
ಬೆಂಗಳೂರು[ಮಾ.23]: ಹನ್ನೊಂದು ದಿನಗಳ ಅವಧಿಯಲ್ಲಿ ವಿದೇಶ ಪ್ರವಾಸದಿಂದ ರಾಜಧಾನಿಗೆ ಬಂದಿಳಿದ 20 ಸಾವಿರ ಮಂದಿಯನ್ನು ಪತ್ತೆ ಹಚ್ಚಿದ ಡಿಸಿಪಿ ಇಶಾ ಪಂತ್ ನೇತೃತ್ವದ ತಂಡವು, ಆ ನಾಗರಿಕರಿಗೆ ಪೊಲೀಸ್ ನಿಗಾದಲ್ಲಿ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗುವಂತೆ ನೋಟಿಸ್ ಜಾರಿಗೊಳಿಸಿದೆ.
ನಗರದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಸ್.ಭಾಸ್ಕರ್ ರಾವ್ ಅವರು, ವಿದೇಶದಿಂದ ಬಂದಿರುವವರ ಪತ್ತೆಗೆ ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ತಂಡ ರಚಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಅಧಿಕಾರಿಗಳು ನೀಡಿರುವ ಮಾಹಿತಿ ಆಧರಿಸಿ ವಿದೇಶದಿಂದ ಬಂದಿರುವವರ ಹುಡುಕಾಟ ನಡೆದಿದೆ. ಮಾ.8ರಿಂದ ಮಾ.19ರವರೆಗೆ ಸುಮಾರು 43 ಸಾವಿರ ಜನರು ಆಗಮಿಸಿದ್ದಾರೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 20 ಸಾವಿರ ವಿಳಾಸ ಪತ್ತೆಯಾಗಿದ್ದು, ಇನ್ನುಳಿದವರಿಗೆ ಶೋಧ ನಡೆದಿದೆ. ಪತ್ತೆಯಾದವರ ಮನೆಗಳಿಗೆ ತೆರಳಿ ಪೊಲೀಸರು, ಅವರಿಗೆ ಹದಿನಾಲ್ಕು ದಿನಗಳು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
14 ದಿನದ ಕ್ವಾರೈಟೈನ್‌ನಲ್ಲಿ ಇರುವವರ ಕೈಗೂ ಸೀಲ್, ಮನೆಗೇ ತೆರಳಿ ಮುದ್ರೆ!
ಕ್ವಾರಂಟೈನ್‌ಗೆ ಒಳಗಾದವರ ಮೇಲೆ ಪೊಲೀಸರು ನಿರಂತರವಾಗಿ ನಿಗಾವಹಿಸಲಿದ್ದಾರೆ. ಆಯಾ ಪ್ರದೇಶದ ಗಸ್ತು ಸಿಬ್ಬಂದಿ, ನಿಯಮಿತವಾಗಿ ಆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅದೇ ರೀತಿ ದಿನಕ್ಕೆ ವಿಶೇಷ ತಂಡಗಳು ಎರಡ್ಮೂರು ಬಾರಿ ಹಾಗೂ ಇನ್‌ಸ್ಪೆಕ್ಟರ್‌ಗಳು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸುವಂತೆ ಹೇಳಲಾಗಿದೆ. ಅಲ್ಲದೆ, ಕ್ವಾರಂಟೈನ್‌ಗೆ ಒಳಗಾದವರ ಮೇಲೆ ವಿಚಕ್ಷಣೆಗೆ ಸ್ಥಳೀಯ ನಿವಾಸಿಗಳ ಸಹಕಾರ ಪಡೆಯಲಾಗಿದೆ. ಅಕ್ಕಪಕ್ಕದ ಮನೆಯವರಿಗೆ ವಿದೇಶದಿಂದ ಬಂದಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡು ಪೊಲೀಸರು, ಆ ವ್ಯಕ್ತಿಯ ಚಲವಲನದ ಕುರಿತು ಮಾಹಿತಿ ಸಂಗ್ರಹಕ್ಕೆ ನೆರೆಹೊರೆಯವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿಸಿದರು.
ಕೊರೋನಾ ವಿರುದ್ಧ ಸೇನೆಯ ಸಮರ, ಎಲ್ಲೆಲ್ಲಿ ಕೇಂದ್ರ?
ವಿದೇಶ ಪ್ರವಾಸದಿಂದ ಮರಳಿರುವ ನಾಗರಿಕರು, ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು. ಮನೆಗಳಿಗೆ ತೆರಳಿ ವಿಶೇಷ ತಂಡವು, ಕ್ವಾರಂಟೈನ್‌ಗೆ ಒಳಗಾದವರ ಕೈಗೆ ಸೀಲ್ ಹಾಕಿರುತ್ತಾರೆ. ಹೀಗಿದ್ದರೂ ಅವರು ಮನೆಯಿಂದ ಹೊರ ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪೊಲೀಸರೇ ಅವರನ್ನು ಪತ್ತೆ ಹಚ್ಚಿ ಕೊರೋನಾ ಸೋಂಕಿತರಿಗೆ ಸ್ಥಾಪಿಸಿರುವ ಪ್ರತ್ಯೇಕ ನಿಗಾ ಘಟಕ (ಐಸೋಲೇಷನ್ ಸೆಂಟರ್) ಗಳಿಗೆ ಕರೆದೊಯ್ದು ಬಿಡಲಿದ್ದಾರೆ ಎಂದು ಭಾಸ್ಕರ್‌ರಾವ್ ಎಚ್ಚರಿಕೆ ನೀಡಿದರು.