Mysuru : 50ಕ್ಕೂ ಹೆಚ್ವು ಮನೆಗಳ ಖಾತೆ ಈವೆರೆಗೆ ಆಗಿಲ್ಲ

By Kannadaprabha News  |  First Published Oct 28, 2022, 5:32 AM IST

ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಸದಸ್ಯರು ನಾಗರಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.


  ಹುಣಸೂರು (ಅ.28): ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಸದಸ್ಯರು ನಾಗರಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.

25ನೇ ವಾರ್ಡ್‌ ಸದಸ್ಯ ಮಂಜು ಮಾತನಾಡಿ ತಮ್ಮ ವಾರ್ಡ್‌ (Ward) ವ್ಯಾಪ್ತಿಯ ಚಿಕ್ಕಹುಣಸೂರು ಪ್ರದೇಶವು 1996ರಲ್ಲಿ ಗೋವಿಂದನಹಳ್ಳಿ ಪಂಚಾಯ್ತಿಯಿಂದ ಸೇರ್ಪಡೆಗೊಂಡಿದ್ದು, ಈ ಪ್ರದೇಶದಲ್ಲಿ ಕಳೆದ 80-90ವರ್ಷಗಳಿಂದ ವಾಸಿಸುತ್ತಿರುವ 50ಕ್ಕೂ ಹೆಚ್ವು ಬಡಕುಟುಂಬಗಳ ಮನೆಗಳ ಖಾತೆ ಈವೆರೆಗೆ ಆಗಿಲ್ಲ. ಪಂಚಾಯಿತಿಯಿಂದ ಕೇವಲ ಮಾಲೀಕರ ಹೆಸರು ಮಾತ್ರ ದಾಖಲಾಗಿದೆ. ನಿವೇಶನದ ಅಳತೆಯಾಗಲೀ ಇನ್ಯಾವುದೇ ದಾಖಲೆಯಿಲ್ಲ. ಹಾಗಾಗಿ ನಗರಸಭೆ ವತಿಯಿಂದ ಈ ಮನೆಗಳ ಸರ್ವೇ ಕಾರ್ಯ ನಡೆಸಿ ಇ ಸ್ವತ್ತು ಮಾಡಿಕೊಡುವ ಮೂಲಕ ಸರ್ಕಾರದ ಸವಲತ್ತುಗಳನ್ನು ವಿತರಿಸಲು ಅವಕಾಶ ಕಲ್ಪಿಸಬೇಕೆಂದು 9 ತಿಂಗಳುಗಳಿಂದ ಸತತ ಮೂರು ಸಾಮಾನ್ಯಸಭೆಯಲ್ಲಿ ವಿಷಯ ಮಂಡಿಸಿದ್ದೇನೆ. ನಾನು ಸದಸ್ಯನಾಗಿ ಎರಡು ವರ್ಷವೇ ಕಳೆದಿದೆ. ಬಡವರಿಗೆ ಸಹಾಯ ಮಾಡಲಾಗದೇ ಅಸಹಾಯಕನಾಗಿದ್ದೇನೆ. ಈ ಬಾರಿ ಇದಕ್ಕೆ ಸ್ಪಷ್ಟಉತ್ತರ ನೀಡಲೇಬೇಕೆಂದು ಹಟ ಹಿಡಿದರು.

Latest Videos

undefined

ನಗರಸಭೆಯ ಮುಖ್ಯ ಲೆಕ್ಕಾಧಿಕಾರಿ ಪುಟ್ಟರಾಜು ಮಾತನಾಡಿ, ಅನುಭೋಗದಲ್ಲಿರುವ ಕುಟುಂಬದ ವಸತಿ ಪ್ರದೇಶವನ್ನು ನಗರಸಭೆಯಿಂದ ಗುರುತಿಸಿ ಅಕ್ಕಪಕ್ಕದವರಿಂದ ನಿರಪೇಕ್ಷಣೆಯ ಕುರಿತು ಅಫಿಡವಿಟ್‌ ಪ್ರಮಾಣಪತ್ರ ಮಾಡಿಸಿ ಆ ಕುಟುಂಬಗಳಿಗೆ ಇ ಸ್ವತ್ತು ಮಾಡಿಕೊಡಲು ಅವಕಾಶವಿದೆ ಎಂದರು. ಪ್ರಭಾರ ಪೌರಾಯುಕ್ತೆ ಎಲ್‌. ರೂಪ ಇನ್ನೆಡರು ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ನೀಡಿದ ಭರವಸೆಗೆ ಸದಸ್ಯ ತೃಪ್ತರಾದರು.

ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ ಮಾತನಾಡಿ, ಧಾರಾಕಾರ ಮಳೆಗೆ ನಗರದ ಎಸ್‌ಜೆ ರಸ್ತೆ, ಬಜಾರ್‌ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲೇ ಗುಂಡಿಮಯವಾಗಿದೆ. ಓಡಾಡಲೂ ಆಗದಂತಹ ಪರಿಸ್ಥಿತಿ ಇದೆ. ವರ್ಷದ ಹಿಂದೆ ಒಂದು ಕೋಟಿ ರು. ವೆಚ್ಚದಡಿ ನಿರ್ಮಾಣಗೊಂಡ ಎಸ್‌ಜೆ ರಸ್ತೆಯಂತೂ ಅತ್ಯಂತ ಕಳಪೆ ಕಾಮಗಾರಿಯಿಂದ ಕೂಡಿದ್ದು, ಜನರು ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗುಂಡಿಯಾಗಿರುವ ಪ್ರದೇಶಕ್ಕೆ ಕನಿಷ್ಟತೇಪೆ ಕಾರ್ಯವನ್ನಾದರೂ ಮಾಡಿಸಬೇಕು. ಮೂರು ತಿಂಗಳ ಹಿಂದೆ 30 ಲಕ್ಷ ರು. ವೆಚ್ಚದಡಿ ಹಾಕಿದ್ದ ಪ್ಯಾಚ್‌ಅಪ್‌ ಕಾರ್ಯ ಪ್ರಯೋಜನಕ್ಕೆ ಬಾರದಂತಾಗಿದೆ. ನಾಗರಿಕರು ಸಮಸ್ಯೆಗೆ ನಾವೆಲ್ಲರೂ ಉತ್ತರದಾಯಿಯಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಜರೂರಾಗಿ ತಾತ್ಕಾಲಿಕ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ಗೀತಾ ನಿಂಗರಾಜು ಉತ್ತರಿಸಿದರು.

ಅಂಬೇಡ್ಕರ್‌ ಪುತ್ಥಳಿ ಸ್ಥಾಪಿಸಿ

ತಾಲೂಕಿನ ವಿವಿಧ ಸಂಘಟನೆಗಳು ನಗರದ ಅಂಬೇಡ್ಕರ್‌ ಭವನದ ಮುಂಭಾಗ ಅಂಬೇಡ್ಕರ್‌ ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿರುವ ಕುರಿತು ಚರ್ಚಿಸಿದ ಸದಸ್ಯ ರಮೇಶ್‌, ಈ ಕುರಿತು ಎಲ್ಲ ಸದಸ್ಯರು ಸಹಮತ ಹೊಂದಿದ್ದು, ಅಲ್ಲೇ ಸ್ಥಾಪಿಸಲು ಕ್ರಮಕೈಗೊಳ್ಳಿರೆಂದು ಅಧ್ಯಕ್ಷರಿಗೆ ಕೋರಿದಾಗ, ಪೌರಾಯುಕ್ತೆ ಮಾತನಾಡಿ, ಸರ್ಕಾರದಿಂದ 2012ರಲ್ಲಿ ಮಹನೀಯರ ಪುತ್ಥಳಿ ಸ್ಥಾಪನೆಗೆ ಹಲವಾರು ನಿರ್ದೇಶನಗಳನ್ನು ನೀಡಿದ್ದು, ಅದರಂತೆ ನಡೆದುಕೊಳ್ಳಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರಮೇಶ್‌, ಅಂಬೇಡ್ಕರ್‌ ಭವನದ ಮುಂಭಾಗದ ಜಾಗವೆಂದು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕಾರ್ಯ ಮಾಡಿರಿ. ನಂತರ ಸರ್ಕಾರದ ಮಟ್ಟದಲ್ಲಿ ಗಮನಿಸೋಣವೆಂದು ಹೇಳಿದಾಗ ಎಲ್ಲ ಸದಸ್ಯರು ಸಮ್ಮತಿ ಸೂಚಿಸಿದರು.

ನಗರದ ಡಿವೈಎಸ್‌ಪಿ ಕಚೇರಿ ಮುಂಬಾಗ ನಂದಿನಿ ಹಾಲು ಮಾರಾಟ ಕೇಂದ್ರಕ್ಕೆ ನಿವೇಶನ ಕೋರಿರುವ ಕುರಿತು ಪ್ರಸ್ತಾಪಿಸಿದ ಸದಸ್ಯ ಸ್ವಾಮಿಗೌಡ, ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಹಾಲು ಕೇಂದ್ರಗಳ ಬಾಡಿಗೆ ನಗರಸಬೆಗ ಸರಿಯಾಗಿ ಪಾವತಿಯಾಗುತ್ತಿಲ್ಲ. ಬಾಡಿಗೆ ಪಾವತಿಗೆ ಕ್ರಮವಹಿಸಿರಿ ಹಾಗೂ ಯಾವುದೇ ಕಾರಣಕ್ಕೂ ಬಾಡಿಗೆ ಪಾವತಿಯಾಗದೇ ನಂದಿನಿ ಹಾಲು ಕೇಂದ್ರಕ್ಕೆ ಜಾಗ ನೀಡಬಾರದೆಂದು ಒತ್ತಾಯಿಸಿದಾಗ ಸಭೆ ಅನುಮೋದನೆ ನೀಡಿತು.

ನಗರದ ಕಾಫಿ ವರ್ಕ್ಸ್ ವಸತಿ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಕಟ್ಟಡ ಪರವಾನಗಿ ಮತ್ತು ವಿದ್ಯುತ್‌ ಎನ್‌ಒಸಿ ಪಡೆಯಲು 7-8 ಸಾವಿರ ರು. ಶುಲ್ಕ ವಿಧಿಸಿದ್ದೀರಲ್ಲ ಯಾಕೆ? ಬಡವರು ಬದುಕಬಾರದೇ? ಕಾಫಿ ವರ್ಕ್ಸ್ ವಸತಿ ಪ್ರದೇಶದ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆ ಕೂಡ ಸರಿಯಾಗಿ ಆಗುತ್ತಿಲ್ಲ. ರಸ್ತೆ, ಚರಂಡಿಯಿಲ್ಲ. ಬಡಕುಟುಂಬಕ್ಕೆ ಏಕೆ ಶುಲ್ಕದ ಬರೆ ಎಳೆಯತ್ತೀರಿ? ಕೂಡಲೇ ಶುಲ್ಕ ಪರಿಷ್ಕರಿಸಿ ಮೂಲಸೌಕರ್ಯ ಕಲ್ಪಿಸರೆಂದು ಸದಸ್ಯ ಹರೀಶ್‌ ಅಧ್ಯಕ್ಷರ ಮುಂಭಾಗಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪರಿಶೀಲಿಸುವುದಾಗಿ ಪ್ರಭಾರ ಪೌರಾಯುಕ್ತೆ ಸಮಾಧಾನಿಸಿದರು.

1.34 ಕೋಟಿ ರೂ. ಕಂದಾಯ ಬಾಕಿ: ಪಟ್ಟಣದ ಎಸ್‌ಸಿವಿಡಿಎಸ್‌ ಜನತಾ ಚಿತ್ರಮಂದಿರವು ನಗರಸಭೆ ಆಸ್ತಿಯಾಗಿದ್ದು, ಚಿತ್ರಮಂದಿರದ ಬಾಡಿಗೆದಾರ 2015ರಿಂದ ಬಾಡಿಗೆ ಪಾವತಿಸದೇ ಒಟ್ಟು 1.34 ಕೋಟಿ ರು. ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು 3 ಬಾರಿ ನೋಟೀಸ್‌ ಮತ್ತು ಇದೀಗ ಲಾಯರ್‌ ನೋಟೀಸ್‌ ನೀಡಲಾಗಿದೆ ಎಂದು ಕಂದಾಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದಾಗ, ಮೊದಲು ಕಟ್ಟಡವನ್ನು ನಗರಸಭೆ ಸುಪರ್ದಿಗೆ ಪಡೆಯಬೇಕು. ಕಂದಾಯ ವಸೂಲಿಗೆ ನಿರ್ದಾಕ್ಷಿಣ್ಯ ಕ್ರಮವಹಿಸರೆಂದು ಸದಸ್ಯ ರಮೇಶ್‌ ಒತ್ತಾಯಿಸಿದರು.

ಸ್ವಾಮಿಗೌಡ ಹುಡಾ ಸದಸ್ಯ: ಹುಣಸೂರು ನಗರ ಪ್ರಾಧಿಕಾರದ ಸದಸ್ಯರಾಗಿ ವಾರ್ಡ್‌ ನಂ. 5ರ ಸದಸ್ಯ ಸ್ವಾಮಿಗೌಡರನ್ನು ನೇಮಿಸಲಾಗಿದೆ ಎಂದು ನಗರಸಭಾಧ್ಯಕ್ಷೆ ಗೀತಾ ನಿಂಗರಾಜು ಸಭೆಯಲ್ಲಿ ಘೋಷಿಸಿದರು. ಈ ಹಿಂದೆ ಸದಸ್ಯರಾಗಿದ್ದ 8ನೇ ವಾರ್ಡಿನ ಪಕ್ಷೇತರ ಸದಸ್ಯ ಎಚ್‌.ಪಿ. ಸತೀಶ್‌ ಕುಮಾರ್‌ರ ಅವಧಿ ಪೂರ್ಣಗೊಂಡ ಹಿನ್ನೆಲೆ ಸ್ವಾಮಿಗೌಡರನ್ನು ನೇಮಿಸಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು. ಸದಸ್ಯರು ಸ್ವಾಮಿಗೌಡರನ್ನು ಅಭಿನಂದಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್‌ ಕುಮಾರಸ್ವಾಮಿ, ಹರೀಶ್‌, ಅನುಷಾ, ಸೌರಭ ಸಿದ್ದರಾಜು, ವಿವೇಕ್‌, ದೇವರಾಜ್‌, ಮಾಲಿಕ್‌ ಪಾಷಾ, ರಾಣಿ ಪೆರುಮಾಳ್‌, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

click me!