'ಚೆನ್ನಮ್ಮನ ಸಮಾಧಿ ಬಳಿ ಅನಾಥಾಶ್ರಮ, ಸಂಸ್ಕೃತ ಕೇಂದ್ರ' ಹತ್ತಾರು ಸೇವೆ; 2 ತಿಂಗಳಲ್ಲಿ ಯೋಜನೆ ಆರಂಭ- ದೇವೇಗೌಡ್ರು!

Published : Aug 29, 2026, 01:21 PM IST
Chennamma Devegowda

ಸಾರಾಂಶ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ತಮ್ಮ ದಿವಂಗತ ಪತ್ನಿ ಚೆನ್ನಮ್ಮ ಅವರ ಸ್ಮರಣಾರ್ಥ ಹಾಸನದ ಮಾವಿನಕೆರೆಯಲ್ಲಿ ಬೃಹತ್ ಸಾಮಾಜಿಕ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಅನಾಥಾಶ್ರಮ, ಬಡ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತ ಅಧ್ಯಯನ ಕೇಂದ್ರವನ್ನು ನಿರ್ಮಿಸಲು ಅವರ ಕುಟುಂಬ ನಿರ್ಧರಿಸಿದೆ.

ಹಾಸನ (ಆ.29): ತಮ್ಮ ಧರ್ಮಪತ್ನಿ ದಿವಂಗತ ಚೆನ್ನಮ್ಮ ಅವರ ಪುಣ್ಯಭೂಮಿಯಲ್ಲಿ ಬಡ ಮಕ್ಕಳ ಏಳಿಗೆಗಾಗಿ ಬೃಹತ್ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D. Deve Gowda) ತಿಳಿಸಿದ್ದಾರೆ.

ಶ್ರಾವಣ ಶನಿವಾರದ ಪ್ರಯುಕ್ತ ಹಾಸನದ ಮಾವಿನಕೆರೆ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪತ್ನಿ ಚೆನ್ನಮ್ಮ ಅವರ ಸ್ಮರಣಾರ್ಥ ಮಾವಿನಕೆರೆಯ ಸಮಾಧಿ ಜಾಗದಲ್ಲಿ ಕೈಗೊಳ್ಳಲಿರುವ ಮಹತ್ವದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಪಡುವಲಹಿಪ್ಪೆ ಬದಲು ಮಾವಿನಕೆರೆಯಲ್ಲೇಕೆ ಸಮಾಧಿ?

'ನನ್ನ ಹೆಂಡತಿ ಚೆನ್ನಮ್ಮ ದೈವಾಧೀನರಾದಾಗ ನಮ್ಮ ಹುಟ್ಟೂರಾದ ಪಡುವಲಹಿಪ್ಪೆಯ ತೋಟದಲ್ಲಿ ಸಮಾಧಿ ಮಾಡಬೇಕೆಂದು ನಾನು ತೀರ್ಮಾನಿಸಿದ್ದೆ. ಆದರೆ, ನನ್ನ ಮಕ್ಕಳು ರಂಗನಾಥ ಸ್ವಾಮಿಯ ಸನ್ನಿಧಿಯಲ್ಲೇ ಸಮಾಧಿ ಮಾಡಲು ನಿರ್ಧಾರ ಮಾಡಿದರು. ಆ ಜಾಗದಲ್ಲಿ ಬಡ ಜನರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ದೊಡ್ಡ ಯೋಜನೆಯೊಂದನ್ನು ರೂಪಿಸಲು ಮಕ್ಕಳು ತೀರ್ಮಾನಿಸಿದ್ದಾರೆ. ಈ ಸೇವಾ ಕಾರ್ಯಕ್ಕೆ ನಾನು ಸಂಪೂರ್ಣ ಒಪ್ಪಿಗೆ ನೀಡಿದ್ದೇನೆ' ಎಂದು ದೇವೇಗೌಡರು ಹೇಳಿದರು.

ಏನೆಲ್ಲಾ ಯೋಜನೆಗಳು ನಿರ್ಮಾಣವಾಗಲಿವೆ?

ಮಾವಿನಕೆರೆಯ ಸಮಾಧಿ ಸ್ಥಳದಲ್ಲಿ ಕೇವಲ ಸ್ಮಾರಕ ನಿರ್ಮಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ:

ಅನಾಥಾಶ್ರಮ ನಿರ್ಮಾಣ: ಅಸಹಾಯಕ ಮಕ್ಕಳಿಗೆ ಆಸರೆಯಾಗಲು ಅನಾಥಾಶ್ರಮ.

ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ: ನಿರ್ಗತಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.

ಸಂಸ್ಕೃತ ಅಧ್ಯಯನ ಕೇಂದ್ರ: ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷಾ ಅಧ್ಯಯನಕ್ಕೆ ವಿಶೇಷ ಕೇಂದ್ರ.

ಇದರೊಂದಿಗೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.

ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:

ತಮ್ಮ ಇಳಿವಯಸ್ಸನ್ನು ನೆನೆದು ಭಾವುಕರಾದ ಮಾಜಿ ಪ್ರಧಾನಿಗಳು, 'ಇನ್ನೊಂದು-ಎರಡು ತಿಂಗಳಲ್ಲಿ ಕುಟುಂಬಸ್ಥರೆಲ್ಲರೂ ದೆಹಲಿಯಿಂದ ಬಂದು ಈ ಪ್ರಾಜೆಕ್ಟ್ ಕಾಮಗಾರಿಯನ್ನು ಅಧಿಕೃತವಾಗಿ ಶುರು ಮಾಡುತ್ತಾರೆ. ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ. ಈ ಯೋಜನೆ ಪೂರ್ಣಗೊಳ್ಳುವವರೆಗೂ ನಾನು ಇರ್ತಿನೋ ಅಥವಾ ಮುಂಚೆಯೇ ಹೋಗ್ತಿನೋ ತಿಳಿಯದು. ಆದರೆ, ನಾನು ಇದ್ದರೂ ಈ ಯೋಜನೆ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ. ಯೋಜನೆ ಖಂಡಿತ ಯಶಸ್ವಿಯಾಗುತ್ತದೆ' ಎಂದು ಕಣ್ಣೀರಾದರು.

ರಾಷ್ಟ್ರದ ನಾಯಕರಿಗೆ ಮತ್ತು ಜನತೆಗೆ ಧನ್ಯವಾದ:

'ನಾವಿಬ್ಬರೂ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವರು. ಆದರೆ ಚೆನ್ನಮ್ಮನವರ ಅಗಲಿಕೆಯ ವೇಳೆ ನಾಡಿನ ಜನತೆ ಮತ್ತು ಮಾಧ್ಯಮಗಳು ತೋರಿದ ಪ್ರೀತಿ, ಗೌರವವನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಧಾನಿ ಸೇರಿದಂತೆ ದೇಶದ ಅನೇಕ ರಾಷ್ಟ್ರ ಮಟ್ಟದ ಗಣ್ಯರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನಮ್ಮ ಇಡೀ ಕುಟುಂಬದ ಪರವಾಗಿ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ದೇವೇಗೌಡರು ಹೇಳಿದರು.

PREV
Read more Articles on
click me!

Recommended Stories

'ಶಾಸಕನಿಗೆ ಕೆಲಸ ಮಾಡ್ತಿದ್ದೀಯಾ ಇಲ್ಲ ಜನ್ರಿಗೆ ಕೆಲಸ ಮಾಡ್ತಿದ್ದೀಯಾ' ಮದ್ದೂರು ನಗರಸಭೆ ಕಮೀಷನರ್‌ ರಾಧಿಕಾಗೆ HDK ಫುಲ್‌ ಕ್ಲಾಸ್‌!
ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾಂತರ! ಉಡುಪಿ ಕೃಷ್ಣ ಮಠದ 'ಅಷ್ಟಮಂಗಲ ಪ್ರಶ್ನೆ'ಯಲ್ಲಿ ಕಾಳಸರ್ಪ ದೋಷದ ಭವಿಷ್ಯ