* ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್- ಉಪ ಮೇಯರ್ ಎಲೆಕ್ಷನ್
* ಮೇಯರ್- ಉಪ ಮೇಯರ್ ಎಲೆಕ್ಷನ್‌ಗೆ ದಿನಾಂಕ ಮರುನಿಗದಿ
* ಪ್ರಕಟಣೆ ಹೊರಡಿಸಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್
ಧಾರವಾಡ, (ಮೇ.23): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವೇಳಾಪಟ್ಟಿ ಸಮಯ ಪರಿಷ್ಕರಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21ನೇ ಅವಧಿಯ ಕೆ ಮೇಯರ್, ಉಪಮೇಯರ್ ಸ್ಥಾನಗಳಿಗೆ ಮೇ.28 ರಂದು ಚುನಾವಣೆ ಈಗಾಗಲೇ ಘೋಷಣೆಯಾಗಿತ್ತು. ಆದ್ರೆ,ಇದೀಗ ವೇಳಾಪಟ್ಟಿಯ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್, ಕರ್ನಾಟಕ ವಿಧಾನಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್,ಉಪಮೇಯರ್ ಚುನಾವಣೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಹಾಪೌರ ಸ್ಥಾನವು ಸಾಮಾನ್ಯ ವರ್ಗ, ಉಪಮಹಾಪೌರ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿದೆ ಎಂದಿದ್ದಾರೆ.
ಕಸದಲ್ಲಿಯೇ ರಸ ತೆಗೆಯುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ..!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇ.28 ರಂದು ಮಧ್ಯಾಹ್ನ 1.30 ಕ್ಕೆ ಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭವಾಗುವುದು. ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರರ ಘೋಷಣೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದ್ದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ, ನಂತರ ಮತಗಳ ಎಣಿಕೆ,ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಕೆ ಎಲೆಕ್ಷನ್ ಚಿತ್ರಣ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಒಟ್ಟು 8,11,537 ಮತದಾರರು ಇದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಈಗ ವಾರ್ಡ್‌ಗಳ ಪುನರ್ ವಿಂಗಡನೆಯಾಗಿದ್ದು ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ವಾರ್ಡ್‌ಗಳ ಪುನರ್ ವಿಂಗಡನೆ ಬಳಿಕ ನಡೆದ ಮೊದಲ ಚುನಾವಣೆಯಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಮತದ ಮೂರು ಸೀಟುಗಳಿಂದ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಅತಿ ಹೆಚ್ಚು ಸೀಟುಗಳನ್ನು ಈ ಬಾರಿ ಪಡೆದಿದ್ದು ಜೆಡಿಎಸ್ ಒಂದು ಸ್ಥಾನ ಗಳಿಸಿದೆ. ಆಪ್ ಒಂದು ಸ್ಥಾನವನ್ನೂ ಗಳಿಸಿಲ್ಲ, ಆದರೆ ಈ ಬಾರಿ ಹೆಚ್ಚು ಸ್ಥಾನ ಗಳಿಸಿದ್ದು ಎಐಎಂಐಎಂ ಮೂರು ವಾರ್ಡ್ ಗಳಲ್ಲಿ ಗೆದ್ದುಕೊಂಡಿದೆ.
82 ಸದಸ್ಯ ಬಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳನ್ನು, ಕಾಂಗ್ರೆಸ್ 33 ಮತ್ತು 6 ಮಂದಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. 60ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಬಿಜೆಪಿ ನಾಯಕರು ಗೆಲ್ಲುವ ಆಶಾವಾದದಲ್ಲಿದ್ದರೂ, ಆದರೆ ಸದಸ್ಯ ಬಲದ ಅರ್ಧದಷ್ಟು ಅಂದರೆ 42 ಸದಸ್ಯರು ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ಪಾಲಿಕೆ ಚುನಾವಣೆ ಬಿಜೆಪಿಗೆ ಹಿನ್ನಡೆಯಾಗಿದೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಮತ್ತು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಅಭ್ಯರ್ಥಿಗಳು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಎರಡೂ ಕ್ಷೇತ್ರಗಳ 50 ವಾರ್ಡ್ ಗಳಲ್ಲಿ ಬಿಜೆಪಿ 27 ವಾರ್ಡ್ ಗಳಲ್ಲಿ ಗೆದ್ದರೆ ಕಾಂಗ್ರೆಸ್ 18 ವಾರ್ಡ್ ಗಳಲ್ಲಿ ಗೆದ್ದುಕೊಂಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿಗೆ ಸೆ.3 ರಂದು ಚುನಾವಣೆ ಜರುಗಿದ್ದು, 420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದರು. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಎಂ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದರು.