ಪಾಕ್‌ ಪರ ಘೋಷಣೆ: ವಿದ್ಯಾರ್ಥಿಗಳ ಪರ ವಕಾಲತ್ತಿಗೆ ಹುಬ್ಬಳ್ಳಿ ವಕೀಲರ ಒಪ್ಪಿಗೆ

By Kannadaprabha NewsFirst Published Feb 28, 2020, 7:35 AM IST
Highlights

ದೇಶದ್ರೋಹದ ಕೇಸ್‌ನಲ್ಲಿ ಬಂಧಿತರಾದ ವಿದ್ಯಾರ್ಥಿಗಳಿಗೆ ಕೊನೆಗೂ ಕಾನೂನು ನೆರವು| ವಕಾಲತ್ತು ಹಾಕುವುದಿಲ್ಲವೆಂಬ ನಿರ್ಧಾರ ವಾಪಸ್‌ ಪಡೆದ ಹುಬ್ಬಳ್ಳಿ ವಕೀಲರ ಸಂಘ| ವಕಾಲತ್ತು ಹಾಕುವ ವಕೀಲರಿಗೆ ಭದ್ರತೆ ನೀಡಲು ಪೊಲೀಸ್‌ ಕಮಿಷನರ್‌ಗೆ ಕೋರ್ಟ್‌ ಆದೇಶ| 

ಬೆಂಗಳೂರು(ಫೆ.28): ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತು ಹಾಕದಂತೆ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆಯಲಾಗಿದೆ ಎಂದು ಹುಬ್ಬಳ್ಳಿ ವಕೀಲರ ಸಂಘ ಹೈಕೋರ್ಟ್‌ಗೆ ತಿಳಿಸಿದೆ.

ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯ ರದ್ದು ಕೋರಿ ಬಿ.ಟಿ. ವೆಂಕಟೇಶ್‌ ಸೇರಿ 24 ವಕೀಲರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಈ ಮಾಹಿತಿ ನೀಡಿದರು.

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ನಂತರ ವಾದ ಮಂಡಿಸಿದ ಅವರು, ವಿವಾದದ ಕುರಿತು ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಲಾಗಿದೆ. ಬಂಧಿತ ಆರೋಪಿಗಳ ವಕಾಲತ್ತು ಹಾಕದಂತೆ ಸಂಘ ಕೈಗೊಂಡಿದ್ದ ನಿರ್ಣಯ ಹಿಂಪಡೆಯಲಾಗಿದೆ. ಆದ್ದರಿಂದ ಆರೋಪಿಗಳ ಪರ ವಕಾಲತ್ತು ಹಾಕುವ ವಕೀಲರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದೇಶದ್ರೋಹಿಗಳ ಪರ ವಕೀಲರ ವಕಾಲತ್ತು: ಹುಬ್ಬಳ್ಳಿಯಲ್ಲಿ ಲಾಯರ್ಸ್‌ ವಿರುದ್ಧ ಪ್ರತಿಭಟನೆ

ಅದನ್ನು ಪರಿಗಣಿಸಿದ ನ್ಯಾಯಪೀಠ, ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡ ನಿರ್ಣಯದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ನಿರ್ಣಯ ವಾಪಸ್‌ ಪಡೆದುಕೊಂಡಿದ್ದು, ಆರೋಪಿಗಳ ಪರ ವಕಾಲತ್ತು ವಹಿಸಲು ಅಭ್ಯಂತರವಿಲ್ಲ ಎಂದು ಸಂಘ ತಿಳಿಸಿದೆ. ನ್ಯಾಯಾಂಗದ ಮೇಲಿನ ಘನತೆ ಮತ್ತು ಸುಗಮ ನ್ಯಾಯ ಪ್ರಕ್ರಿಯೆ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಮುಂದೆ ಯಾವುದೇ ಅಹಿತಕರ ಬೆಳವಣಿಗೆ ಆಗುವುದಿಲ್ಲ ಎಂದು ಹೈಕೋರ್ಟ್‌ ನಂಬಿದೆ ಎಂದು ವಿಶ್ವಾಸ ವ್ಯಕ್ತಪಡಿಸಿತು.

ಆರೋಪಿಗಳ ಪರ ವಕಾಲತ್ತು ವಹಿಸಲು ಮುಂದೆ ಬರುವ ವಕೀಲರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು ಎಂದು ಹುಬ್ಬಳ್ಳಿ ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿದ ನ್ಯಾಯಪೀಠ, ಸಾಮಾನ್ಯ ಜಾಮೀನು ಪ್ರಕರಣಗಳಂತೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿತು.

ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಡಿ ಅವರು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ಹುಬ್ಬಳ್ಳಿ ವಕೀಲರ ಸಂಘದೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿರುವುದು ಶ್ಲಾಘನೀಯ ಎಂದು ನ್ಯಾಯಪೀಠ ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿ, ಅರ್ಜಿ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು. ಜತೆಗೆ, ಪ್ರಕರಣದ ವಿಚಾರಣೆ ಸುಗಮವಾಗಿ ನಡೆಸಿಕೊಂಡು ಹೋಗಲು ವಕೀಲರು ಸಹಕರಿಸಿದರೆ ಮುಂದಿನ ವಿಚಾರಣೆ ವೇಳೆ ಅರ್ಜಿ ಇತ್ಯರ್ಥಪಡಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಹೇಳಿತು.
 

click me!