ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ, ಪಡಿತರದಾರರು ಕಂಗಾಲು
ರಬಕವಿ-ಬನಹಟ್ಟಿ(ನ.25): ತಾಲೂಕಿನ ಸಸಾಲಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ನವಂಬರ ತಿಂಗಳ ಪಡಿತರ ಅಕ್ಕಿಯಲ್ಲಿ ಬಹುತೇಕರಿಗೆ ಪ್ಲಾಸ್ಟಿಕ್ ಮಾದರಿ ಅಕ್ಕಿ ಬಂದಿದ್ದು, ಪಡಿತರದಾರರು ಒಂದು ಕ್ಷಣ ಆತಂಕಗೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಅಂದಾಜು 1300 ಬಿಪಿಎಲ್ ಪಡಿತರ ಚೀಟಿ ಇದ್ದು, ನವಂಬರ ತಿಂಗಳ ಪಡಿತರದಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಕಿಟ್ ಅಕ್ಕಿ ಕಂಡು ಬಂದಿವೆ. ಈ ಕುರಿತು ಮಾಹಿತಿ ನೀಡಿರುವ ಪಡಿತರದಾರರಾದ ಪುಂಡಲೀಕ ಕರಿಗಾರ, ಬಸಪ್ಪ ಸಂತಿ, ಸಂಜು ಸುತಾರ, ಈರಪ್ಪ ಸಲಬನ್ನವರ, ರಾಮಪ್ಪ ಮದಲಮಟ್ಟಿ, ಪ್ರಕಾಶ ಉಳ್ಳಾಗಡ್ಡಿ, ಈ ತಿಂಗಳ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಸೇರ್ಪಡೆಗೊಂಡಿದೆ. ಪ್ಲಾಸ್ಟಿಕ್ ಅಕ್ಕಿ ಸೇರ್ಪಡೆಗೊಂಡಿರುವುದು ಗೊತ್ತಾಗದೆ ಮನೆಯವರು ಅನ್ನ ಮಾಡಿದ್ದಾರೆ. ಆದರೆ ಅದು ಗಂಜಿ ತರಹ ಆಗಿದೆ. ಆಗ ತಕ್ಷಣವೇ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ ಪ್ಲಾಸ್ಕಿಟ್ ಅಕ್ಕಿ ಸೇರ್ಪಡೆಗೊಂಡಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪಿಕೆಪಿಎಸ್ ನ್ಯಾಯಬೆಲೆ ಅಂಗಡಿಯವರನ್ನು ವಿಚಾರಿಸಿದರೆ ಇಲಾಖೆಯಿಂದ ಬಂದ ಪಡಿತರ ಅಕ್ಕಿಯನ್ನು ವಿತರಣೆ ಮಾಡಿದ್ದೇವೆ. ನಾವು ಏನು ಸೇರ್ಪಡೆ ಮಾಡಿಲ್ಲ. ಎಂದು ತಿಳಿಸಿದ್ದಾರೆ.
undefined
ಸಕ್ಕರೆಯ ಉಪ ಉತ್ಪನ್ನದ ಲಾಭಾಂಶ ರೈತರಿಗೆ ಕೊಡಿ: ಸಚಿವ ಮುನೇನಕೊಪ್ಪ
ಆದರೆ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಸೇರ್ಪಡೆ ಆಗಿರುವ ಕುರಿತು ಯಾವ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಮಾಹಿತಿ ಬಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಜತೆಗೆ ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಇಲ್ಲ. ಇದರಿಂದ ಸಸಾಲಟ್ಟಿಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿಯಲ್ಲಿ ಕಂಡು ಬಂದ ಪ್ಲಾಸ್ಟಿಕ್ ಅಕ್ಕಿ ಕುರಿತು ಸಾಕಷ್ಟುಸಂಶಯ ಹಾಗೂ ಗೊಂದಲ ಮೂಡುವಂತಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡುವ ಪಡಿತರ ಅಕ್ಕಿಯಲ್ಲಿ ಯಾವುದೇ ರೀತಿಯ ಬೆರೆಕೆ ಕುರಿತು ದೂರು ಬಂದಿಲ್ಲ. ಸಸಾಲಟ್ಟಿಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಕಿಟ್ ಅಕ್ಕಿ ಬಂದಿರುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಾಗೂ ಸಾರವರ್ಧಿತ ಅಕ್ಕಿ ಕುರಿತು ಕೂಡ ಸರ್ಕಾರದಿಂದ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಅಂತ ರಬಕವಿ-ಬನಹಟ್ಟಿ ತಾಲೂಕು ಆಹಾರ ಇಲಾಖೆ ಅಧಿಕಾರಿ ವಿಠ್ಠಲ ಹೂಗಾಟೆ ತಿಳಿಸಿದ್ದಾರೆ.