ಸಂಪಾಜೆ ಸಮೀಪದ ಫಾರೆಸ್ಟ್ ಡಿಫೋ ಸಮೀಪ ಹೆದ್ದಾರಿಯಲ್ಲಿ ದೊಡ್ಡದಾದ ಬಿರುಕು ಕಂಡುಬಂದಿದ್ದು, ಮಳೆಗಾಲದಲ್ಲಿ ಕುಸಿದು ಮಂಗಳೂರು-ಮಡಿಕೇರಿ-ಮೈಸೂರು-ಬೆಂಗಳೂರು ಸಂಪರ್ಕ ಕಡಿತವಾಗುವ ಆತಂಕ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.14): ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಒಂದೆಡೆ ಬೆಟ್ಟಗುಡ್ಡಗಳು ಕುಸಿಯಲು ಆರಂಭಿಸಿದರೆ, ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ 275 ರಲ್ಲೂ ಭೂಕುಸಿತದ ಪ್ರಕರಣಗಳು ತಪ್ಪಿದ್ದಲ್ಲ. ಮಡಿಕೇರಿಯಿಂದ ಸಂಪಾಜೆವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಭೂಕುಸಿತದ ಆತಂಕವಿದ್ದು ಮಳೆ ತೀವ್ರಗೊಂಡಾಗ ರಸ್ತೆಯೇ ಕುಸಿದು ಹೋಗಿ ರಸ್ತೆ ಸಂಚಾರ ಬಂದ್ ಆಗಿಬಿಡುತ್ತದೆಯೇ ಎನ್ನುವ ಅನುಮಾನ ಕಾಡತೊಡಗಿದೆ.
undefined
ಮಡಿಕೇರಿ ತಾಲ್ಲೂಕಿನ ಸಂಪಾಜೆ ಸಮೀಪದ ಫಾರೆಸ್ಟ್ ಡಿಫೋ ಸಮೀಪದಲ್ಲಿ ಕಳೆದ ವರ್ಷವೇ ಹೆದ್ದಾರಿಯಲ್ಲಿ ಭಾರಿ ಬಿರುಕು ಮೂಡಿತ್ತು. ಅದು ಈಗ ಇನ್ನಷ್ಟು ಜಾಸ್ತಿಯಾಗಿದ್ದು, 1 ಅಡಿಯಷ್ಟು ಆಳಕ್ಕೆ ಇಡೀ ರಸ್ತೆಯೇ ಕುಸಿದು ಕುಳಿತಿದೆ. ಇದು ಮಳೆ ತೀವ್ರಗೊಂಡಿತ್ತೆಂದರೆ ಕೊಲ್ಲಿ ಭಾಗಕ್ಕೆ ಸಂಪೂರ್ಣ ಜಾರಿ ಹೋಗುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಹಾಗೆ ಕುಸಿದು ಹೋಗಿತ್ತೆಂದರೆ ಮಡಿಕೇರಿ, ಮಂಗಳೂರು ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕವಿದೆ.
Shakti Scheme ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬಸ್ಸುಗಳು
ಕಳೆದ ವರ್ಷವೇ ಈ ರಸ್ತೆ ಸ್ವಲ್ಪವೇ ಕುಸಿದಿತ್ತು. ಕೂಡಲೇ ಆ ರಸ್ತೆಯನ್ನು ಬಂದ್ ಮಾಡಿ ಪಕ್ಕದಲ್ಲಿಯೇ ಇರುವ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ್ದ ಹಳ್ಳೆಯ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಅದರ ಮೂಲಕವೇ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಮಳೆ ಮುಗಿಯುತ್ತಿದ್ದಂತೆ ಹೆದ್ದಾರಿಯನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹೇಳಿದ್ದರು. ಹೀಗೆ ಹೇಳಿ ವರ್ಷವೇ ಕಳೆದು ಹೋಗಿ, ಮತ್ತೊಂದು ಮಳೆಗಾಲ ಆರಂಭವಾಗಿದೆ.
ಮಳೆಗಾಲ ಮುಗಿಯುತ್ತಿದ್ದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಸುಮ್ಮನಾಗಿದ್ದವರು, ಇತ್ತ ತಿರುಗಿ ನೋಡಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದು, ಯಾವ ಸಂದರ್ಭದಲ್ಲಿ ಹೆದ್ದಾರಿ ಕುಸಿಯುವುದೋ ಎನ್ನುವ ಆತಂಕದಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಇಡಿದು ಓಡಾಡುವಂತೆ ಆಗಿದೆ. ಹೆದ್ದಾರಿಯಲ್ಲಿ ದಿನದ 24 ಗಂಟೆಯೂ ಸಾವಿರಾರು ವಾಹನಗಳು ಓಡಾಡುತ್ತವೆ. ಅದರಲ್ಲೂ 12 ಮತ್ತು 16 ಚಕ್ರದ ಭಾರೀ ವಾಹನಗಳು ಅಪಾರ ಸಂಖ್ಯೆಯಲ್ಲಿ ಓಡಾಡುತ್ತವೆ. ಇದು ಕೂಡ ಹೆದ್ದಾರಿ ಕುಸಿದು ಹೋಗುವುದಕ್ಕೆ ದೊಡ್ಡ ಕಾರಣವಾಗಿದೆ.
ಬೆಟ್ಟ ಕೊರೆದು ರೆಸಾರ್ಟ್ ಮಾಡಲು ಯತ್ನ ಆರೋಪ; ಭೂಕುಸಿತದ ಆತಂಕ
ಕೊಲ್ಲಿಯಂತಿರುವ ಇಲ್ಲಿ ನೀರಿನ ಒರತೆ ಇರುವ ಜಾಗವಾಗಿದ್ದು ಇಲ್ಲಿ ಭಾರೀ ಭಾಹನಗಳು, ಪೆಟ್ರೋಲಿಯಂ ಉತ್ಪನ್ನಗಳು, ಟಿಂಬರ್ ವಾಹನಗಳು ಓಡಾಡುವುದರಿಂದ ರಸ್ತೆ ಕುಸಿಯುವುದಕ್ಕೆ ಹೆಚ್ಚಿನ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಮಳೆ ತೀವ್ರಗೊಂಡರೆ ಈ ಹೆದ್ದಾರಿ ಕುಸಿದು ಹೋಗುವುದರಲ್ಲಿ ಎರಡು ಮಾತಿಲ್ಲ. ಹೆದ್ದಾರಿ ಕುಸಿದಿದ್ದೇ ಆದಲ್ಲಿ, ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ಸಂಪಾಜೆ, ಕೊಯನಾಡು, ಚೆಂಬು ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ಕುಟುಂಬಗಳು ಮಡಿಕೇರಿಯೊಂದಿಗೆ ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಮಂಗಳೂರು ಮಡಿಕೇರಿ ಮೂಲಕ ಮೈಸೂರು ಬೆಂಗಳೂರಿಗೆ ಸಂಪರ್ಕ ಪಡೆಯುತ್ತಿದ್ದ ಸಾವಿರಾರು ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಹೆದ್ದಾರಿ ಕುಸಿದು ಸಮಸ್ಯೆ ಎದುರಾದಲ್ಲಿ ಸಂಪಾಜೆ, ಕೊಯನಾಡು, ಚೆಂಬು ಸೇರಿದಂತೆ ಹಲವು ಗ್ರಾಮಗಳ ಜನರು ಮೈಸೂರು ಅಥವಾ ಬೆಂಗಳೂರಿಗೆ ತೆರಳಬೇಕೇಂದರೆ ಮಂಗಳೂರಿಗೆ ಹೋಗಿ, ಅಲ್ಲಿಂದ ಹಾಸನದ ಮೂಲಕ ತಲುಪಬೇಕಾದ ದುಃಸ್ಥಿತಿ ಎದುರಾಗಲಿದೆ. ಆದ್ದರಿಂದ ಮಳೆಯ ಪ್ರಮಾಣ ತೀವ್ರಗೊಂಡು ಹೆದ್ದಾರಿಯಲ್ಲಿ ಸಮಸ್ಯೆ ಎದುರಾಗುವ ಮೊದಲು ಭಾರೀ ವಾಹನಗಳ ಸಂಚಾರಕ್ಕೆ ಈ ಮಾರ್ಗದಲ್ಲಿ ಅವಕಾಶ ನೀಡದೆ ನಿಷೇಧಿಸಬೇಕು ಎನ್ನುವುದು ಈ ಭಾಗದ ಸ್ಥಳೀಯರ ಆಗ್ರಹವಾಗಿದೆ.