ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತಕ್ಕೆ ಮಾನವನ ಹಸ್ತಕ್ಷೇಪ ಕಾರಣ

By Kannadaprabha NewsFirst Published Dec 18, 2020, 10:52 AM IST
Highlights

ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ವಿಜ್ಞಾನಿಗಳಿಂದ ವರದಿ| ಗಜಗಿರಿ ಬೆಟ್ಟದ ಕೆಳಭಾಗ, ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಿತಿ ಮೀರಿದ ಮಾನವ ಹಸ್ತಕ್ಷೇಪ| 

ಮಡಿಕೇರಿ(ಡಿ.18): ಭಾರಿ ಮಳೆಯಿಂದ ಆಗಸ್ಟ್‌ ತಿಂಗಳಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದ ದುರಂತ ಮತ್ತು ಅದರಿಂದ ಸಂಭವಿಸಿದ ಮಾನವ ಪ್ರಾಣ ಹಾನಿ ಮತ್ತು ಅದಕ್ಕೆ ಕಾರಣವಾದ ಅಂಶಗಳ ಕುರಿತು ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ವಿಜ್ಞಾನಿಗಳು ಕೊಡಗು ಜಿಲ್ಲಾಡಳಿತಕ್ಕೆ 16 ಪುಟಗಳ ಪ್ರಾಥಮಿಕ ವೈಜ್ಞಾನಿಕ ವರದಿಯನ್ನು ಸಲ್ಲಿಸಿದ್ದಾರೆ.

ಹಳೆಯ ಭೂ ಕುಸಿತದಲ್ಲಿ ಉಂಟಾದ ಬೆಟ್ಟದ ಮೇಲಿನ ಬಿರುಕುಗಳು, ಅರಣ್ಯ ಇಲಾಖೆಯ ಕಂದಕ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ, ಅನಗತ್ಯ ಮಾನವ ಹಸ್ತಕ್ಷೇಪ, ಸಾಮಾನ್ಯಕ್ಕಿಂತ ಅಧಿಕ ಮಳೆ ಇವುಗಳಿಂದಾಗಿಯೇ ಆಗಸ್ಟ್‌ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ತಜ್ಞರು ಬಹಿರಂಗಪಡಿಸಿದ್ದಾರೆ.

ಆಗಸ್ಟ್‌ 6ರಂದು ತಲಕಾವೇರಿಯಲ್ಲಿ ಸಂಭವಿಸಿದ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಕೋರಿಕೆ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ತಜ್ಞರಾದ ಕಪಿಲ್‌ ಸಿಂಗ್‌ ಹಾಗೂ ಕಮಲ್‌ ಕುಮಾರ್‌ ಅವರ ತಂಡ ಆ. 14 ಮತ್ತು 15ರಂದು ಭೇಟಿ ನೀಡಿದ್ದರು. ಭೂಕುಸಿತ ಸ್ಥಳದಲ್ಲಿ ಅಧ್ಯಯನ ನಡೆಸಿದ ಇವರುಗಳು ದುರ್ಘಟನೆಗೆ ಕಾರಣವಾದ ಅಂಶಗಳು, ಈ ಹಿಂದೆ ಅದೇ ಸ್ಥಳದಲ್ಲಿ ನಡೆದಿದ್ದ ಅಲ್ಪ ಪ್ರಮಾಣದ ಭೂ ಕುಸಿತದ ಇತಿಹಾಸ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

ಬ್ರಹ್ಮಗಿರಿ ಬೆಟ್ಟಕುಸಿತ: ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆ!

ತಲಕಾವೇರಿಯಲ್ಲಿ ಆಗಸ್ಟ್‌ 6ರಂದು ಸಂಭವಿಸಿದ ಭೂ ಕುಸಿತಕ್ಕೂ ಮೊದಲು 3 ಬಾರಿ ಅಲ್ಲಿ ಇಂಥಹದ್ದೇ ಘಟನೆಗಳು ನಡೆದಿದೆ ಎಂದು ತಮ್ಮ ವರದಿಯಲ್ಲಿ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ ಮೊದಲ ಭೂ ಕುಸಿತ 2007ರ ಜೂನ್‌ 30ಕ್ಕೆ ಸಂಭವಿಸಿದರೆ, 2ನೇ ಭೂ ಕುಸಿತ 2018ರಲ್ಲಿ ಹಾಗೂ 3ನೇ ಘಟನೆ 2019ರ ಆಗಸ್ಟ್‌ 19ಕ್ಕೆ ನಡೆದಿದೆ ಎಂದು ಅಧ್ಯಯನ ವರದಿಯ ವಿವರಗಳನ್ನು ದಾಖಲೆಯಾಗಿ ನೀಡಿದ್ದಾರೆ. ಈ ಎಲ್ಲ ಭೂ ಕುಸಿತಗಳ ಮುಂದುವರಿದ ಭಾಗವಾಗಿ 2020ರ ಆಗಸ್ಟ್‌ 6ರಂದು ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ತಜ್ಞರು ವರದಿಯಲ್ಲಿ ವಿವರಿಸಿದ್ದಾರೆ. ಆ.6ರ ಮುಂಜಾನೆಯ 2.30ರ ಸಮಯದಲ್ಲಿ 45 ಮೀ. ಎತ್ತರದಿಂದ 50 ಮೀ ಅಗಲದಲ್ಲಿ 160 ಮೀ, ಉದ್ದಕ್ಕೆ ಭೂ ಕುಸಿತ ಆಗಿದ್ದು, 2 ಕಿ.ಮೀ. ದೂರದ ತನಕ ಭೂ ಕುಸಿತದ ಪರಿಣಾಮ ವಿಸ್ತಾರ ಆಗಿದೆ ಎಂದು ವಿವರಿಸಲಾಗಿದೆ. ಕಲ್ಲಿನ ಪದರದ ಮೇಲಿನ ಮಣ್ಣು ಭೂ ಕುಸಿತದಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿರುವುದನ್ನು ದಾಖಲಿಸಲಾಗಿದೆ. 2007ರಲ್ಲಿ ಭೂಕುಸಿತ ನಡೆದಾಗ ಜೆಎಸ್‌ಐ ಸಂಸ್ಥೆಯ ಹಿರಿಯ ಭೂ ವಿಜ್ಞಾನಿ ಎ.ಕೆ. ಶರ್ಮ ಎಂಬವರು ಘಟನಾ ಸ್ಥಳದಲ್ಲಿ ಅಧ್ಯಯನ ನಡೆಸಿ ಬೆಟ್ಟದ ಮೇಲಿನ ಬಿರುಕುಗಳು ಭವಿಷ್ಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿರುವುದನ್ನು ಕೂಡ ಕಮಲ್‌ ಕುಮಾರ್‌ ಮತ್ತು ಕಪಿಲ್‌ ಸಿಂಗ್‌ ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಘಟನೆಯಲ್ಲಿ ತಲಕಾವೇರಿಯ ಹಿರಿಯ ಅರ್ಚಕ ಟಿ.ಎಸ್‌, ನಾರಾಯಣಾಚಾರ್‌ ಸೇರಿ ಐವರು ಸಾವನ್ನಪ್ಪಿದ್ದು, 6 ಜಾನುವಾರು, 1 ನಾಯಿ ಕೂಡ ಮೃತಪಟ್ಟಿತ್ತು. 2 ಮನೆ, 1 ದನದ ಕೊಟ್ಟಿಗೆ ಮಣ್ಣಿನಡಿಗೆ ಸೇರಿವೆ. ಕೆಳಭಾಗದ ಕಂದಕದಲ್ಲಿರುವ ಅರಣ್ಯ ಪ್ರದೇಶಕ್ಕೂ ಹಾನಿಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಭೂ ಕುಸಿತಕ್ಕೆ ಕಾರಣವಾದ ಅಂಶಗಳನ್ನು ಕೂಡ ಜಿಎಸ್‌ಐ ತಜ್ಞರು ವಿವರಿಸಿದ್ದಾರೆ. ಗಜಗಿರಿ ಬೆಟ್ಟದ ಕೆಳಭಾಗ, ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಿತಿ ಮೀರಿದ ಮಾನವ ಹಸ್ತಕ್ಷೇಪ ನಡೆದಿದೆ. ಅವೈಜ್ಞಾನಿಕ ನಿರ್ಮಾಣಗಳು ಬೆಟ್ಟವನ್ನು ದುರ್ಬಲಗೊಳಿಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
 

click me!