ಕೊಪ್ಪಳ: ಅನ್‌ಲಾಕ್‌ ಆದ್ರೂ ಭಕ್ತರಿಗೆ ದರ್ಶನ ನೀಡಿದ ಹುಲಿಗೆಮ್ಮ..!

By Kannadaprabha News  |  First Published Sep 11, 2020, 11:58 AM IST

ಅನ್‌ಲಾಕ್‌ ಆಗಿದ್ದರೂ ತೆರೆಯದ ಹುಲಿಗೆಮ್ಮ ದೇವಸ್ಥಾನ| ಕೊಪ್ಪಳ ತಾಲೂಕಿನಲ್ಲಿರುವ ಐತಿಹಾಸಿಕ ಹುಲಿಗೆಮ್ಮ ದೇವಾಲಯ| ಅನ್‌ಲಾಕ್‌ ಆಗಿದ್ದರಿಂದ ಆಗಮಿಸುತ್ತಿರುವ ಭಕ್ತರು| ನದಿ ದಡದಲ್ಲಿ, ದೇವಸ್ಥಾನದ ಸುತ್ತಮುತ್ತಲಿಂದಲೇ ಅಮ್ಮನಿಗೆ ಪೂಜೆ| ಮಾಸಾಂತ್ಯ​ದವರೆಗೂ ದೇವಸ್ಥಾನಕ್ಕೆ ಬೀಗ| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.11): ಉತ್ತರ ಕರ್ನಾಟಕ ಅಷ್ಟೇ ಅಲ್ಲ, ನಾನಾ ರಾಜ್ಯದಲ್ಲಿಯೂ ಅಪಾರ ಭಕ್ತರನ್ನು ಹೊಂದಿರುವ ಕೊಪ್ಪಳದ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಈಗಲೂ ಪ್ರವೇಶ ನಿಷಿದ್ಧ. ಅನ್‌ಲೈಕ್‌ 4 ಬಳಿಕವೇ ದೇವಸ್ಥಾನವನ್ನು ತೆರೆಯದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಭಕ್ತರು ಮಾತ್ರ ವಿವಿಧ ರೀತಿಯಲ್ಲಿ ಹುಲಿಗೆಮ್ಮ ದೇವಿಗೆ ಪೂಜಿಸುವುದನ್ನು ಪ್ರಾರಂಭಿಸಿದ್ದಾರೆ.

Tap to resize

Latest Videos

ದೇವಸ್ಥಾನದ ಇಬ್ಬರು ಪೂಜಾರಿಗಳಿಗೆ ಹಾಗೂ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುವ ಕೆಲವರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೆ ಹುಲಿಗೆಮ್ಮ ದೇವಸ್ಥಾನಕ್ಕೆ ರಾಜ್ಯ ಮತ್ತು ನಾನಾ ರಾಜ್ಯದಿಂದ ಭಕ್ತರು ಬರುವುದರಿಂದ ದೇವಸ್ಥಾನದ ಆವರಣವೇ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತದೆ. ಹೀಗಾಗಿ, ಇದನ್ನು ತಪ್ಪಿಸಲು ಆಡಳಿತ ಮಂಡ​ಳಿ ಹುಲಿಗೆಮ್ಮ ದೇವಸ್ಥಾನ ತೆರೆಯದಿರಲು ನಿರ್ಧರಿಸಿದ್ದು, ಸೆ. 31ರ ವರೆಗೂ ಮುಚ್ಚಿರಲಿದೆ ಎಂದು ವ್ಯಾಪಕ ಪ್ರಚಾರವನ್ನು ಮಾಡಿದೆ. ಅಲ್ಲದೆ ಮಾಸಾಂತ್ಯ​ಕ್ಕೆ ಮತ್ತೊಂದು ಸುತ್ತಿನ ಸಭೆಯನ್ನು ಕರೆದು, ಮುಂದಿನ ತೀರ್ಮಾನ ಮಾಡಲು ದೇವಸ್ಥಾನ ಸಮಿತಿ ನಿರ್ಧರಿಸಲಿದೆ.

ಬಿಡದ ಭಕ್ತರು:

ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನ ಪ್ರವೇಶಕ್ಕೆ ನಿಷೇಧ ಹೇರಿದೆ. ಅಲ್ಲದೆ ಮುಖ್ಯದ್ವಾರಬಾಗಿಲನ್ನೇ ಬೀಗ ಹಾಕಿ, ಯಾರೂ ಬರದಂತೆ ಬೋರ್ಡ್‌ ಸಹ ನೇತು ಹಾಕಲಾಗಿದೆ. ದೇವಸ್ಥಾನ ಸಮಿತಿಯ ನಿರ್ಧಾರದಿಂದ ಭಕ್ತರು ಹಿಂದೆ ಸರಿಯುತ್ತಲೇ ಇಲ್ಲ. ಅದರಲ್ಲೂ ಅನ್‌ಲಾಕ್‌ 4 ಘೋಷಣೆಯಾಗಿದ್ದರಿಂದ ಭಕ್ತರು ಹುಲಿಗೆಮ್ಮ ದೇವಸ್ಥಾನಕ್ಕೆ ಬರುವವರ ಪ್ರಮಾಣ ಹೆಚ್ಚಳವಾಗುತ್ತಿದೆ.

ಕೊಪ್ಪಳ: ಸೆ. 30ರ ವರೆಗೆ ಹುಲಿಗೆಮ್ಮ ದೇವಿ ದರ್ಶನ ನಿಷೇಧ

ದೇವಸ್ಥಾನಕ್ಕೆ ಪ್ರವೇಶ ಇಲ್ಲದಿದ್ದರೆ ಏನಾಯಿತು ಎಂದು ಸುತ್ತಮುತ್ತಲ ಪ್ರದೇಶದಲ್ಲಿ ಅಲ್ಲಲ್ಲಿ ಪೂಜೆಯನ್ನು ಸಲ್ಲಿಸಿಕೊಂಡು ಹೋಗುತ್ತಾರೆ. ನದಿಯ ದಡದಲ್ಲಿಯೇ ಅಮ್ಮನ ಪೂಜೆಯನ್ನು ನೆರವೇರಿಸಿ, ತಮ್ಮ ಹರಕೆಯನ್ನು ತೀರಿಸಿ, ಪೂಜೆಯನ್ನು ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ.

ದೇವಸ್ಥಾನ ಸಮಿತಿ ಎಷ್ಟೇ ಜಾಗೃತಿಯನ್ನು ಮೂಡಿಸಿದರೂ ಭಕ್ತರು ಪರ್ಯಾಯ ಮಾರ್ಗದ ಮೂಲಕ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಟೆಂಟ್‌ ಹಾಕಿಕೊಂಡು, ವಿಶೇಷ ಪೂಜೆಯನ್ನು ಸಲ್ಲಿಸಿ, ಬಳಿಕ ದೇವಸ್ಧಾನದ ಮುಂಭಾಗಕ್ಕೆ ಆಗಮಿಸಿ, ದೂರದಿಂದಲೇ ನಮಸ್ಕಾರ ಮಾಡುತ್ತಿರುವುದು ಸಾಮಾನ್ಯವಾಗಿದೆ.

ನಿಯಂತ್ರಣ ಅಸಾಧ್ಯ

ಅನ್‌ಲಾಕ್‌ ಆಗಿದೆಯಂದು ದೇವಸ್ಥಾನದ ಬಾಗಿಲು ತೆರೆದರೆ ದೇವಸ್ಥಾನಕ್ಕೆ ಲಕ್ಷ ಲಕ್ಷ ಜನರು ಆಗಮಿಸುತ್ತಾರೆ. ದೇವಸ್ಥಾನ ಯಾವಾಗ ತೆರೆಯುತ್ತದೆ ಎಂದು ಈಗಾಗಲೇ ನಿತ್ಯವೂ ಸಾವಿರಾರು ಜನರು ಕರೆ ಮಾಡಿ ಕೇಳುತ್ತಲೇ ಇದ್ದಾರೆ. ಹಾಗೊಂದು ವೇಳೆ ದೇವಸ್ಥಾನವನ್ನು ತೆರೆದರೆ ಇಲ್ಲಿ ನಿಯಂತ್ರಣ ಮಾಡುವುದು ಅಸಾಧ್ಯ ಎನ್ನುತ್ತಾರೆ ಆಡಳಿತ ಮಂಡಳಿಯವರು. ಅದರಲ್ಲೂ ನಾನಾ ರಾಜ್ಯದವರು ಬರುವುದು ಹಾಗೂ ಸ್ಥಳೀಯರು ಗುಂಪುಗುಂಪಾಗಿ ಬರುವುದು ದೊಡ್ಡ ಅವಾಂತರಕ್ಕೆ ಕಾರಣವಾಗುತ್ತದೆ. ಬಾಗಿಲು ತೆರೆಯದಿದ್ದರೂ ಎಲ್ಲೆಲ್ಲಿಯೋ ದೂರದಿಂದಲೇ ಪೂಜೆಯನ್ನು ಸಲ್ಲಿಸಿಕೊಂಡು ಹೋಗುತ್ತಾರೆ ಎನ್ನುತ್ತಾರೆ.

ದೇವಸ್ಥಾನ ಆಡಳಿತ ಮಂಡಳಿ ಹುಲಿಗೆಮ್ಮ ದೇವಸ್ಥಾನದ ಬಾಗಿಲನ್ನು ಸೆಪ್ಟೆಂಬರ್‌ ಅಂತ್ಯದವರೆಗೂ ತೆರೆಯದಿರಲು ನಿರ್ಧರಿಸಿದೆ. ಆದರೂ ಭಕ್ತರು ಆಗಮಿಸಿ, ದೂರದಿಂದಲೇ ಪೂಜೆಯನ್ನು ಸಲ್ಲಿಸಿಕೊಂಡು ಹೋಗುತ್ತಾರೆ ಎಂದು ಹುಲಿ​ಗೆಮ್ಮ ದೇವಿ ದೇವ​ಸ್ಥಾ​ನದ ಆಡ​ಳಿ​ತಾ​ಧಿ​ಕಾರಿ ಚಂದ್ರ​ಮೌಳಿ ಅವರು ತಿಳಿಸಿದ್ದಾರೆ. 
 

click me!