
ಬೆಂಗಳೂರು (ನ.4): ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕುರುಬ ಸಮುದಾಯದ ಶಾಸಕ, ಮಾಜಿ ಸಚಿವ, ಮಾಜಿ ಸಂಸದ ಹುಲ್ಲಪ್ಪ ಯಮನಪ್ಪ ಮೇಟಿ ಅಲಿಯಾಸ್ ಎಚ್ ವೈ ಮೇಟಿ ಮಂಗಳವಾರ ನಿಧನರಾದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. 79 ವರ್ಷದ ಎಚ್‌ವೈ ಮೇಟಿ ಒಟ್ಟು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1989, 1992, 2004ರಲ್ಲಿ ಗಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್‌ವೈ ಮೇಟಿ 2013 ಹಾಗೂ 2023ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿದ್ದರು. 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, 2016ರಲ್ಲಿ ಅವರ ಅಶ್ಲೀಲ ಸಿಡಿ ಕೇಸ್ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದ್ದರಿಂದ ಅದೇ ವರ್ಷದ ಡಿಸೆಂಬರ್ 7ಕ್ಕೆ ರಾಜೀನಾಮೆ ನೀಡಿದ್ದರು.
ಕೊನೆಗೆ ಈ ಕೇಸ್‌ನಲ್ಲಿ ಎಚ್‌ವೈ ಮೇಟಿಗೆ ಕ್ಲೀನ್ ಚಿಟ್ ಸಿಕ್ಕರೂ ಸಹ ಅದೊಂದು ಕೇಸ್ ಅವರ ಜೀವನದಲ್ಲಿ ಕೊನೆಯವರೆಗೂ ಕಪ್ಪುಚುಕ್ಕೆಯಾಗಿ ಉಳಿದುಕೊಂಡು ಬಿಟ್ಟಿತ್ತು. ಅಶ್ಲೀಲ ಸಿಡಿ ಕಾರಣದಿಂದಾಗಿಯೇ ಅವರು 2017ರ ಚುನಾವಣೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ್ ವಿರುದ್ಧ ಸೋಲು ಕಂಡಿದ್ದರು.
2016ರ ಡಿಸೆಂಬರ್‌ನಲ್ಲಿ ಟಿವಿ ಮಾಧ್ಯಮಗಳಲ್ಲಿ ಎಚ್‌ವೈ ಮೇಟಿ ಅವರದ್ದು ಎನ್ನಲಾದ ವಿಡಿಯೋ ಪ್ರಸಾರವಾಗಲು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಮುಜುಗರಕ್ಕೆ ಈಡಾಯಿತು. ತಕ್ಷಣವೇ ಸಿಎಂ ನಿವಾಸಕ್ಕೆ ಧಾವಿಸಿದ ಎಚ್‌ವೈ ಮೇಟಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇದು ನನ್ನ ಮೇಲೆ ಮಾಡಲಾಗಿರುವ ಸಂಚು. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಸಿಎಂಗೆ ತಿಳಿಸುವ ಪ್ರಯತ್ನವನ್ನೂ ಮಾಡಿದ್ದರು.
ಆದರೆ, ವಿಡಿಯೋ ಕೇಸ್‌ನಿಂದ ಸಿದ್ದು ಮಾತ್ರ ಸಖತ್ ಸಿಟ್ಟಾಗಿದ್ದರು. ಸುಮ್ಮನೆ ಕುತ್ಕೋ ಎಂದು ಗದರಿದ್ದರು. '"ನೀವು ನನಗೆ ದ್ರೋಹ ಮಾಡಿದ್ದೀರಿ. ಈ ವಯಸ್ಸಿನಲ್ಲಿ ನಿಮಗೆ ಇದು ಅಗತ್ಯವಿತ್ತೇ?... ನಿಮಗೆ ನಾಚಿಕೆ ಆಗ್ಬೇಕು... ಇಂತಹ ಅನೈತಿಕ ಚಟುವಟಿಕೆಗಳಿಗೆ ನಾವು ಬಿಜೆಪಿ ನಾಯಕರನ್ನು ದೂಷಿಸುತ್ತಿದ್ದೆವು. ಈಗ, ನಾವು ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದೇವೆ" ಎಂದು ಮುಖ್ಯಮಂತ್ರಿ ಮೇಟಿಗೆ ಹೇಳಿದ್ದರು.
70ನೇ ವಯಸ್ಸಲ್ಲಿ ಎಚ್‌ವೈ ಮೇಟಿ ಅವರು ಲೈಂಗಿಕ ದೌರ್ಜನ್ಯ ಮಾಡಿದ್ದಾದರೂ ಎಲ್ಲಿ ಎನ್ನುವ ಬಗ್ಗೆ ಸಾಕಷ್ಟು ಭಿನ್ನ ಆವೃತ್ತಿಗಳು ಬಂದಿದ್ದವು. ಕೆಲವರು ಪ್ರಕಾರ, ಬಾಗಲಕೋಟೆಯ ನಿವಾಸದಲ್ಲಿಯೇ ಈ ಘಟನೆ ನಡೆದಿತ್ತು ಎನ್ನಲಾಗಿದ್ದರೆ, ಇನ್ನೊಂದು ಮೂಲಗಳ ಪ್ರಕಾರ ವಿಧಾನಸೌಧದಲ್ಲಿರುವ ಅವರ ಪೂರ್ವ ಕೊಠಡಿಯಲ್ಲಿ ನಡೆದಿತ್ತು ಎಂದು ವರದಿಯಾಗಿತ್ತು.
ಕುರುಬ ಸಮುದಾಯದ ಮೇಟಿ ಸಿದ್ಧರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದರು. 1994 ಮತ್ತು 1996ರ ಅವಧಿಯಲ್ಲಿಎಚ್‌ಡಿ ದೇವೇಗೌಡ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕೆಲಸ ಮಾಡಿದ್ದ ಮೇಟಿ, 1996ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಗೆದ್ದ ಬಳಿಕ 2016ರ ಜೂನ್‌ನಲ್ಲಿ ಅವರನ್ನು ಅಬಕಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.
ಮೊದಲಿಗೆ ಸಿಡಿಯಲ್ಲಿರುವುದು ತಾನಲ್ಲ ಎಂದಿದ್ದ ಮಹಿಳೆ, ಕೊನೆಗೆ ಯು-ಟರ್ನ್ ಹೊಡೆದು ವಿಡಿಯೋದಲ್ಲಿರುವುದು ತಾನೇ ಎಂದು ಹೇಳಿದ್ದಳು. ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿ ಪೊಲೀಸ್ ರಕ್ಷಣೆಯನ್ನೂ ಕೋರಿದ್ದಳು. ಮೇಟಿ ಅವರ ವಯಸ್ಸಿನ ಕಾರಣದಿಂದಾಗಿ ಅವರಿಗೆ "ಅನುಮಾನದ ಲಾಭ" ನೀಡಬೇಕೆಂದು ಸಿದ್ದರಾಮಯ್ಯ ಅವರ ಸಂಪುಟದ ಹಲವಾರು ಸಚಿವರು ಬೆಂಬಲ ಸೂಚಿಸಿದ್ದರು.
ಲೈಂಗಿಕ ಹಗರಣ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಎಚ್‌ವೈ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದ ಸಂಸ್ಥೆ, ಈ ವಿಡಿಯೋವನ್ನು ತಿರುಚಲಾಗಿದೆ ಎಂದು ವರದಿ ನೀಡಿತ್ತು. ಇದಲ್ಲದೆ, ಮೇಟಿ ವಿರುದ್ಧ ಯಾವುದೇ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿಲ್ಲ ಎಂದು ಸಿಐಡಿ ಹೇಳಿತ್ತು.
"ಸಿಐಡಿ ನನಗೆ ಕ್ಲೀನ್ ಚಿಟ್ ನೀಡಿರುವುದರಿಂದ ನನಗೆ ಸಂತೋಷ ಮತ್ತು ನಿರಾಳವಾಗಿದೆ. ನಾನು ಅಥವಾ ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಿಲ್ಲ. ಸಿಡಿ ತಿರುಚಲ್ಪಟ್ಟಿದೆ ಎಂದು ವರದಿ ದೃಢಪಡಿಸುತ್ತದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಾನು ಯಾವಾಗಲೂ ಹೇಳಿಕೊಂಡು ಬಂದಿದ್ದೇನೆ ಮತ್ತು ಈಗ ಅದು ಸಾಬೀತಾಗಿದೆ," ಎಂದು ಎಚ್‌ವೈ ಮೇಟಿ ಆಗ ಹೇಳಿದ್ದರು.