ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾ*ಚಾರ ಮಾಡಿ ಕೊಲೆಗೈದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಬಿಹಾರ ಮೂಲದ ಆರೋಪಿ ರಿತೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಐದು ವರ್ಷದ ಏನೂ ಅರಿಯದ ಬಾಲಕಿಯನ್ನು ಅತ್ಯಾ*ಚಾರವೆಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಆರೋಪಿ ಬಿಹಾರ ಮೂಲದ ಪಾಟ್ನಾ ನಿವಾಸಿ ರಿತೇಶ್ ಕುಮಾರ್ (35) ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆಯಲ್ಲಿ ಓರ್ವ ಪಿಎಸ್‌ಐ, ಇಬ್ಬರೂ ಸಿಬ್ಬಂದಿಗಳಿಗೆ ಕೂಡ ಗಾಯವಾಗಿದೆ. ಆರೋಪಿಯ ಬಂಧನಕ್ಕೆ ಹೋದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಘಟನೆ ಹಿನ್ನೆಲೆ:
ಆಕೆ ಕೇವಲ 5 ವರ್ಷದ ಬಾಲಕಿ. ಇನ್ನೂ ಜಗತ್ತೆಂದರೆ ಏನು ಎಂಬುದನ್ನೆ ತಿಳಿಯದ ಪುಟ್ಟ ವಯಸ್ಸಿನವಳು. ಇನ್ನು ಮಗಳ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪೋಷಕರು ಅವರು. ಕಣ್ಣಲ್ಲಿ ಕಣ್ಣಿಟ್ಟು ಸಾಕಿದವರು. ಆದರೆ ಆ ಕುಟುಂಬದ ಕನಸು ನುಚ್ಚುನೂರಾಗಿದೆ. ಮನೆ ಬಳಿ ಆಟವಾಡ್ತಿದ್ದ ಆ ಬಾಲಕಿ ಸೈಕೋಪಾತ್ ಕಣ್ಣಿಗೆ ಬಿದ್ದಿದ್ದಾಳೆ. ಪುಸಲಾಯಿಸಿದ ಕಾಮುಕ ಕರೆದೊಯ್ದು ಅತ್ಯಾ*ಚಾರವೆಸಗಿ ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿಯ ಅಧ್ಯಾಪಕ ನಗರದಲ್ಲಿ ನಡೆದ 5 ವರ್ಷದ ಬಾಲಕಿ ಮೇಲಿನ ರೇಪ್ & ಮರ್ಡರ್ ಜನರನ್ನು ಬೆಚ್ಚಿಬೀಳಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಸೈಕೋ ಎತ್ತೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದೊಯ್ದ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತ ಅತ್ಯಾ*ಚಾರವೆಸಗಿದ್ದ. ಬಳಿಕ ಕತ್ತು ಹಿಸುಕಿ ಕಾಮುಕ ಆಕೆಯನ್ನು ಕೊಲೆ ಮಾಡಿದ್ದಾನೆ.
ಪೊಲೀಸರ ಮೇಲೆ ಹಲ್ಲೆ:
ಸಿಸಿಟಿವಿ ದೃಶ್ಯ ಆಧರಿಸಿ ಪೊಲಿಸರು ಮಿಂಚಿನ ಕಾರ್ಯಾಚರಣೆ ಕೈಗೊಂಡಿದ್ರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಬಿಹಾರ್ ಮೂಲದ ರಿತೇಶ್ ಕುಮಾರ್ ಎಂಬಾತ ಕೃತ್ಯ ಎಸಗಿದ್ದು ಬಯಲಿಗೆ ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಪೊಲಿಸರು ಆತನನ್ನು ಹೆಡೆಮುರಿ ಕಟ್ಟಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಆತ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದು ಗೊತ್ತಾಗಿತ್ತು. ಹೆಚ್ಚಿನ ತನಿಖೆಗೆಂದು ಪೊಲೀಸರು ಆತನನ್ನು ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿದ್ದ.
ಆರೋಪಿ ಪೊಲಿಸರ ಮೇಲೆ ಹಲ್ಲೆ ನಡೆಸಿದಾಗ ಮೂವರು ಪೊಲೀಸರು ಗಾಯಗೊಂಡಿದ್ರು. ರಿತೇಶ್ ತಪ್ಪಿಸಿಕೊಂಡು ಓಡಲು ಹೊರಟಾಗ ಅಶೋಕ ನಗರ ಪಿಎಸ್‌ಐ ಅನ್ನಪೂರ್ಣ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ಆರೊಪಿ ಬಗ್ಗದಿದ್ದಾಗ ಪಿಎಸ್‌ಐ ನೇರವಾಗಿ ರಿತೇಶ್‌ಗೆ ಗುರಿಯಿಟ್ಟಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಅಂಡರ್‌ಪಾಸ್ ಬಳಿ ಕಾಮುಕ ನೆಲಕ್ಕುರುಳಿದ್ದಾನೆ. ಕೃತ್ಯ ನಡೆದ 6 ಗಂಟೆಯಲ್ಲೇ ಕಾಮುಕನನ್ನು ಪೊಲೀಸರು ಬಲಿ ಹಾಕಿದ್ದಾರೆ.
ರೊಚ್ಚಿಗೆದ್ದ ಹುಬ್ಬಳ್ಳಿ ಜನ:
ಇದಕ್ಕೂ ಮೊದಲು ಬಾಲಕಿ ಹತ್ಯೆಗೈದ ಸೈಕೋಪಾತ್ ವಿರುದ್ಧ ಹುಬ್ಬಳ್ಳಿ ಜನ ರೊಚ್ಚಿಗೆದ್ದಿದ್ದು. ಅಶೋಕ ನಗರ ಠಾಣೆ ಬಳಿ ಸಾವಿರಾರು ಜನ ಜಮಾಯಿಸಿದ್ರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಪೊಲೀಸ್ ಠಾಣೆ ಬಳಿಯೇ ಧರಣಿ ನಡೆಸಿದ್ರು. ಪ್ರತಿಭಟನೆ ಹೆಚ್ಚಾಗ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ,ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ರು.
ಬಾಲಕಿ ಕೊಲೆ ಕೇಸ್‌ನ್ನು ಕೇಂದ್ರ ಸಚಿವ ಪ್ರಲಾದ್ ಜೋಶಿ ಖಂಡಿದ್ರು. ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ರು. ಕಾನೂನಿನಲ್ಲಿ ಕಠಿಣ ಶಿಕ್ಷೆಯ ವ್ಯವಸ್ಥೆ ಬರಬೇಕು. ನ್ಯಾಯಾಲಯದ ಆದೇಶಕ್ಕೆ ಕಾಯುತ್ತ ಕುಳಿತಾಗ ಇಂತಹ ಘಟನೆಗಳು ಹೆಚ್ಚಾಗುತ್ತೆ ಎಂದು ಸಚಿವ ಜಮೀರ್ ಅಹಮ್ಮದ್ ಕೂಡ ಹೇಳದ್ದರು.
ಬಾಲಕಿಯನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರೇನೊ ಆರೋಪಿಯನ್ನು ಎನ್‌ಕೌಂಟರ್ ಮಾಡಿ ಬಿಸಾಕಿದ್ದಾರೆ. ಆದರೆ ಮಗುವನ್ನು ಕಳೆದುಕೊಂಡ ಕುಟುಂಬದ ದುಃಖ ಎಂದೂ ಕಡಿಮೆಯಾಗಲು ಸಾಧ್ಯವೇ?
ದಾವಣಗೆರೆ: ಪರಸಂಗದ ಪತ್ನಿಯ ಹತ್ಯೆ, ಕೊಲೆಗಾರ ಶ್ವಾನದ ಬಲೆಗೆ!
ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ?