Latest Videos

ಹೊಸಗುತ್ತಿ- ಹೊಸಳ್ಳಿ ಏತ ನೀರಾವರಿ ಯೋಜನೆಗೆ ಅಪ್ಪಚ್ಚು ರಂಜನ್‌ ಚಾಲನೆ

By Kannadaprabha NewsFirst Published Oct 23, 2022, 9:00 AM IST
Highlights
  • ಹೊಸಗುತ್ತಿ- ಹೊಸಳ್ಳಿ ಏತ ನೀರಾವರಿ ಯೋಜನೆಗೆ ಅಪ್ಪಚ್ಚು ರಂಜನ್‌ ಚಾಲನೆ
  • 7 ಕೋಟಿ ರುಪಾಯಿ ವೆಚ್ಚದ ಯೋಜನೆ ಇದಾಗಿದ್ದು, 9 ಕೆರೆಗಳಿಗೆ ಕಾಯಕಲ್ಪ ಸಿಗಲಿದೆ: ಶಾಸಕ

ಮಡಿಕೇರಿ (ಅ.23) ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ- ಹೊಸಳ್ಳಿ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿದ್ದ ಏತ ನೀರಾವರಿ ಯೋಜನೆಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಶನಿವಾರ ಚಾಲನೆ ನೀಡಿದು. ಬಳಿಕ ಹೊಸಗುತ್ತಿ- ಹೊಸಳ್ಳಿ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಎರಡನೇ ಬಾರಿ ಶಾಸಕನಾಗಿದ್ದ ಅವಧಿಯಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳಬೇಕೆಂದು ಈ ಭಾಗದ ಗ್ರಾಮಸ್ಥರು ಮನವಿ ಮಾಡಿದ್ದರು. ಅಂದು 75 ಲಕ್ಷ ರುಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿತ್ತು, ಆದರೆ ಹಲವು ಕಾರಣಗಳಿಂದ ಏತ ನೀರಾವರಿ ಯೋಜನಾ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ, ಹೊಸಗುತ್ತಿ ಗ್ರಾಮದ ಸುತ್ತಮುತ್ತಲಿನ ಸುಮಾರು 9 ಕೆರೆಗೆಳಿಗೆ ನೀರು ತುಂಬಿಸುವ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ ಎಂದರು. ಹೊಸಗುತ್ತಿ ಕೆರೆ, ಮೈಲಾಪುರ ಕೆರೆ, ತಿಮ್ಮಯ್ಯನ ಕೆರೆ, ದೊಡ್ಡಕೆರೆ, ಹಾರೆಹಳ್ಳಿ ಕೆರೆ, ಮಾಲಂಬಿ ಕೆರೆ, ಹೀಗೆ 9 ಕೆರೆಗಳಿಗೆ ನೀರು ತುಂಬಿಸಲಾಗುವ ಯೋಜನೆಗೆ ಇದಾಗಿದ್ದು, ಹೊಸಗುತ್ತಿ- ಹೊಸಳ್ಳಿ ಗ್ರಾಮಕ್ಕೆ ಅಮೃತ ಕಾಲ ಬಂದಿದೆ ಎಂದರು.

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿಂದಿನ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಅವರ ಪ್ರಯತ್ನದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 25 ಕೋಟಿ ರು.ಬಿಡುಗಡೆ ಆಗಿದ್ದು, ಆಲೂರು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿಯೇ 9 ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ರಂಜನ್‌ ವಿವರಿಸಿದರು.

ಶಿಕ್ಷಣಕ್ಕೂ ಒತ್ತು ನೀಡಲಾಗಿದೆ: ಕೊಡಗು ಜಿಲ್ಲೆಯ ಚಿಕ್ಕಳುವಾರದಲ್ಲಿ ಸ್ಮಾತಕೋತ್ತರ ಕೇಂದ್ರದಲ್ಲಿ 650 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸದ್ಯ ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಆರಂಭವಾಗಲಿದೆ. ಜೊತೆಗೆ ಕುಶಾಲನಗರದ ಎಂಜಿನಿಯರಿಅಗ್‌ ಕಾಲೇಜಿನಲ್ಲಿ 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಿದೆ. ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆದಿದ್ದಾರೆ. ಹಾಗೆಯೇ ವೈದ್ಯಕೀಯ ಕಾಲೇಜು ಆರಂಭಿಸಿ, ಜಿಲ್ಲಾ ಕೇಂದ್ರದಲ್ಲಿ ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡಲಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ರಂಜನ್‌ ವಿವರಿಸಿದರು.’

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕುಮಾರಸ್ವಾಮಿ, ಸಹಾಯಕ ಎಂಜಿನಿಯರ್‌ ಸುರೇಶ್‌, ಪಂಚಾಯತ್‌ ರಾಜ್‌ ಎಂಜಿನಿಯರ್‌ ವೀರೇಂದ್ರ, ಪಿಎಂಜಿಎಸ್‌ವೈ ಎಂಜಿನಿಯರ್‌ ಪ್ರಭು, ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌, ಉಪಾಧ್ಯಕ್ಷರಾದ ದಮಯಂತಿ, ಗ್ರಾಮಸ್ಥರಾದ ಮೀನಾಕ್ಷಿ, ನೇತ್ರಾವತಿ, ಸೋಮೇಶ್‌, ಸತೀಶ್‌ ಕುಮಾರ್‌, ರಂಗಶೆಟ್ಟಿ, ಸೂರಪ್ಪ, ಮುತ್ತಪ್ಪ, ಚಂದ್ರಪ್ಪ, ವೀರಪ್ಪ, ಯಮುನ, ಮಲ್ಲಪ್ಪ, ಜಯಣ್ಣ, ರಾಧಾಮಣಿ, ಮುತ್ತಮ್ಮ, ಚೇತನ್‌ ಇತರರು ಇದ್ದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಕಣಿವೆ ಬಸವನಹಳ್ಳಿ ರಸ್ತೆ ದುರಸ್ತಿ, ಮಾಲಂಬಿ ಅಂಚೆ ಕಚೇರಿಯಿಂದ ಕನ್ನಂಬಾಡಿಯಮ್ಮ ದೇವಸ್ಥಾನ ರಸ್ತೆ ಡಾಮರೀಕರಣ, ಸೀಗೆಮಾರೂರು ಪರಿಶಿಷ್ಟಜಾತಿ ಕಾಲೋನಿಯಿಂದ ಮಾಗಲು ಕಾಲೋನಿ ರಸ್ತೆ, ಸೀಗೆಮಾರೂರು ಪರಿಶಿಷ್ಟಜಾತಿ ಕಾಲೋನಿಯಿಂದ ಕೈಸರವಳ್ಳಿ ಗ್ರಾಮಕ್ಕೆ ರಸ್ತೆ ಡಾಮರೀಕರಣ, ಅಂಕನಳ್ಳಿ ಕೈಸರವಳ್ಳಿ ರಸ್ತೆ (ಪಿಎಂಜಿಎಸ್‌ವೈ), ಮೆಣಸಬೆಟ್ಟದಳ್ಳಿ ಊರೊಳಗಿನ ರಸ್ತೆ ದುರಸ್ತಿ ಸೇರಿದಂತೆ ಒಟ್ಟು 901 ಲಕ್ಷ ರುಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಗುದ್ದಲಿ ಪೂಜೆ ನೆರವೇರಿಸಿದರು.

ಹುನಗುಂದ: ಮರೋಳ ಏತ ನೀರಾವರಿ ಯೋಜನೆ ಕಳಪೆ: ಅಭಯ ಪಾಟೀಲ

ಹಾಗೆಯೇ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆದಾಳು ಎಸ್ಸಿ ಕಾಲೋನಿಗೆ ಕಾಂಕ್ರಿಟ್‌ ರಸ್ತೆ( ಎಸ್ಸಿಪಿ), ನಾಕಲಗೋಡು ರಸ್ತೆ, ಹಂಡ್ಲಿ ಹುಲ್ಸೆ ರಸ್ತೆ ಡಾಮರೀಕರಣ, ನಾಕಲಗೋಡು ರಸ್ತೆ ಮುಂದುವರಿದ ಭಾಗ ಡಾಮರೀಕರಣ, ಸಂಪಿಗೆದಾಳು ಹಂಡ್ಲಿ (ನೀರಾವರಿ 200) ಇರಿಗೇಷನ್‌ ಕಾಮಗಾರಿ, ಬ್ಯಾಡಗೊಟ್ಟಗ್ರಾ.ಪಂ. ವ್ಯಾಪ್ತಿಯ ಕುಮಾರಳ್ಳಿ ಬ್ಯಾಡಗೊಟ್ಟ(ನೀರಾವರಿ 200) ನೀರಾವರಿ ಯೋಜನೆ, ತಳಗೂರು ಬ್ಯಾಡಗೊಟ್ಟ(ನೀರಾವರಿ 200) ನೀರಾವರಿ ಯೋಜನೆ, ನವಗ್ರಾಮ ಕೊಡ್ಲಿಪೇಟೆ(ನೀರಾವರಿ 200) ನೀರಾವರಿ ಯೋಜನೆ ಒಟ್ಟು 234 ಲಕ್ಷ ರುಪಾಯಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ವೇಳೆ ಶಾಸಕರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

click me!