ವೀರಶೈವ- ಲಿಂಗಾಯತ ಸಮಾವೇಶದ ಮೂಲಕ ಜಾತಿ ಆಧಾರದ ಮೇಲೆ ಮತಯಾಚಿಸಿದ ಸೋಮಣ್ಣ, ಮಾಧುಸ್ವಾಮಿ|ಅವರನ್ನು ಕೂಡಲೇ ಬಂಧಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಬಸವರಾಜ ರಾಯರಡ್ಡಿ|ಯಾವುದೇ ಪಕ್ಷಗಳು ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಿ ಪ್ರಚೋದನೆ ಮಾಡುವುದು ಚುನಾವಣೆ ನೀತಿಯ ಉಲ್ಲಂಘನೆ| ಆ ಸಮಾಜಕ್ಕೆ ಮಾಡಿದ ಅಪಮಾನ| ಕೂಡಲೇ ಇಬ್ಬರು ಸಚಿವರು ಕ್ಷಮೆಯಾಚಿಸಬೇಕು ಎಂದು ಒತ್ತಾಯ|
ಹೊಸಪೇಟೆ[ಡಿ.04]: ವೀರಶೈವ- ಲಿಂಗಾಯತ ಸಮಾವೇಶದ ಮೂಲಕ ಜಾತಿ ಆಧಾರದ ಮೇಲೆ ಮತಯಾಚಿಸಿರುವ ಸಚಿವರಾದ ಮಾಧುಸ್ವಾಮಿ ಹಾಗೂ ವಿ. ಸೋಮಣ್ಣ ವಿರುದ್ಧ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗ್ರಹಿಸಿದ್ದಾರೆ.
ಅವರನ್ನು ಕೂಡಲೇ ಬಂಧಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸಪೇಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ವೀರಶೈವ- ಲಿಂಗಾಯತ ಸಮಾವೇಶದಲ್ಲಿ ವಸತಿ ಸಚಿವ ವಿ. ಸೋಮಣ್ಣ ಹಾಗೂ ಕಾನೂನು ಸಚಿವ ಮಾಧುಸ್ವಾಮಿಯವರ ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚಿಸಿದ್ದಾರೆ. ಅವರು ಮತ್ತು ಸಭೆಯಲ್ಲಿ ಭಾಗವಹಿಸಿದ ಎಲ್ಲರ ವಿರುದ್ಧವೂ ಕೆಪಿಸಿಸಿ ವತಿಯಿಂದ ದೂರು ನೀಡಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವೀರಶೈವ- ಲಿಂಗಾಯತರು ಆನಂದಸಿಂಗ್ ಅವರಿಗೆ ಹಾಕುವ ಒಂದೊಂದು ಮತ ಕೂಡ ಯಡಿಯೂರಪ್ಪನವರಿಗೆ ಹಾಕಿದಂತಾಗುತ್ತದೆ. ನೀವು ಮತ ಹಾಕದಿದ್ದರೆ, ಯಡಿಯೂರಪ್ಪನವರಿಗೆ ಕಾಪಾಳಮೋಕ್ಷ ಮಾಡಿದಂತೆ ಎಂದು ಹೇಳುವ ಮೂಲಕ ಇಬ್ಬರು ಸಚಿವರು ಮತಯಾಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷಗಳು ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಿ ಪ್ರಚೋದನೆ ಮಾಡುವುದು ಚುನಾವಣೆ ನೀತಿಯ ಉಲ್ಲಂಘನೆಯಾಗುತ್ತದೆ. ಮಾತ್ರವಲ್ಲದೆ ಆ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಹೀಗಾಗಿ, ಕೂಡಲೇ ಇಬ್ಬರು ಸಚಿವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು, ಈ ಉಪಚುನಾವಣೆಯಲ್ಲಿ ಗೆಲ್ಲಲು ಹೊಸಪೇಟೆ ಹಾಗೂ ಹೊಸಕೋಟೆಯಲ್ಲಿ ಚಿನ್ನ ಹಾಗೂ ಹಣದ ಅಮಿಷ ಒಡ್ಡುತ್ತಿದ್ದರೂ ದಿಟ್ಟಕ್ರಮ ಕೈಗೊಳ್ಳುವಲ್ಲಿ ಚುನಾವಣೆ ಆಯೋಗ ವಿಫಲವಾಗಿದೆ. ಚುನಾವಣೆ ಆಯೋಗ ಕೇಂದ್ರ ಹಾಗೂ ರಾಜ್ಯದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.