Mysuru :ಕಾಂಗ್ರೆಸ್‌ ಜೊತೆ 3 ಪಕ್ಷೇತರು : ಅಧಿಕಾರಕ್ಕಾಗಿ ಹೆಚ್ಚಿದ ಪೈಪೋಟಿ

By Kannadaprabha NewsFirst Published Oct 11, 2021, 11:50 AM IST
Highlights
  • ಹುಣಸೂರು ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ 
  • ಆಡಳಿತಾರೂಢ ಕಾಂಗ್ರಸ್‌ನಲ್ಲಿ ಅಧ್ಯಕ್ಷಗಾದಿಗಾಗಿ ಬಿರುಸಿನ ಪೈಪೋಟಿ

 ಹುಣಸೂರು (ಅ.11):  ಹುಣಸೂರು (Hunsur) ನಗರಸಭೆಯ (City Municipal Council) ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ (Election) ನಡೆಯಲಿದ್ದು, ಆಡಳಿತಾರೂಢ ಕಾಂಗ್ರಸ್‌ನಲ್ಲಿ (Congress) ಅಧ್ಯಕ್ಷಗಾದಿಗಾಗಿ ಬಿರುಸಿನ ಪೈಪೋಟಿ ಏರ್ಪಟ್ಟಿದೆ.

ವರ್ಷದ ಹಿಂದೆ ನಗರಸಭೆ ನೂತನ ಸದಸ್ಯರು ಆಯ್ಕೆಯಾದ ನಂತರ ಸಾಮಾನ್ಯ ಮಹಿಳೆಗ ಮೀಸಲಾಗಿದ್ದ ಅಧ್ಯಕ್ಷಗಾದಿಗೆ ಕಾಂಗ್ರೆಸ್‌ನ ಅನುಷಾ ಎಸ್‌. ರಾಘು ಆಯ್ಕೆಯಾಗಿದ್ದರು. ಪಕ್ಷದ ನಿರ್ಧರಿಸಿದ್ದಂತೆ 6 ತಿಂಗಳ ಅಧಿಕಾರ ನಡೆಸಿ ಅಧ್ಯಕ್ಷ ಸ್ಥಾನಕ್ಕೆ (President Post) ರಾಜೀನಾಮೆ ಸಲ್ಲಿಸಿದ್ದರು. ಆದರೆ ಕೋವಿಡ್‌ 19ರ (Covid 19) 2ನೇ ಅಲೆ ಅರಂಭಗೊಂಡ ಹಿನ್ನೆಲೆ ಅಧ್ಯಕ್ಷರಾಗಿ ಅವರೇ ಮುಂದುವರೆಯಲು ಶಾಸಕ ಎಚ್‌.ಪಿ. ಮಂಜುನಾಥ್‌ (HP Manjunath) ಸೂಚಿಸಿದ್ದರು. ಇದೀಗ ಕೋವಿಡ್‌ ನಿಯಮಗಳು ಸಡಿಲಗೊಂಡಿರುವ ಹಿನ್ನೆಲೆ ಉಪವಿಭಾಗಾಧಿಕಾರಿ ವರ್ಣಿತ್‌ ನೇಗಿ ಚುನಾವಣೆ ಘೋಷಿಸಿದ್ದಾರೆ.

ಕ್ಷೇತ್ರಕ್ಕೆ ಬಂಪರ್ : ಸಿಎಂ ಅಭಿನಂದನೆ ತಿಳಿಸಿದ ಹುಣಸೂರು ಕೈ ಶಾಸಕ

ಅಧ್ಯಕ್ಷಗಾದಿಗಾಗಿ ಕಾಂಗ್ರೆಸ್‌ನಲ್ಲಿ 15ನೇ ವಾರ್ಡಿನ ಸೌರಭ ಸಿದ್ದರಾಜು, 9ನೇ ವಾರ್ಡಿನ ಸಮೀನಾ ಪರ್ವೀನ್, 29ನೇ ವಾರ್ಡಿನ ಪ್ರಿಯಾಂಕಾ ಥಾಮಸ್‌ ಮತ್ತು 24ನೇ ವಾರ್ಡಿನ ಗೀತಾ ನಿಂಗರಾಜು ಪೈಪೋಟಿಗಿಳಿದಿದ್ದಾರೆ. ಈ ಪೈಕಿ ಕಳೆದ ನಗರಸಭೆ ಕಾಲಾವಧಿಯಲ್ಲಿ ಅಧ್ಯಕ್ಷಗಾದಿಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ ಸೌರಭ ಸಿದ್ದರಾಜುಗೆ ಎರಡೆರಡು ಬಾರಿ ಸ್ವಲ್ಪದರಲ್ಲೇ ಗಾದಿ ಕೈತಪ್ಪಿತ್ತು. ಹಾಗಾಗಿ ಈ ಬಾರಿ ಅವರನ್ನೇ ಅಧ್ಯಕ್ಷರನ್ನಾಗಿಸಬೇಕೆಂಬ ಹಂಬಲ ಶಾಸಕ ಎಚ್‌.ಪಿ. ಮಂಜುನಾಥ್‌ರದ್ದಾಗಿದೆ. ಆದರೆ ಮಿಕ್ಕವರೂ ಅಧಿಕಾರಕ್ಕಾಗಿ ಪ್ರಬಲ ಹೋರಾಟವನ್ನೇ ನಡೆಸಿದ್ದಾರೆ. ಶಾಸಕರ (MLA) ನಿರ್ಣಯವೇ ಅಂತಿಮ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಗರಸಭೆಯ ಒಟ್ಟು 31 ಸದಸ್ಯರ ಪೈಕಿ 14 ಕಾಂಗ್ರೆಸ್‌, 7 ಜೆಡಿಎಸ್‌ (JDS), 3 ಬಿಜೆಪಿ (BJP), 2 ಎಸ್‌ಡಿಪಿಐ (SDPI) ಮತ್ತು 5 ಮಂದಿ ಪಕ್ಷೇತರರು ಇದ್ದಾರೆ. ಶಾಸಕ ಮತ್ತು ಸಂಸದರಿಗೆ ಮತದಾನದ ಹಕ್ಕಿದ್ದು, ಒಟ್ಟು 33 ಸದಸ್ಯ ಬಲ ಹೊಂದಿದ್ದು, ಬಹುಮತಕ್ಕಾಗಿ 17 ಸದಸ್ಯರ ಬೆಂಬಲದ ಅಗತ್ಯವಿದೆ. ಕಾಂಗ್ರಸ್‌ನೊಂದಿಗೆ ಈಗಾಗಲೇ ಮೂವರು ಪಕ್ಷೇತರರು ಗುರುತಿಸಿಕೊಂಡಿದ್ದು, ಸದಸ್ಯ ಬಲ 18 ಕ್ಕೇರಿದೆ.

9.30ಕ್ಕೆ ನಾಮಪತ್ರ ಸಲ್ಲಿಕೆ: ಚುನಾವಣೆ ನಗರಸಭೆ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಬೆಳಗ್ಗೆ 9.30 ರಿಂದ 10 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಂತರ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಂಡು  ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಲಾಗುವುದೆಂದು ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿ ವರ್ಣಿತ್‌ ನೇಗಿ ತಿಳಿಸಿದ್ದಾರೆ.

click me!