ಶಿಗ್ಗಾಂವಿ ಹಾಗೂ ಸವಣೂರ ಏತ ನೀರಾವರಿ ಯೋಜನೆಗಳ ಬಾಕಿ ಕಾಮಗಾರಿ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ| ಈ ವರ್ಷದ ನವಂಬರ್ ಒಳಗೆ ಕಾಮಗಾರಿ ಮುಗಿಸಿ ನೀರು ತುಂಬಿಸುವ ಟ್ರಯಲ್ ಆರಂಭಿಸಬೇಕು| ಮುಂದಿನ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಲು ಅನುಕೂಲ|
ಹಾವೇರಿ(ಜು. 06): ಶಿಗ್ಗಾಂವಿ ಹಾಗೂ ಸವಣೂರ ಏತ ನೀರಾವರಿ ಯೋಜನೆಗಳ ಬಾಕಿ ಕಾಮಗಾರಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮದ ಅಭಿಯಂತರುಗಳಿಗೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಶಿಗ್ಗಾಂವಿ-ಸವಣೂರ ಏತ ನೀರಾವರಿ ಯೋಜನೆಯ ಬಾಕಿ ಉಳಿದ ಕಾಮಗಾರಿಗಳು, ಪೈಪ್‌ಲೈನ್ ಅಳವಡಿಕೆ, ಭೂಸ್ವಾಧೀನ ಕಾರ್ಯ, ಪರಿಹಾರ ವಿತರಣೆ ಕುರಿತಂತೆ ಅಭಿಯಂತರರುಗಳೊಂದಿಗೆ ಸಭೆ ನಡೆಸಿದ ಅವರು, ಈ ವರ್ಷದ ನವಂಬರ್ ಒಳಗೆ ಕಾಮಗಾರಿ ಮುಗಿಸಿ ನೀರು ತುಂಬಿಸುವ ಟ್ರಯಲ್ ಆರಂಭಿಸಬೇಕು. ಇದರಿಂದ ಮುಂದಿನ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಣಿಬೆನ್ನೂರು: ಬಸ್ ತಂಗುದ್ದಾಣದಲ್ಲಿ ಕೊರೋನಾ ಶಂಕಿತನ ಶವ ಇಟ್ಟು ಹೋದರು!
ಹತ್ತಿಮತ್ತೂರ, ಕಡಕೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ಪೈಪ್‌ಗಳನ್ನು ಬದಲಾಯಿಸಿ ಹೆಚ್ಚುವರಿ ಪ್ರಮಾಣದ ಪೈಪ್‌ಗಳನ್ನು ಅಳವಡಿಸಬೇಕು. ಈ ಪೈಪ್ ಅಳವಡಿಕೆ ಕುರಿತಂತೆ ಅಂದಾಜು ಪತ್ರಿಕೆಯನ್ನು ತ್ವರಿತವಾಗಿ ಅನುಮೋದನೆಗೆ ಕಳುಹಿಸಿ ಕೊಡಬೇಕು. ಈಗ ಅಳವಡಿಸಿರುವ ಪೈಪ್‌ಗಳನ್ನು ಸಣ್ಣ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸುವಂತೆ ಸೂಚನೆ ನೀಡಿದರು.
ಬಾಕಿ ಉಳಿದಿರುವ ಹೆಡ್‌ವರ್ಕ್ ಕಾಮಗಾರಿಗಳು, ಜಾಕ್‌ವೆಲ್ ಪಂಪ್‌ಗೌಸ್ ಕಾಮಗಾರಿಗಳು, ಇಂಟಲ್ ಕೆನಾಲ್ ಸಬ್‌ಸ್ಟೇಷನ್, ರೇಜಿಂಗ್ ಮೇನ್, ಗ್ರಾವಿಟಿ ಮೇನ್ ಹಾಗೂ ಚೇಂಬರ್ಸ್ ನಿರ್ಮಾಣ, ಪೈಪ್ ಲೈನ್ ಅಳವಡಿಕೆ ಪ್ರಗತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ನೀಡಿಕೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತ್ವರಿತವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಜಿ.ದೇವರಾಜ, ಜಿಪಂ ಸಿಇಒ ರಮೇಶ ದೇಸಾಯಿ, ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪೂರ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಡಿಎಚ್‌ಒ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ನಾಗರಾಜ ನಾಯಕ ಇತರರು ಇದ್ದರು.