ಪ್ರವಾಸಿಗರ ಸಂಖ್ಯೆ ವಿರಳ: ಇನ್ನೂ ತೆರೆಯದ ರೆಸ್ಟೋರೆಂಟ್‌, ಹೋಂಸ್ಟೇಗಳು

By Kannadaprabha News  |  First Published Jun 15, 2020, 3:45 PM IST

ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು ಹೋಂಸ್ಟೇ, ರೆಸಾರ್ಟ್‌, ರೆಸ್ಟೋರೆಂಟ್‌ ಸೇರಿದಂತೆ ಆತಿಥ್ಯ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ ಕಳೆದೊಂದು ವಾರದಿಂದ ರೆಸ್ಟೋರೆಂಟ್‌ಗಳಿಗೆ ಶೇ.30ರಷ್ಟುಸ್ಪಂದನೆ ಹೊರತುಪಡಿಸಿದರೆ ವಿವಿಧ ಆತಿಥ್ಯ ಕೇಂದ್ರಗಳು ಅತಿಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. 


ಬೆಂಗಳೂರು (ಜೂ. 15): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ರೆಸಾರ್ಟ್‌, ರೆಸ್ಟೋರೆಂಟ್‌, ಲಾಡ್ಜ್‌ಗಳನ್ನು ತೆರೆಯಲು ಅನುಮತಿ ನೀಡಿ ಸರ್ಕಾರ ಕಳೆದವಾರವಷ್ಟೇ ಆದೇಶ ಹೊರಡಿಸಿತ್ತು. ಆದರೆ ಒಂದು ವಾರ ಕಳೆದರೂ ಜಿಲ್ಲೆಯಲ್ಲಿ ಶೇ.90 ರಷ್ಟುರೆಸಾರ್ಟ್‌ಗಳು ಆರಂಭವಾಗಿಲ್ಲ.

ರೆಸ್ಟೋರೆಂಟ್‌ ಹಾಗೂ ಹೋಂಸ್ಟೇಗಳು ಶೇ.30ರಷ್ಟುಮಾತ್ರ ತೆರೆಯಲಾಗಿದೆ. ಪ್ರವಾಸಿ ತಾಣಗಳ ವೀಕ್ಷಣೆಗೆ ಇನ್ನೂ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿಲ್ಲ. ಪ್ರವಾಸಿಗರ ಕೊರತೆಯಿಂದಾಗಿ ಆತಿಥ್ಯ ಕೇಂದ್ರಗಳ ಮಾಲೀಕರು ನಷ್ಟಅನುಭವಿಸುತ್ತಿದ್ದಾರೆ.

Tap to resize

Latest Videos

ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು ಹೋಂಸ್ಟೇ, ರೆಸಾರ್ಟ್‌, ರೆಸ್ಟೋರೆಂಟ್‌ ಸೇರಿದಂತೆ ಆತಿಥ್ಯ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ ಕಳೆದೊಂದು ವಾರದಿಂದ ರೆಸ್ಟೋರೆಂಟ್‌ಗಳಿಗೆ ಶೇ.30 ರಷ್ಟು ಸ್ಪಂದನೆ ಹೊರತುಪಡಿಸಿದರೆ ವಿವಿಧ ಆತಿಥ್ಯ ಕೇಂದ್ರಗಳು ಅತಿಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಆತಿಥ್ಯ ಕೇಂದ್ರಗಳು ಸರ್ಕಾರ 33 ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೆಸಾರ್ಟ್‌, ಹೋಟೆಲ್‌ ಹಾಗೂ ಹೋಂಸ್ಟೇ ಮಾಲೀಕರು ಇನ್ನೂ ಬಾಗಿಲು ತೆರೆಯಲು ಹಿಂಜರಿಯುತ್ತಿದ್ದಾರೆ.

ಸರ್ಕಾರಕ್ಕೆ ಗ್ರಾಮಸ್ಥರ ಚಾಲೆಂಜ್! ಸಂಪರ್ಕ ಸೇತುವೆ ನಿರ್ಮಿಸಿ ಮಾದರಿ

ಕೊಡಗಿನಲ್ಲಿ ಶೇ.30 ರಷ್ಟು ಹೋಂಸ್ಟೇಗಳು ಆರಂಭವಾಗಿದೆ. ಆದರೆ ಜಿಲ್ಲಾದ್ಯಂತ ಇರುವ ಹೋಂಸ್ಟೇಗಳಿಗೆ ಯಾವುದೇ ಬುಕ್ಕಿಂಗ್‌ ಬಂದಿಲ್ಲ. ಪ್ರವಾಸಿ ತಾಣಗಳು ತೆರೆಯಲಾಗಿಲ್ಲ. ಆದ್ದರಿಂದ ಪ್ರವಾಸಿಗರು ಬರುವುದು ಕಷ್ಟ. ಈ ಹಿನ್ನೆಲೆಯಲ್ಲಿ ಹೋಂ ಸ್ಟೇಗಳಿಗೆ ಮತ್ತೆ ನಷ್ಟದ ಭೀತಿ ಎದುರಾಗಿದೆ. ಯಾರೂ ಕೂಡ ಕಡ್ಡಾಯವಾಗಿ ಹೋಂ ಸ್ಟೇಗಳನ್ನು ತೆರೆಯುವಂತೆ ಒತ್ತಾಯ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ಹೋಂಸ್ಟೇಗಳಲ್ಲಿ ಅತಿಥಿಗಳಿಗೆ ವಾಸ್ತವ್ಯ ಕಲ್ಪಿಸುವುದು ತಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್‌ನ ಅಧ್ಯಕ್ಷರು ಸೂಚಿಸಿದ್ದಾರೆ.

ಪ್ರವಾಸಿ ತಾಣಗಳು ಬಂದ್‌: ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ತೆರೆಯಲು ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಾಗಿರುವ ರಾಜಾಸೀಟು, ದುಬಾರೆ, ನಿಸರ್ಗಧಾಮ, ಟಿಬೆಟ್‌ ಕ್ಯಾಂಪ್‌, ಗದ್ದುಗೆ, ಅಬ್ಬಿ ಜಲಪಾತ, ಮಲ್ಲಳ್ಳಿ ಸೇರಿದಂತೆ ಹಲವು ಜಲಪಾತಗಳಿಗೆ ತೆರಳಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಜಲಪಾತಗಳು ಮೈದುಂಬಿ ಹರಿಯಲರಾಂಭಿಸುತ್ತವೆ.

ಮಳೆಗಾಲದಲ್ಲಿ ಕೊಡಗಿನಲ್ಲಿ ಕಾಣಸಿಗುವ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಕನ್ಯೆಯರ ಸೌಂದರ್ಯ ಸವಿಯಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನಿಂದ ಪ್ರವಾಸಿಗರು ಬರುತ್ತಿದ್ದರು. ಆದರೆ ಈ ಬಾರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧವಿದೆ. ಪ್ರವಾಸಿ ತಾಣಗಳನ್ನು ತೆರೆದರೆ ಮಾತ್ರ ಜಿಲ್ಲೆಗೆ ಒಂದಿಷ್ಟುಮಂದಿ ಪ್ರವಾಸಿಗರು ಆಗಮಿಸುತ್ತಾರೆ. ನಮಗೂ ಆದಾಯವಾಗುತ್ತದೆ ಎನ್ನುವುದು ಆತಿಥ್ಯ ಕೇಂದ್ರಗಳ ಮಾಲೀಕರ ಅಭಿಪ್ರಾಯ.

ದೇವಾಲಯಗಳಲ್ಲ ಭಕ್ತರ ಸಂಖ್ಯೆ ವಿರಳ

ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಲಾಕ್‌ಡೌನ್‌ ಮಾಡಲಾಗಿದ್ದ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವಾಲಯಗಳು ಆರಂಭವಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲೂ ದೇವಾಲಯಗಳ ಬಾಗಿಲು ತೆರೆದು ಒಂದು ವಾರ ಕಳೆದಿದ್ದು, ಪ್ರತಿ ದಿನ ದೇವಾಲಯಗಳಿಗೆ ಬೆರಳೆಣಿಕೆಯಷ್ಟೇ ಭಕ್ತರು ಕಂಡು ಬರುತ್ತಿದ್ದಾರೆ.

ಕೊಡಗಿನ ಪ್ರಸಿದ್ಧ ದೇವಾಲಯಗಳಾದ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ, ಪಾಡಿ ಇಗ್ಗುತಪ್ಪ ದೇವಾಲಯ, ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳನ್ನು ಕಳೆದ ಸೋಮವಾರದಿಂದ ತೆರೆಯಲಾಗಿದೆ. ಆದರೆ ಸ್ಥಳೀಯ ಭಕ್ತರು ಮಾತ್ರ ಬಂದು ಹೋಗುತ್ತಿದ್ದಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಕಾರ್ಯಕ್ಕೆ ಅವಕಾಶ ನೀಡಿಲ್ಲ. ಜಿಲ್ಲೆಯ ಪ್ರಸಿದ್ಧ ದರ್ಗಾ ಎಮ್ಮೆಮಾಡುವಿನ ಸೂಫಿ ಶಹೀದ್‌ ದರ್ಗಾದಲ್ಲೂ ಭಕ್ತರ ಸಂಖ್ಯೆ ಕಡಿಯಿದೆ. ಜಿಲ್ಲೆಯ ಹಲವು ಚಚ್‌ರ್‍ ಹಾಗೂ ಮಸೀದಿಗಳನ್ನು ತೆರೆಯಲಾಗಿದ್ದು, ವಿರಳವಾಗಿ ಜನರು ತೆರಳುತ್ತಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳಂತೆ, ದೇವಾಲಯಗಳಿಗೆ ಬರುತ್ತಿರುವ ಭಕ್ತರನ್ನು ದೇವಾಲಯದ ಪ್ರವೇಶ ದ್ವಾರದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಅಲ್ಲದೆ ಪ್ರತಿ ಭಕ್ತರಿಗೆ ಸ್ಯಾನಿಟೈಸರ್‌ ಕೂಡ ಹಾಕಲಾಗುತ್ತಿದೆ. ದೇವಾಲಯಗಳಿಗೆ ಬರುವ ಭಕ್ತರು ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಮಾಸ್ಕ್‌ ಧರಿಸದೆ ಇದ್ದಲ್ಲಿ ಅಂಥವರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧಿ​ಸಲಾಗಿದೆ. ಆದರೂ, ದೇವಾಲಯದಲ್ಲಿ ಕೇವಲ ಬೆರಳೆಣಿಕೆಯಷ್ಟುಮಾತ್ರವೇ ಭಕ್ತರು ಬರುತ್ತಿದ್ದು ಜನರಿಗೆ ಕೊರೋನಾ ಆತಂಕ ಇನ್ನೂ ದೂರವಾಗಿಲ್ಲ ಎನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.

 

ಜಿಲ್ಲೆಯಲ್ಲಿ ಶೇ.25ರಿಂದ 30 ರಷ್ಟುಹೋಂಸ್ಟೇಗಳು ಮಾತ್ರ ಆರಂಭವಾಗಿದೆ. ಬೆಂಗಳೂರಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ಕೊರೋನಾ ಭೀತಿಯಿಂದ ಕೆಲವರು ಇನ್ನೂ ಹೋಂಸ್ಟೇಗಳನ್ನು ಆರಂಭಿಸಿಲ್ಲ. ಆರಂಭಿಸಲಾಗಿರುವ ಕೆಲವು ಹೋಂಸ್ಟೇಗಳಿಗೂ ಬುಕ್ಕಿಂಗ್‌ ಇಲ್ಲ. ಕೆಲವು ಹೋಂಸ್ಟೇಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.

- ಅನಂತಶಯನ, ಅಧ್ಯಕ್ಷರು, ಕೊಡಗು ಜಿಲ್ಲಾ ಹೋಂಸ್ಟೇ ಮಾಲೀಕರ ಸಂಘ

ಸರ್ಕಾರದ ಕೆಲವು ಮಾರ್ಗಸೂಚಿಯಿಂದಾಗಿ ಕೊಡಗಿನಲ್ಲಿ ಶೇ.90ರಷ್ಟುರೆಸಾರ್ಟ್‌ಗಳು, ಲಾಡ್ಜ್‌ಗಳು, ಹೋಟೆಲ್‌ಗಳು ಬಂದ್‌ ಆಗಿದೆ. ಶೇ.10ರಷ್ಟುಮಾತ್ರ ತೆರೆಯಲಾಗಿದ್ದು, ಪ್ರವಾಸಿ ತಾಣಗಳು ಬಂದ್‌ ಆಗಿರುವುದರಿಂದ ಅದಕ್ಕೂ ಜನರು ಬರುತ್ತಿಲ್ಲ. ರೆಸ್ಟೋರೆಂಟ್‌ಗಳು ಶೇ.30ರಷ್ಟುಮಾತ್ರ ಆರಂಭವಾಗಿದೆ. ಶೇ.20ರಷ್ಟುಮಾತ್ರ ಆದಾಯವಾಗುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಮತ್ತೆ ನಷ್ಟವಾಗಲಿದೆ

- ನಾಗೇಂದ್ರ ಪ್ರಸಾದ್‌, ಅಧ್ಯಕ್ಷರು, ರೆಸಾರ್ಟ್‌- ರೆಸ್ಟೋರೆಂಟ್‌ ಮಾಲೀಕರ ಸಂಘ ಕೊಡಗು

ದೇವಾಲಯಗಳಲ್ಲಿ ಭಕ್ತರಿಗೆ ವೀಕ್ಷಣೆಗೆ ಮಾತ್ರ ಅವಕಾಶ ನೀಡಿರುವುದರಿಂದ ಭಕ್ತರ ಸಂಖ್ಯೆ ವಿರಳವಿದೆ. ಯಾವುದೇ ಸೇವೆಗಳನ್ನು ನಡೆಸಲಾಗುತ್ತಿಲ್ಲ. ಸ್ಥಳೀಯರು ಮಾತ್ರ ದೇವಾಲಗಳಿಗೆ ಬರುತ್ತಿದ್ದಾರೆ. ಪ್ರವಾಸಿಗರು, ಯಾತ್ರಿಕರ ಯಾರೂ ಬರುತ್ತಿಲ್ಲ. ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶವಿಲ್ಲ

- ಜಗದೀಶ್‌, ವ್ಯವಸ್ಥಾಪಕ ಕೊಡಗು ಮುಜರಾಯಿ ಇಲಾಖೆ

click me!