ಗಾಯಗೊಂಡಿದ್ದ ಬಿಸಿಯೂಟ ತಯಾರಕಿ ಸಾವು, ನಯಾಪೈಸೆ ಪರಿಹಾರವಿಲ್ಲ!

By Kannadaprabha News  |  First Published Nov 10, 2022, 12:16 PM IST
  • ಗಾಯಗೊಂಡಿದ್ದ ಬಿಸಿಯೂಟ ತಯಾರಕಿ ಸಾವು, ನಯಾಪೈಸೆ ಪರಿಹಾರವಿಲ್ಲ!
  • ಗಂಜಿಯಲ್ಲಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವು
  • ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದೇವಮ್ಮ
  • 20 ವರ್ಷ ಅಡುಗೆ ಮಾಡಿದರೂ ಪುಡಿಗಾಸು ಇಲ್ವ

ಕೊಪ್ಪಳ (ನ.10) : ಬಿಸಿಯೂಟದ ಗಂಜಿಯಲ್ಲಿ ಬಿದ್ದು ಮೂರು ತಿಂಗಳಿಂದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ದೇವಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಆದರೆ, ಆಕೆಯ ಕುಟುಂಬಕ್ಕೆ ಸರ್ಕಾರದಿಂದ ಪುಡಿಗಾಸಿನ ಪರಿಹಾರವೂ ಲಭಿಸಿಲ್ಲ!.

ರಾಯಚೂರಿನಲ್ಲಿ ಸಂಬಳದ ಹಣ ಖರ್ಚು ಮಾಡಿ 'ಬಿಸಿಯೂಟ' ನಡೆಸುವ ಶಿಕ್ಷಕರು

Latest Videos

undefined

ತಾಲೂಕಿನ ಬೋಚನಳ್ಳಿ ಗ್ರಾಮದ ನಿವಾಸಿ ದೇವಮ್ಮ ಬಂಡಿ (55) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಬಿಸಿಯೂಟ ತಯಾರಕಿಯಾಗಿ ಸೇವೆ ಮಾಡುತ್ತಿದ್ದರು. ಗಂಜಿ ಮೈಮೇಲೆ ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಘಟನೆಯ ವಿವರ:

ಬಿಸಿಯೂಟ ತಯಾರು ಮಾಡುತ್ತಿದ್ದ ದೇವಮ್ಮ ಕಳೆದ ಆ. 11ರಂದು ಅನ್ನದ ಗಂಜಿಯನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಹೊರಗೆ ಹಾಕಲು ಮುಂದಾದಾಗ ಕಾಲು ಜಾರಿ ಬಿದ್ದು ಗಂಜಿ ಮೈಮೇಲೆ ಚೆಲ್ಲಿ, ತೀವ್ರವಾಗಿ ಸುಟ್ಟು ಗಾಯಗೊಂಡಿದ್ದರು. ತಕ್ಷಣ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ವಿಪರೀತ ಸುಟ್ಟಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನ. 9ರಂದು ಸಾವಿಗೀಡಾಗಿದ್ದಾರೆ.

ಅತ್ಯಂತ ಕಡಿಮೆ ವೇತನಕ್ಕೆ ಬಿಸಿಯೂಟ ತಯಾರಿಕೆಯಾಗಿ ಕೆಲಸ ಮಾಡುತ್ತಿದ್ದ ದೇವಮ್ಮ ಅವರ ಚಿಕಿತ್ಸೆಗೂ ಸರ್ಕಾರ ನೆರವು ನೀಡಿಲ್ಲ. ಈಗ ಸಾವಿಗೀಡಾದರೂ ಪುಡಿಗಾಸು ಪರಿಹಾರವೂ ಬರುವುದಿಲ್ಲವಂತೆ.

20 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದೇವಮ್ಮ ಕಾಯಂ ನೌಕರ ಆಗಿಲ್ಲವಾದ್ದರಿಂದ ಯಾವುದೇ ಪರಿಹಾರಕ್ಕೆ ಅರ್ಹಳಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಬಿಸಿಯೂಟ ತಯಾರಕರನ್ನು ಸರ್ಕಾರ ಇದುವರೆಗೂ ನೌಕರರು ಎಂದು ಪರಿಗಣಿಸಿಯೇ ಇಲ್ಲ. ಹೀಗಾಗಿ ನಯಾಪೈಸೆ ಪರಿಹಾರ ಕೊಡಲು ಆಗುವುದಿಲ್ಲ ಎನ್ನುತ್ತಾರೆ.

ಅಂಗವಿಕಲ ಮಕ್ಕಳು:

ದೇವಮ್ಮನ ಓರ್ವ ಮಗ ಮತ್ತು ಮಗಳು ಇಬ್ಬರೂ ಅಂಗವಿಕಲರಾಗಿದ್ದು, ಹೀಗಾಗಿ ಕುಟುಂಬಕ್ಕೆ ದೇವಮ್ಮನ ದುಡಿಮೆಯೇ ಆಸರೆಯಾಗಿತ್ತು. ಈಗ ತಾಯಿಯೇ ಸಾವಿಗೀಡಾಗಿರುವುದರಿಂದ ಬರಸಿಡಿಲು ಬಡಿದಂತಾಗಿದೆ.

ಕೊಪ್ಪಳ: ಬಿದ್ದಿದ್ದು 150 ಮನೆ, ಪರಿಹಾರ ಸಿಕ್ಕಿದ್ದು 1ಕ್ಕೆ ಮಾತ್ರ..!

ಪರಿಹಾರಕ್ಕೆ ಆಗ್ರಹ:

ಅವರ ಕುಟುಂಬದವರು ಹಾಗೂ ಬಿಸಿಯೂಟ ತಯಾರಕರ ಸಂಘಟನೆಯ ಪದಾಧಿಕಾರಿಗಳು .5 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಇದರ ಜೊತೆ ಅವರ ಕುಟುಂಬದವರೊಬ್ಬರಿಗೆ ಬಿಸಿಯೂಟ ತಯಾರು ಮಾಡುವ ಕೆಲಸ ನೀಡುವಂತೆ ಒತ್ತಾಯಿಸಿದ್ದಾರೆ..

ನಮ್ಮ ತಾಯಿ ಬಿಸಿಯೂಟ ತಯಾರು ಮಾಡುತ್ತಿದ್ದ ವೇಳೆ ಗಂಜಿ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದು, ಪರಿಹಾರ ನೀಡಿದರೆ ನಮ್ಮ ಕುಟುಂಬಕ್ಕೆ ಆಸರೆಯಾಗುತ್ತದೆ.

ಶೇಖಪ್ಪ ಬಂಡಿ, ಮೃತ ದೇವಮ್ಮನ ಮಗ

ಇದು ಅತ್ಯಂತ ಘೋರ ಅನ್ಯಾಯ. ಬಿಸಿಯೂಟ ತಯಾರು ಮಾಡುವ ವೇಳೆ ಗಂಜಿ ಬಿದ್ದು ಗಾಯಗೊಂಡು ಸಾವಿಗೀಡಾಗಿರುವ ದೇವಮ್ಮ ಕುಟುಂಬಕ್ಕೆ .5 ಲಕ್ಷ ಪರಿಹಾರ ನೀಡಬೇಕು ಮತ್ತು ಅವರ ಮನೆಯವರಿಗೆ ಕೆಲಸ ನೀಡಬೇಕು.

ಬಸವರಾಜ ಶೀಲವಂತರ, ಹೋರಾಟಗಾರರು

click me!