ಅಡಕೆಯಿಂದ ಹೋಳಿಗೆ ತಯಾರಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆ

By Kannadaprabha News  |  First Published Jul 21, 2021, 7:18 AM IST
  • ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಹಾಗೂ ಉಪ ಬೆಳೆ ಕೋಕೋಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
  • ಮೌಲ್ಯವರ್ಧಿತ ಉತ್ಪನ್ನವಾಗಿ ಶುಕ್ರ ದೆಸೆ ಬಂದಿದೆ.

ವರದಿ :  ಆತ್ಮಭೂಷಣ್‌
 

 ಮಂಗಳೂರು (ಜು.21):  ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ ಹಾಗೂ ಉಪ ಬೆಳೆ ಕೋಕೋಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಜೊತೆಗೆ ಈಗ ಮೌಲ್ಯವರ್ಧಿತ ಉತ್ಪನ್ನವಾಗಿ ಶುಕ್ರ ದೆಸೆ ಬಂದಿದೆ.

Tap to resize

Latest Videos

ಕೋಕೋ ಹಾಗೂ ಅಡಕೆ ಉತ್ಪನ್ನದಿಂದ ಸ್ವಾದಿಷ್ಟಕರ ಸಿಹಿ ತಿನಿಸು ಹೋಳಿಗೆ(ಒಬ್ಬಟ್ಟು) ತಯಾರಿಸಲು ಸಾಧ್ಯ ಎಂಬುದನ್ನು ದ.ಕ. ಜಿಲ್ಲೆಯ ಪುತ್ತೂರಿನ ಗುರಿಮೂಲೆ ನಿವಾಸಿ, ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಎಂಬವರು ತೋರಿಸಿಕೊಟ್ಟಿದ್ದಾರೆ. ಇದು ಭವಿಷ್ಯದಲ್ಲಿ ಈ ವಾಣಿಜ್ಯ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆ ಇದೆ. ಅಲ್ಲದೆ ಬೆಳೆ ಹಾಗೂ ಬೆಳೆಗಾರರಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಮಂಗಳೂರು: ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೇಟ್‌ ಮಾರ್ಕೆಟ್‌ಗೆ..!

ಕಳೆದ ವರ್ಷ ಬದಿಯಡ್ಕ ಬಳಿಯ ಸುದರ್ಶನ್‌ ಬೆದ್ರಾಡಿ ಎಂಬವರು ಅಡಕೆಯಿಂದ ಲಡ್ಡು ತಯಾರಿಸಿದ್ದರು. ಬಳಿಕ ವಿಟ್ಲದ ಪಾಕತಜ್ಞರೊಬ್ಬರು ಹಲಸು, ಅನಾನಸು, ಕ್ಯಾರೆಟ್‌, ಖರ್ಜೂರ ಹಣ್ಣುಗಳ ಹೋಳಿಗೆ ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದರು. ಕರಾವಳಿಯಲ್ಲಿ ಈ ಮೊದಲು ಕಡ್ಲೆಬೇಳೆ ಹಾಗೂ ತೆಂಗಿನಕಾಯಿ ಹೋಳಿಗೆ ಜನಪ್ರಿಯವಾಗಿತ್ತು.

ಈ ರೈತನ ಸಾಧನೆಗೆ ಗೂಗಲ್, ಫೇಸ್‌ಬುಕ್ ಸ್ಪೂರ್ತಿ..!

ಅಡಕೆಯಿಂದ ಚಾಕಲೇಟ್‌, ಪೇಯ, ಕಾಜು ಸುಪಾರಿ ಹೀಗೆ ನಾನಾ ಮೌಲ್ಯವರ್ಧಿತ ಸಿಹಿ ಉತ್ಪನ್ನ ಮಾರುಕಟ್ಟೆಕಂಡಿದೆ. ಕೋಕೋ ಉತ್ಪನ್ನದಿಂದ ಚಾಕಲೇಟ್‌, ಪೇಯ ಕೂಡ ತಯಾರಿಸಲಾಗಿದೆ. ಅಡಕೆ ಹೋಳಿಗೆ ಇಷ್ಟರಲ್ಲೇ ಖಾಸಗಿಯಾಗಿ ಮಾರುಕಟ್ಟೆಪ್ರವೇಶಿಸಲಿದ್ದು, ಕೋಕೋ ಹೋಳಿಗೆಗೆ ಕರ್ನಾಟಕ ಮಾತ್ರವಲ್ಲ ಕೇರಳದಲ್ಲೂ ಬೇಡಿಕೆ ವ್ಯಕ್ತವಾಗಿದೆ ಎನ್ನುತ್ತಾರೆ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ (ಮೊಬೈಲ್‌-8880885110).

ಹೋಳಿಗೆ ಮಾಡೋದು ಹೇಗೆ?:

ಒಣ ಕೋಕೋ ಬೀನ್ಸನ್ನು ಹುರಿದು ಹಿಟ್ಟು ಮಾಡಿ ಅದಕ್ಕೆ ರವೆ ಹಾಗೂ ಸಕ್ಕರೆ ಪಾಕ ಸೇರಿಸಿ ಉಂಡೆ ಮಾಡಿ ಕನಕ(ಮೈದಾ ಹಿಟ್ಟಿನ ಉಂಡೆ ರಚನೆ) ಜೊತೆ ಲಟ್ಟಿಸಿ ತಯಾರಿಸಲಾಗುತ್ತದೆ. ಅಡಕೆ ಹೋಳಿಗೆಗೆ 2 ವರ್ಷ ಹಿಂದಿನ ಹಳೆ ಅಡಕೆ(ಡಬ್ಬಲ್‌ ಚೋಲ್‌) ಅತ್ಯುತ್ತಮ. ಹಳೆ ಅಡಕೆಯನ್ನು ಸಣ್ಣ ತುಂಡು ಮಾಡಿ ತುಪ್ಪದ ಜೊತೆ ಮಿಕ್ಸಿಯಲ್ಲಿ ಅರೆದು ನೀರು ಹಾಕಿ ಬೇಯಿಸಬೇಕು. ಬಳಿಕ ರವೆಯನ್ನು ಮಿಶ್ರಣ ಮಾಡಿ ಸಕ್ಕರೆ ಪಾಕ ಸೇರಿಸಿ ಉಂಡೆ ಕಟ್ಟಿಕನಕ ಜೊತೆ ಹೋಳಿಗೆ ತಯಾರಿಸಿದ್ದಾರೆ. ಇದನ್ನು ಪ್ರಾಯೋಗಿಕವಾಗಿ ಮಾಡಿದ್ದು, 250 ಗ್ರಾಂ ಹಳೆ ಅಡಕೆ ಬಳಸಿ 52 ಹೋಳಿಗೆ ತಯಾರಿಸಲಾಗಿದೆ. ಕೋಕೋ ಹೋಳಿಗೆಗೆ 1 ಕೇಜಿ ಕೋಕೋ ಬೀನ್ಸ್‌ ಬಳಸಿದ್ದು, 130 ಹೋಳಿಗೆ ತಯಾರಾಗಿದೆ. ಪ್ರಸಕ್ತ ಕೋಕೋ ಹೋಳಿಗೆ ಒಂದಕ್ಕೆ 15 ರು. ಹಾಗೂ ಅಡಕೆ ಹೋಳಿಗೆಗೆ 22 ರು. ದರ ನಿಗದಿಪಡಿಸಲಾಗಿದೆ.

ವಿವಿಧ ಬಗೆಯ ಕೃಷ್ಯುತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನವಾಗಿ ಹೋಳಿಗೆ ತಯಾರಿಗೆ ಯೋಚಿಸಿ ಯಶಸ್ವಿಯೂ ಆಗಿದ್ದೇನೆ. ಅಡಕೆ ಹೋಳಿಗೆ ತಯಾರಿಸಲು ಹಳೆ ಅಡಕೆಯನ್ನು ಪುಡಿ ಮಾಡುವುದು ಸುಲಭವಲ್ಲ. ಅಡಕೆ ಪುಡಿ ಮಾಡುವ ಯಂತ್ರವೊಂದು ಲಭಿಸಿದರೆ, ಅಡಕೆ ಹೋಳಿಗೆಯನ್ನು ಸುಲಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಸಾಧ್ಯ.

- ಶ್ರೀಕೃಷ್ಣ ಶಾಸ್ತ್ರಿ, ಗುರಿಮೂಲೆ, ಪಾಕತಜ್ಞ

click me!