ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ ಗ್ಯಾಂಗ್‌: 6 ಮಂದಿ ಅರೆಸ್ಟ್

By Suvarna NewsFirst Published Dec 4, 2019, 10:10 AM IST
Highlights

ಹನಿಟ್ರ್ಯಾಪ್‌ ಗ್ಯಾಂಗ್‌ಗೆ ಪೊಲೀಸ್‌ ಹೆಡೆಮುರಿ| ಹಣ ಕೊಡೋದಾಗಿ ನಂಬಿಸಿ ನಗ್ನ ಚಿತ್ರ ತೆಗೆದ ಆರೋಪಿಗಳು|ನಗದು, ಕೈ ಗಡಿಯಾರ ಕಿತ್ತುಕೊಂಡು ಮೊಬೈಲ್‌ ಮೂಲಕ ಆತನ ನಗ್ನ ವಿಡಿಯೋ ಮಾಡಿದ ಆರೋಪಿಗಳು|
 

ಬೆಳಗಾವಿ[ಡಿ.04]:  ಹನಿಟ್ರ್ಯಾಪ್‌ ಮೂಲಕ ಲಕ್ಷಾಂತರ ರುಪಾಯಿ ಹಣ ದರೋಡೆಗೆ ಯತ್ನಿಸಿದ ಗ್ಯಾಂಗ್‌ ವೊಂದನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಮಂಗಳವಾರ ಅಪ್ರಾಪ್ತ ಸೇರಿದಂತೆ 6 ಜನರನ್ನು ಬಂಧಿಸಿ, ಅವರಿಂದ 16,500 ನಗದು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಕ್ಯಾಂಪ್‌ ಕಾಕರಸ್ಟ್ರೀಟ್‌ನ ಅಲಿಶಾನ ಶಾಬುದ್ದಿನ ಸಯ್ಯದ, ಮಾರ್ಕೆಟ್‌ ಸ್ಟ್ರೀಟ್‌ ಅಖೀಬ ಅಲ್ಲಾಭಕ್ಷ ಬೇಪಾರಿ, ಬೀಫ್ ಬಜಾರ ಸ್ಟ್ರೀಟನ ಸಲ್ಮಾನ ಗುಲಾಜ್‌ ಬೇಗ, ಮಹಾಂತೇಶ ನಗರದ ಬಿಬಿ ಆಯೇಶಾ ಅಬ್ದುಲ್‌ ಸತ್ತಾರ ಶೇಖ, ರುಕ್ಮಿಣಿ ನಗರ ಆಶ್ರಯ ಕಾಲನಿಯ ಹೀನಾ ಅಕ್ಬರ ಅವನೂರ ಹಾಗೂ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಬಂಧಿತರಿಂದ 16500 ನಗದು, ಕೈ ಗಡಿಯಾರ, ವಿಡಿಯೋ ಮಾಡಲು ಬಳಸಿದ ಮೊಬೈಲ್‌ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ ಗ್ಯಾಂಗ್‌:  6 ಮಂದಿ ಅರೆಸ್ಟ್ 

ಬಟ್ಟೆ ಅಂಗಡಿಯಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಬಿ ಆಯೇಶಾ ಶೇಖ ಎಂಬವರು ಇಲ್ಲಿನ ವೀರಭದ್ರ ನಗರದ ಎಂ.ಎಂ.ಮುಜಾವರ ಎಂಬುವರಿಗೆ ಹಣ ಕೊಡಬೇಕಿತ್ತು. ಡಿ.2 ರಂದು ಮುಜಾವರ ಎಂಬುವರು ಇಲ್ಲಿನ ಮಹಾಂತೇಶ ನಗರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಬಂದು ಹಣಹಾಸಿನ ವ್ಯವಹಾರ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮುಜಾವರನ್ನು ಹಿಂಬಾಲಿಸಿ ಬ್ಯಾಂಕ್‌ ಹೊರಗಡೆ ಕಾಯುತ್ತಾ ನಿಂತಿದ್ದರು. ಬ್ಯಾಂಕ್‌ನಿಂದ ಹೊರಬಂದ ಮುಜಾವರ ತಮ್ಮ ಕಾರು ಹತ್ತಿರ ಹೋಗುತ್ತಿದ್ದಂತೆ ಬಿಬಿ ಆಯೇಶಾ ಮತ್ತು ಹೀನಾ ಅವನೂರ ಇಬ್ಬರು ಸೇರಿಕೊಂಡು ನಾವು ಕೊಡಬೇಕಾದ ಹಣ ಮನೆಯಲ್ಲಿವೆ. ತಕ್ಷಣ ನಮ್ಮೊಂದಿಗೆ ಬನ್ನಿ ಕೊಡುತ್ತೇವೆ ಎಂದು ನಂಬಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಬಿಬಿ ಆಯೇಶಾ ಮತ್ತು ಹೀನಾ ಇಬ್ಬರು ಮನೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಮನೆಯಲ್ಲಿದ್ದ ಅಲಿಶಾನ ಶಾಬುದ್ದಿನ ಸಯ್ಯದ, ಅಖೀಬ ಅಲ್ಲಾಭಕ್ಷ ಬೇಪಾರಿ, ಸಲ್ಮಾನ ಗುಲಾಜ್‌ ಬೇಗ ಹಾಗೂ ಅಪ್ರಾಪ್ತ ಸೇರಿಕೊಂಡು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂ.ಎಂ.ಮುಜಾವರನಿಗೆ ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಆತಂಕಗೊಂಡ ಮುಜಾವರ ಆರೋಪಿಗಳು ಹೇಳಿದಂತೆ ಕೇಳುವುದಾಗಿ ತಿಳಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಮುಜಾವರನ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿಸಿ ನಗ್ನಗೊಳಿಸಿದ್ದಾರೆ. ಅಲ್ಲದೇ ಆತನ ಹತ್ತಿರ ಇದ್ದ 16500 ನಗದು, ಕೈ ಗಡಿಯಾರ ಕಿತ್ತುಕೊಂಡು ಮೊಬೈಲ್‌ ಮೂಲಕ ಆತನ ನಗ್ನ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋ ತೋರಿಸಿ ನಮಗೆ 5 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೇ ನಿನ್ನ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಎಂ.ಎಂ.ಮುಜಾವರ ಸದ್ಯ ನನ್ನ ಬಳಿ  2.5 ಲಕ್ಷ ಹಣವಿದೆ. ತೆಗೆದುಕೊಂಡು ಬಂದು ಕೊಡುವುದಾಗಿ ತಿಳಿಸಿದ್ದಾರೆ. ಆರೋಪಿಗಳ ವಶದಿಂದ ಬಿಡಿಸಿಕೊಂಡು ಬಂದ ಮುಜಾವರ ನೇರವಾಗಿ ಮಾಳಮಾರುತಿ ಪೊಲೀಸ್‌ ಠಾಣೆಗೆ ತೆರಳಿ ಎಲ್ಲ ಮಾಹಿತಿಯನ್ನು ತಿಳಿಸಿ ದೂರು ನೀಡಿದ್ದಾರೆ.

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್‌ ಮೂಲಕ ದರೋಡೆಗೆ ಯತ್ನಿಸಿದ್ದ ಗ್ಯಾಂಗನ ಜಾಲ ಹಿಡಿದು ಹೊರಟ ಪೊಲೀಸರು. ತಮ್ಮ ಲೆಕ್ಕಾಚಾರದಂತೆ ಬಲೆ ಬೀಸಿದ್ದಾರೆ. ಪೊಲೀಸರ ಬಲೆಗೆ ಬಿದ್ದ ಇವರನ್ನು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಎಲ್ಲ ವಿಷಯವನ್ನು ತಿಳಿಸಿ ತಪ್ಪೊಪ್ಪಿಕೊಂಡಿದ್ದಾರೆ.

ಡಿಸಿಪಿ ಸೀಮಾ ಲಾಟ್ಕರ ಮಾರ್ಗದರ್ಶದಲ್ಲಿ ಮಾರ್ಕೆಟ್‌ ಎಸಿಪಿ ಎನ್‌.ವಿ.ಬರಮನಿ ಹಾಗೂ ಪೊಲೀಸ್‌ ಇನ್ಸ್‌ಸ್ಪೆಕ್ಟರ್‌ ಬಿ.ಆರ್‌.ಗಡ್ಡೆಕರ ನೇತೃತ್ವದಲ್ಲಿ ಪ್ರೊಬೆಷನರಿ ಪಿಎಸ್‌ಐ ಹೊನ್ನಪ್ಪ ತಳವಾರ ಸಿಬ್ಬಂದಿ ಎಂ.ಜಿ ಕುರೇರ, ಕೆಂಪಣ್ಣ ಗೌರಾಣಿ, ಲತೀಪ ಮುಶಾಪುರಿ, ವಿ. ಎಚ್‌ ದೊಡಮನಿ, ಶಿವಶಂಕರ ಗುಡದಯ್ಯಗೋಳ, ಮಂಜುನಾಥ ಮೇಲಸರ್ಜಿ, ಜೆ. ಕೆ. ಲಡಂಗಿ, ಎಸ್‌. ಎ. ಗಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿ ಈ ತ್ವರಿತ ಕಾರ್ಯಕ್ಕೆ ಪೊಲೀಸ್ ಆಯುಕ್ತ ಬಿ.ಎಸ್‌.ಲೋಕೇಶಕುಮಾರ ಶ್ಲಾಘಿಸಿದ್ದಾರೆ.
 

click me!