ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ ಆಗುತ್ತಿರುವ ಕಾರಣ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಕೆಲಸ ಎಂದು ಹೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ರಾಮನಗರ(ನ.16): ನಾನು ಮತ್ತು ಎಸ್.ಟಿ.ಸೋಮಶೇಖರ್ ಸ್ನೇಹಿತರು. ನಾವಿಬ್ಬರು ಒಂದೇ ಪಕ್ಷದಲ್ಲಿ ಇದ್ದವರು. ನಮ್ಮ ಪಕ್ಷದಲ್ಲಿ ನಾಯಕರಾಗಿದ್ದವರು. ಅವರೆಂದರೆ ನಮಗೆ ವಿಶೇಷ. ಅವರಿಗಾಗಿ ನಮ್ಮಲ್ಲಿ ಬೇರೆ ಸ್ಥಾನವೇ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಕುಂಬಳಗೋಡು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮತ್ತು ಸೋಮಶೇಖರ್ ರವರ ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆಯಾಗಿದೆ ಎಂದರು.
ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ: ಎಚ್.ಡಿ.ಕುಮಾರಸ್ವಾಮಿ
ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ ಆಗುತ್ತಿರುವ ಕಾರಣ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಕೆಲಸ ಎಂದು ಹೇಳಿದರು.
ಯಾರು ಏನು ಬೇಕಾದರು ಆರೋಪ ಮಾಡಿಕೊಂಡು ತಿರುಗಾಡಲಿ ಅಭ್ಯಂತರ ಇಲ್ಲ. ಶಾಸಕ ಮುನಿರತ್ನ ಕೇಳಿದರೆ ಅವರಿಗೂ ಅನುದಾನ ಕೊಡುತ್ತೇವೆ. ಅಷ್ಟೇ ಅಲ್ಲ ನಿಮ್ಮನ್ನು ಕೇಳಿಯೇ ಎಸ್.ಟಿ.ಸೋಮಶೇಖರ್ ಅವರಿಗೆ ಪಕ್ಷದ ಶಾಲು ಹಾಕುತ್ತೇವೆ. ಮಾಧ್ಯಮಗಳಿಗೆ ಅಂತಹ ಕಾರ್ಯಕ್ರಮ ಮಾಡಲು ಸಾಧ್ಯವಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಟಾಂಗ್ ನೀಡಿದರು.
ನಮಗೆ ನಮ್ಮದೇ ಪಕ್ಷ ಮತ್ತು ಮುಖ್ಯಮಂತ್ರಿ ಇದ್ದಾರೆ. ನಾನು ಬೇರೆಯವರ ಬಗ್ಗೆ ಮಾತನಾಡಲ್ಲ. ಉತ್ತರವನ್ನು ನೀಡಲ್ಲ. ನಮ್ಮ ಪಕ್ಷದ ಅಧ್ಯಕ್ಷರು ಇರುವಾಗ ನಾವ್ಯಾಕೆ ಬೇರೆ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಲಿ. ಮೊದಲು ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಲಿ ಆಮೇಲೆ ವಿಶ್ಲೇಷಣೆ ಮಾಡೋಣ ಎಂದರು.
ನಾನು ಮುಖ್ಯಮಂತ್ರಿ ಆಗವ ಬಗ್ಗೆ ಏನು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಪದವಿ ಬಗ್ಗೆ ಎಲ್ಲಿಯು ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದೇನೆ. ಅಂತಹ ಪ್ರಶ್ನೆಯನ್ನು ನೀವು ಕೇಳಬೇಡಿ ಎಂದು ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಾಜಿ ಶಾಸಕ ಗೌರಿ ಶಂಕರ್ ನಮ್ಮ ಪಕ್ಷಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಲಾಭ ಆಗಲಿದೆ. ಮುಂಬರುವ ಚುನಾವಣೆಗಳಿಗೂ ಒಳ್ಳೆಯದಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ
ರಾಮನಗರ: ಆಧುನಿಕ ತಂತ್ರಜ್ಞಾನ ಬಳಸಿ ಕೆಲವೇ ಗಂಟೆಗಳಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸುತ್ತಿರುವ ಪೊಲೀಸ್ ಇಲಾಖೆ ವ್ಯವಸ್ಥಿತ ಮತ್ತು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಿ, ಮತ್ತಷ್ಟು ಜನಸ್ನೇಹಿಯಾಗಿ ಕೆಲಸ ಮಾಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸರಿಗೆ ಸಲಹೆ ನೀಡಿದರು.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಕುಂಬಳಗೋಡು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟಿಸಿದ ಅವರು, ನಮ್ಮ ಪೊಲೀಸರು ಅತ್ಯಂತ ಸಶಕ್ತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಂಬಳಗೋಡು ಪೊಲೀಸ್ ಠಾಣೆ ಕಟ್ಟಡ ಹಳೆಯದಾಗಿತ್ತು. ಹೀಗಾಗಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 3.56 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಈ ಹಿಂದೆ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅವರು ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದರು. ಈ ಪೊಲೀಸ್ ಠಾಣೆ ಯಲ್ಲಿ ಏನೆಲ್ಲ ಇರಬೇಕೋ ಅದೆಲ್ಲವು ಇಲ್ಲಿದೆ. ರಾಜ್ಯದ ಮಾದರಿ ಪೊಲೀಸ್ ಠಾಣೆಗಳ ಪೈಕಿ ಕುಂಬಳಗೋಡು ಪೊಲೀಸ್ ಠಾಣೆಯೂ ಒಂದಾಗಿದೆ ಎಂದು ಹೇಳಿದರು.
ಈ ಠಾಣೆಯ ಕಟ್ಟಡದಲ್ಲಿ ಮಹಿಳಾ ಪೊಲೀಸರಿಗೆ ವಿಶ್ರಾಂತಿ ಗೃಹ, ಸ್ನಾನದ ಗೃಹವನ್ನು ಇಲ್ಲಿ ನಿರ್ಮಿಸಲಾಗಿದೆ. ನ್ಯಾಯಾಲಯದ ಅನುನತಿ ಪಡೆದು ಹಳೆ ರೆಕಾರ್ಡ್ ಗಳನ್ನು ಸುಡಲು ಅವಕಾಶ ಪಡೆದಿದ್ದೇವೆ. ಆದರೆ, ಇಲ್ಲಿ ಹಳೆಯ ರೆಕಾರ್ಡ್ ಗಳನ್ನು ಇಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರದ ಮಧ್ಯೆ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಸಚಿವರು ಬ್ಯುಸಿ: ಕೋಟ ಕಿಡಿ
ಹಂಪಾಪುರ ಕುಂಬಳಗೋಡ ಠಾಣೆಗೆ:
ಕುಂಬಳಗೋಡಿನ ಪ್ರದೇಶ ದೊಡ್ಡದಾಗಿದೆ. ಪಕ್ಕದಲ್ಲಿನ ಹಂಪಾಪುರವು ಕಗ್ಗಲಿಪುರ ಪೊಲೀಸ್ ಠಾಣೆಗೆ ಸೇರಿದೆ. ಈ ಗ್ರಾಮ ಕುಂಬಳಗೋಡಿನಿಂದ 1 ಕಿ.ಮೀ.ದೂರ ಇದ್ದರೆ, ಕಗ್ಗಲೀಪುರದಿಂದ 35 ಕಿ.ಮೀ. ದೂರ ಇದೆ. ಹೀಗಾಗಿ ಹಂಪಾಪುರವನ್ನು ಕುಂಬಳಗೋಡು ಠಾಣಾ ವ್ಯಾಪ್ತಿಗೆ ಸೇರಿಸಲಾಗುವುದು. ಈ ಠಾಣೆಯಲ್ಲಿ ನಾಲ್ಕು ಮಂದಿ ಸಬ್ ಇನ್ಸ್ ಪೆಕ್ಟರ್ ಇರಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಈ ವೇಳೆ ಶಾಸಕ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಶರವಣ, ಎಡಿಜಿಪಿ ರಾಮಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಪೊಲೀಸ್ ಪೇದೆಗಳ ವರ್ಗಾವಣೆ ಸಂಬಂಧ ಮೊದಲು ಜಿಲ್ಲಾ ಮಟ್ಟದ ವರ್ಗಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವಕಾಶ ನೀಡಲಾಗಿತ್ತು. ಇತರೆ ಜಿ ವರ್ಗಾವಣೆ ಸಂಬಂಧ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕಿತ್ತು. ಆದರೀಗ, ಸೆಂಟ್ರಲೈಸ್ ಮಾಡಿದ್ದೇವೆ. ಎಲ್ಲವು ಆನ್ ಲೈನ್ ಮಾಡಿ, ಕೌನ್ಸಿಲಿಂಗ್ ಮಾಡುತ್ತೇವೆ. ಒಮ್ಮೆ ವರ್ಗಾವಣೆಯಾದರೆ ಇಂತಿಷ್ಟು ವರ್ಷ ಕೆಲಸ ಮಾಡಲೇಬೇಕು. ಹೀಗಾಗಿ ವರ್ಗಾವಣೆ ಬಗ್ಗೆ ಗೊಂದಲಗಳಿವೆ. ಎಲ್ಲರಿಗು ವರ್ಗಾವಣೆ ನೀಡಲು ಸಾಧ್ಯವಿಲ್ಲ. ಆದ್ಯತೆ ಮೇರೆಗೆ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.