ಹುಕ್ಕೇರಿ ಮಹತ್ವದ ಯೋಜನೆಗಳ ಮೇಲೆ ಕರಿನೆರಳು?

By Kannadaprabha NewsFirst Published May 25, 2023, 5:37 AM IST
Highlights

ಬಿಜೆಪಿ ಆಡಳಿತದಲ್ಲಿ ಸರ್ಕಾರ ಕೈಗೊಂಡ ಕಾಮಗಾರಿಗಳಿಗೆ ನೂತನ ಕಾಂಗ್ರೆಸ್‌ ಸರ್ಕಾರ ತಡೆವೊಡ್ಡಿದೆ. ಅನುದಾನ ಹಂಚಿಕೆ, ಕಾಮಗಾರಿ ಆರಂಭ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ. ಅಂತೆಯೇ ಆರ್ಥಿಕ ಇಲಾಖೆ ಸಹ ಎಲ್ಲ ಇಲಾಖೆ, ನಿಗಮ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.

ರವಿ ಕಾಂಬಳೆ

ಹುಕ್ಕೇರಿ (ಮೇ.25) : ಬಿಜೆಪಿ ಆಡಳಿತದಲ್ಲಿ ಸರ್ಕಾರ ಕೈಗೊಂಡ ಕಾಮಗಾರಿಗಳಿಗೆ ನೂತನ ಕಾಂಗ್ರೆಸ್‌ ಸರ್ಕಾರ ತಡೆವೊಡ್ಡಿದೆ. ಅನುದಾನ ಹಂಚಿಕೆ, ಕಾಮಗಾರಿ ಆರಂಭ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ. ಅಂತೆಯೇ ಆರ್ಥಿಕ ಇಲಾಖೆ ಸಹ ಎಲ್ಲ ಇಲಾಖೆ, ನಿಗಮ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.

ರಾಜ್ಯ ಸರ್ಕಾರ(karnataka government)ದ ಎಲ್ಲ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೆ ಒಳಪಡುವ ನಿಗಮ ಮಂಡಳಿ, ಪ್ರಾಧಿಕಾರದ ಎಲ್ಲ ಕಾಮಗಾರಿಗಳನ್ನು ಸದ್ಯ ತಡೆ ಹಿಡಿಯುವಂತೆ ಸುತ್ತೋಲೆ ಹೊರಡಿಸಿದ್ದರಿಂದ ಹುಕ್ಕೇರಿ ತಾಲೂಕಿನ ಮಹತ್ವದ ಬೃಹತ್‌ ಯೋಜನೆಗಳಿಗೆ ಈಗ ಸ್ಥಗಿತದ ಭೀತಿ ಎದುರಾಗಿದೆ.

ಅಧಿಕಾರಿಗಳ ಮೇಲೆ ಕಾಂಗ್ರೆಸ್‌ ಅಜೆಂಡಾ ಹೇರುವಿಕೆ ಖಂಡನೀಯ: ನಳಿನ್‌

ಬಿಜೆಪಿ ಅವಧಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಾಗೂ ಇನ್ನೂ ಆರಂಭವಾಗದಿರುವ ಎಲ್ಲ ಕಾಮಗಾರಿಗಳನ್ನೂ ತಡೆ ಹಿಡಿಯುವಂತೆ ನೂತನ ಕಾಂಗ್ರೆಸ್‌ ಸರ್ಕಾರ ಕಟ್ಟಪ್ಪಣೆ ಹೊರಡಿಸಿದ್ದು, ತಾಲೂಕಿನ ಮಹತ್ತರ ಯೋಜನೆಗಳ ಮೇಲೆ ಕರಿನೆರಳು ಬೀಳಬಹುದೇ ಎಂಬ ಆತಂಕ, ಪ್ರಶ್ನೆ ಮೂಡಿದೆ.

ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಮುಂದಿನ ಹಣ ಬಿಡುಗಡೆ ಮತ್ತು ಬಿಲ್‌ ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಏಕರೂಪ್‌ ಕೌರ್‌ ಅವರು ಎರಡು ಮೂರು ದಿನಗಳ ಹಿಂದಷ್ಟೇ (ಮೇ 22ರಂದು) ಆದೇಶಿಸಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಮಂಕು ಕವಿಯುವ ಸಾಧ್ಯತೆ ದಟ್ಟವಾಗಿದೆ.

ಉತ್ತರ ಕರ್ನಾಟಕ(North karnataka) ಪ್ರತ್ಯೇಕ ರಾಜ್ಯಕ್ಕಾಗಿ ಪದೇಪದೇ ಧ್ವನಿ ಎತ್ತುತ್ತಿದ್ದ ಬಿಜೆಪಿಯ ದಿ.ಉಮೇಶ ಕತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಬೆಟ್ಟವನ್ನೇ ತಂದಿಟ್ಟಿದ್ದು, ಅವುಗಳಲ್ಲಿ ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲ ಕಾಮಗಾರಿಗಳು ಆರಂಭವಾಗಬೇಕಿದೆ. ಇದೀಗ ಉಮೇಶ ಕತ್ತಿ ಉತ್ತರಾಧಿಕಾರಿಯಾಗಿ ಪುತ್ರ ನಿಖಿಲ್‌ ಕತ್ತಿ ಜಿಪಂಯಿಂದ ಶಾಸಕ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ತಂದೆಯ ಕನಸುಗಳನ್ನು ನನಸು ಮಾಡುವ ಜವಾಬ್ದಾರಿಯ ನೊಗ ಹೊತ್ತಿರುವ ನಿಖಿಲ್‌ಗೆ ನೂತನ ಕಾಂಗ್ರೆಸ್‌ ಸರ್ಕಾರ ಹೊರಡಿಸಿರುವ ಸುತ್ತೋಲೆ ಸವಾಲಾಗಿ ಪರಿಣಮಿಸಿದೆ.

ಹಿಡಕಲ್‌ ಡ್ಯಾಮ್‌ನಲ್ಲಿ 200 ಎಕರೆ ಪ್ರದೇಶದಲ್ಲಿ ಸುಮಾರು .800 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಸುವ ಮೈಸೂರು ಬೃಂದಾವನ ಮಾದರಿಯ ಹೈಟೆಕ್‌ ಉದ್ಯಾನಕಾಶಿ, ಹುಕ್ಕೇರಿಯಲ್ಲಿ 6 ಎಕರೆ ಪ್ರದೇಶದಲ್ಲಿ ನಬಾರ್ಡ್‌ ಆರ್‌ಐಡಿಎಫ್‌-26ರಲ್ಲಿನ .5 ಕೋಟಿ ವೆಚ್ಚದ ಕೃಷಿ ಡಿಪ್ಲೋಮಾ ಕಾಲೇಜು ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಜತೆಗೆ ಕ್ಷೇತ್ರದ ಪ್ರಮುಖ ವೃತ್ತಗಳ ಸೌಂದರ್ಯಿಕರಣ ಕಾಮಗಾರಿಗಳೂ ನಡೆದಿವೆ.

ಇನ್ನು 2400 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ . 133 ಕೋಟಿ ವೆಚ್ಚದ ಶಂಕರಲಿಂಗ ಹಾಗೂ ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮಲ್ಲಿಕಾರ್ಜುನ ಏತ ನೀರಾವರಿ ವರದಿ ಸಿದ್ಧಪಡಿಸಲಾಗಿದೆ. ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು .50 ಕೋಟಿ ವೆಚ್ಚದ ಒಳಚರಂಡಿ (ಯುಜಿಡಿ) ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದೆ. ಹುಕ್ಕೇರಿ ಮತ್ತು ಸಂಕೇಶ್ವರದಲ್ಲಿ ಸ್ಲಂ ನಿವಾಸಿಗಳಿಗೆ ಕೋಟ್ಯಂತರ ರೂಪಾಯಿಗಳಲ್ಲಿ ವಸತಿ ಸಮುಚ್ಚಯ ನಿರ್ಮಾಣ, ವರ್ಷವಿಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಬಿಸಿ ತಟ್ಟಲಿರುವ ಪರಿಸ್ಥಿತಿಯಿದೆ.

ಕಣಗಲಾದಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ 6 ಕಾರ್ಖಾನೆಗಳ ಪೈಕಿ 4 ಕಾರ್ಖಾನೆಗಳು ಆರಂಭವಾಗಬೇಕಿದೆ. ಸ್ವಂತ ಸೂರು ಹೊಂದಬೇಕೆಂಬ ಕ್ಷೇತ್ರದ 32 ಗ್ರಾಪಂಗಳ ಬಡ ವಸತಿ ರಹಿತರಿಗೆ ಮಂಜೂರಾದ 2636 ಹೆಚ್ಚುವರಿ ಮನೆಗಳ ನಿರ್ಮಾಣ ಕಾರ್ಯ, ಮೊದಲ ಮತ್ತು ಎರಡನೇ ಹಂತದಲ್ಲಿ 12 ಅಮೃತ ಗ್ರಾಮ ಪಂಚಾುತಿ ಯೋಜನೆಯೂ ಹೊಸ ಸರ್ಕಾರದ ಆದೇಶದಿಂದ ಡೋಲಾಯಮಾನ ಸ್ಥಿತಿಯಲ್ಲಿದೆ.

ಸಚಿವ ಸಂಪುಟ ಸರ್ಕಸ್‌ ಈಗ ದೆಹಲಿಗೆ: ಇಂದು ದಿನವಿಡೀ ಕಾಂಗ್ರೆಸ್‌ನಲ್ಲಿ ಕಸರತ್ತು

ಒಟ್ಟಿನಲ್ಲಿ ಸಾರ್ವಜನಿಕ ಕೆಲಸಗಳಿಗೆ ಕಾಂಗ್ರೆಸ್‌ ಸರ್ಕಾರದ ಆದೇಶ ಕಂಟಕವಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

click me!