶಂಕರಾಚಾರಿ 18 ವರ್ಷನವನಿದ್ದಾಗ ಊರುಬಿಟ್ಟು ಹೋಗಿದ್ದ. ಗುಜರಾತ್‌ನಲ್ಲಿ ಕಾಳಿದೇವಿಯ ಮಠದ ಸ್ವಾಮೀಜಿಯಾಗಿ ಬದಲಾಗಿರುವ ಮಾಹಿತಿ 20 ವರ್ಷಗಳ ಬಳಿಕ ಗೊತ್ತಾಯಿತು. ಆತನನ್ನು ಸಂಪರ್ಕ ಮಾಡಿ ಊರಿಗೆ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಮಂಗಳವಾರ ಕುರುಗೋಡಿಗೆ ಬರುತ್ತಿದ್ದು, ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚಂದ್ರ ಆಚಾರಿ, ಶಂಕರಾಚಾರಿ ಸಂಬಂಧಿಕ, ಶ್ರೀಧರಗಡ್ಡೆ ಗ್ರಾಮ, ಬಳ್ಳಾರಿ ತಾಲೂಕು.

PREV
Read more Articles on
click me!

Recommended Stories

ಕೆಪಿಎಸ್ ಶಾಲೆಗಳಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲಿವೆಯೇ? ಬಸವರಾಜ ಹೊರಟ್ಟಿ ಆತಂಕ
ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​: ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ