ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿ ಮುಂಗಡ ಠೇವಣೆ ಇಟ್ಟಿರುವ 12,500 ಅರ್ಜಿದಾರರಿಗೆ ಮಾತ್ರ ಅನ್ವಯವಾಗುವಂತೆ ರಾಜ್ಯ ಸರ್ಕಾರ ಮತ್ತೆ ₹1 ಲಕ್ಷ ಕಡಿತಗೊಳಿಸಿದೆ. ಹೀಗಾಗಿ, ಫ್ಲ್ಯಾಟ್ ದರ ಅಂತಿಮವಾಗಿ ಕ್ರಮವಾಗಿ ₹6.7 ಲಕ್ಷ ಹಾಗೂ ₹7.50 ಲಕ್ಷ ನಿಗದಿಯಾಗಿದೆ.
ಬೆಂಗಳೂರು(ಸೆ.20): ಆರ್ಥಿಕವಾಗಿ ಹಿಂದುಳಿದ ವಸತಿರಹಿತರಿಗಾಗಿ ಬೆಂಗಳೂರು ಸುತ್ತ ಮುತ್ತ ‘ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆ’ಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಸಿಂಗಲ್ ಬೆಡ್‌ರೂಮ್‌ನ ಸುಮಾರು 4 ಸಾವಿರ ಪ್ಲ್ಯಾಟ್/ಮನೆಗಳು ಸಿದ್ಧಗೊಂಡಿದ್ದು ಮೂರ್ನಾಲ್ಕು ತಿಂಗಳಲ್ಲಿ ವಾಸಕ್ಕೆ ಮುಕ್ತವಾಗಲಿವೆ.
ವಿದ್ಯುತ್, ನೀರಿನ ಸಂಪರ್ಕ ಸೇರಿದಂತೆ ಇನ್ನಿತರ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದಿವೆ. ಎಲ್ಲವನ್ನು ಪೂರ್ಣಗೊಳಿಸಿ ನಿಗದಿತ ಶುಲ್ಕ ಪಾವತಿಸುವ ಅರ್ಜಿದಾರರಿಗೆ ಫ್ಲ್ಯಾಟ್ ಬೀಗ ಹಸ್ತಾಂತರಿಸಲು ವಸತಿ ನಿಗಮ ಯೋಜಿಸಿದೆ. ಯಲಹಂಕ, ಆನೇಕಲ್, ಮಹದೇವಪುರ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಕೆ.ಆರ್.ಪುರ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ನಿಗಮವು ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಈ ಪೈಕಿ ಪೂರ್ಣಗೊಂಡಿರುವ ಮನೆಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಯೋಜನೆಗೆ ಸರ್ಕಾರದಿಂದಲೇ ಜಮೀನು ಒದಗಿಸಲಾಗಿದೆ.
ಬೆಂಗಳೂರು: ಖಾಸಗಿ ಬಿಲ್ಡರ್‌ಗಳ ಮೂಲಕ ಬಿಡಿಎ ಫ್ಲ್ಯಾಟ್ ಮಾರಾಟ
ಮೂಲಸೌಕರ್ಯಗಳ ವೆಚ್ಚ ಸೇರಿ ಫ್ಲ್ಯಾಟ್ ದರ ₹11.20 ಲಕ್ಷ ನಿಗದಿಪಡಿಸಲಾಗಿದೆ. ಸರ್ಕಾರದಿಂದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ₹3.50 ಲಕ್ಷ ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ₹2.70 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದಾಗಿ ಫ್ಲ್ಯಾಟ್‌ಗಳ ದರ ಕ್ರಮವಾಗಿ ₹7.7 ಲಕ್ಷ ಹಾಗೂ ₹8.50 ಲಕ್ಷಕ್ಕೆ ಇಳಿಕೆಯಾಗುತ್ತದೆ. ಆದರೆ, ಈ ದರವೂ ಹೊರೆಯಾಗುತ್ತಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು. ಹೀಗಾಗಿ, ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿ ಮುಂಗಡ ಠೇವಣೆ ಇಟ್ಟಿರುವ 12,500 ಅರ್ಜಿದಾರರಿಗೆ ಮಾತ್ರ ಅನ್ವಯವಾಗುವಂತೆ ರಾಜ್ಯ ಸರ್ಕಾರ ಮತ್ತೆ ₹1 ಲಕ್ಷ ಕಡಿತಗೊಳಿಸಿದೆ. ಹೀಗಾಗಿ, ಫ್ಲ್ಯಾಟ್ ದರ ಅಂತಿಮವಾಗಿ ಕ್ರಮವಾಗಿ ₹6.7 ಲಕ್ಷ ಹಾಗೂ ₹7.50 ಲಕ್ಷ ನಿಗದಿಯಾಗಿದೆ.
ಸಾಲ ನೀಡಲು ಬ್ಯಾಂಕ್ ನಕಾರ:
ಅರ್ಜಿದಾರರು ಮನೆ ಖರೀದಿಗೆ ಬ್ಯಾಂಕ್‌ಗಳಿಂದ ಶೇ.9ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೇಳುತ್ತಿದ್ದಾರೆ. ಆದರೆ, ಅನೇಕ ಅರ್ಜಿದಾರರು ಮೊಬೈಲ್ ಫೋನ್ ಖರೀದಿ ಸೇರಿದಂತೆ ಇನ್ನಿತರ ಅಗತ್ಯತೆಗಳಿಗಾಗಿ ಸಣ್ಣ ಮೊತ್ತದ ವಸ್ತುಗಳ ಖರೀದಿಗೆ ಸಾಲ ಪಡೆದು ಸರಿಯಾದ ಸಮಯಕ್ಕೆ ಪಾವತಿಸದ ಕಾರಣ ಸಿಬಿಲ್ ಸ್ಕೋರ್ ಕಡಿಮೆ ಇದೆ. ಹೀಗಾಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.9ರ ಬಡ್ಡಿದರದಲ್ಲಿ ಸಾಲ ನೀಡಲು ಒಪ್ಪುತ್ತಿಲ್ಲ. ಬೇರೆ ಬ್ಯಾಂಕುಗಳಲ್ಲಿ ಬಡ್ಡಿ ದರ ಹೆಚ್ಚು ಇದ್ದು, ಅರ್ಜಿದಾರರಿಗೆ ಕಷ್ಟ ಎನಿಸಿದೆ. ಈ ವಿಚಾರವಾಗಿ ನಿಗಮ ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಯೋಜನೆಯಡಿ ಫ್ಲ್ಯಾಟ್‌ಗಳನ್ನು ಖರೀದಿಗೆ ಅರ್ಜಿ ಸಲ್ಲಿಸಲು ಬಯಸುವವರು ashraya.karnataka.gov.in ಭೇಟಿ ನೀಡಬಹುದು.