ಮಹಾರಾಷ್ಟ್ರದಲ್ಲಿ ಕಡಿಮೆ ದರಕ್ಕೆ ಸಿಗುತ್ತಿರುವ ಮದ್ಯ, ರಾಜ್ಯದ ಆದಾಯಕ್ಕೂ ಹೊಡೆತ
ಸಿದ್ದಯ್ಯ ಹಿರೇಮಠ
ಕಾಗವಾಡ(ನ.16): ಗಡಿ ರಾಜ್ಯ ಮಹಾರಾಷ್ಟ್ರದಲ್ಲಿ ಮದ್ಯ ಕಡಿಮೆ ಬೆಲೆಗೆ ದೊರೆಯುತ್ತಿರುವ ಕಾರಣ, ರಾಜ್ಯದ ಗಡಿಭಾಗದಲ್ಲಿರುವ ಮದ್ಯ ಪ್ರಿಯರು ಗಡಿ ಜಿಲ್ಲೆಗೆ ದಾಂಗುಡಿ ಇಡುತ್ತಿದ್ದಾರೆ. ಇದರಿಂದ ರಾಜ್ಯ ಬೊಕ್ಕಸಕ್ಕೂ ಭಾರೀ ನಷ್ಟವಾಗುತ್ತಿದೆ.
ಹೌದು, ರಾಜ್ಯ ತೆರಿಗೆಯಲ್ಲಿ ಅಬಕಾರಿಯದ್ದೇ ಹೆಚ್ಚಿನ ಪಾಲು ಇದೆ. ಅಥಣಿ ಮತ್ತು ಕಾಗವಾಡ ತಾಲೂಕಿನ ಗಡಿ ಭಾಗದ ಹಳ್ಳಿಗಳ ಮದ್ಯ ಪ್ರಿಯರು ಈಗ ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ರಾಜ್ಯದಲ್ಲಿನ ಮದ್ಯದ ದರ. ಕರ್ನಾಟಕದಲ್ಲಿರುವ ಮದ್ಯದ ದರಕ್ಕಿಂತ ಅರ್ಧದಷ್ಟು ಕಡಿಮೆ ದರದಲ್ಲಿ ಮಹಾರಾಷ್ಟ್ರದ ವಿವಿಧೆಡೆ ಮದ್ಯ ಲಭ್ಯವಾಗುತ್ತಿದೆ. ಅದು ಕೂಡ, ಕರ್ನಾಟಕ ಗಡಿಯಿಂದ ಕೂಗಳತೆ ದೂರದಲ್ಲಿ. ಇದರಿಂದಾಗಿ, ಹೋಗಿ ಬರುವುದೇನು ಎಂಬಂತಹ ನಿಲುವಿನಿಂದಾಗಿ ಮದ್ಯ ಪ್ರಿಯರು ಮಹಾರಾಷ್ಟ್ರಕ್ಕೆ ಹೋಗಿ ಮದ್ಯ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ರಾಜ್ಯಕ್ಕೆ ಬರಬೇಕಾದ ಆದಾಯ ನೆರೆಯ ರಾಜ್ಯದ ಪಾಲಾಗುತ್ತಿದೆ.
undefined
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ; ಮತ್ತೆ ನಾಲ್ವರ ಬಂಧನ ಬಂಧಿತರ ಸಂಖ್ಯೆ 33ಕ್ಕೆ ಏರಿಕೆ!
ಅರ್ಧದಷ್ಟು ಹಣ ಉಳಿತಾಯ:
ಕರ್ನಾಟಕದ ಗಡಿ ಭಾಗದಲ್ಲಿರುವ ಅಥಣಿ ಮತ್ತು ಕಾಗವಾಡ ತಾಲೂಕು ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿನ ಮದ್ಯಪ್ರಿಯರು ಕಡಿಮೆ ಬೆಲೆ ಮದ್ಯ ಸಿಗುತ್ತಿರುವ ಪರಿಣಾಮ ರಾಜ್ಯದ ಗಡಿಯಂಚಿನಲ್ಲಿರುವ ಮಹಾರಾಷ್ಟ್ರದ ಊರುಗಳಿಂದ ಮದ್ಯ ತರುತ್ತಿದ್ದಾರೆ. ಅಷ್ಟೇ ಏಕೆ, ಅಲ್ಲೇ ಮದ್ಯ ಸೇವಿಸಿ ವಾಪಸ್ ಆಗುತ್ತಿದ್ದಾರೆ. ರಾಜ್ಯದ ಗಡಿ ಹಳ್ಳಿಗಳಿಂದ ಕೇವಲ ಐದಾರು ಕಿಮೀ ಅಂತರದಲ್ಲಿ ಅಜಗಜಾಂತರದ ದರ ವ್ಯತ್ಯಾಸ ಇರುವುದರಿಂದ ಪ್ರತಿಯೊಬ್ಬ ಮದ್ಯಪ್ರಿಯರು ಮಹಾರಾಷ್ಟ್ರದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸುಮಾರು ಅರ್ಧದಷ್ಟುಹಣ ಉಳಿತಾಯವಾಗುತ್ತಿರುವುದರಿಂದ ಎಲ್ಲರ ಚಿತ್ತ ಗಡಿ ಭಾಗ ಮಹಾರಾಷ್ಟ್ರದತ್ತ ಹೊರಳಿದೆ.
ಕಳ್ಳ ದಂಧೆಗೂ ದಾರಿ:
ಮದ್ಯದ ದರ ವ್ಯತ್ಯಾಸ ಕೇವಲ ಮದ್ಯಪ್ರಿಯರನಷ್ಟೇ ಸೆಳೆಯುತ್ತಿಲ್ಲ. ಇದು ಕಳ್ಳ ದಂಧೆಗೂ ದಾರಿ ಮಾಡಿಕೊಡುತ್ತಿದೆ. ಮದ್ಯಪ್ರಿಯರು ಹೋಗಿ ಮದ್ಯ ಸೇವಿಸಿ ಇಲ್ಲವೇ ಪಾರ್ಸಲ್ ತೆಗೆದುಕೊಂಡು ಮನೆ ಹಾದಿ ಹಿಡಿಯುತ್ತಿದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಳ್ಳ ದಂಧೆಗೂ ಇಳಿಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ಕಡೆಯಿಂದ ಸರ್ಕಾರಕ್ಕೆ ಹಾನಿಯಾಗುತ್ತಿದ್ದರೆ, ಇನ್ನೊಂದೆಡೆ ಕಾನೂನು ಉಲಂಘನೆಯೂ ಆಗುತ್ತಿರುವುದು ಸೂಜಿಗದ ಸಂಗತಿ. ಕೇವಲ ಐದಾರು ಕಿಮೀ ಅಂತರದಲ್ಲಿ ಸುಮಾರು 100-150 ರು.ಗಳ ವ್ಯತ್ಯಾಸ ಇರುವ ಪರಿಣಾಮ ಯಾಕೆ ಇಲ್ಲಿ ದುಬಾರಿ ಬೆಲೆ ಕೊಟ್ಟು ಮದ್ಯ ಸೇವಿಸಬೇಕೆನ್ನುತ್ತಾರೆ ಇಲ್ಲಿನ ಕೆಲ ಮದ್ಯಪ್ರಿಯರು. ಮಹಾರಾಷ್ಟ್ರದಿಂದ ಅತ್ಯಂತ ಕಡಿಮೆ ಬೆಲೆಗೆ ಮದ್ಯ ತಂದು, ಇಲ್ಲಿ ಲಭ್ಯವಾಗುವ ಎಂ.ಆರ್.ಪಿ ಮದ್ಯಕ್ಕಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದವರು ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.