ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ವ್ಯಾಪಕ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸತತ ಮೂರನೇ ದಿನ ಗುರುವಾರವೂ ಶಾಲೆ ಹಾಗೂ ಪದವಿ ಪೂರ್ವ ಹಂತದ ವರೆಗಿನ ಕಾಲೇಜುಗಳಿಗೆ ರಜೆ ನೀಡಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಂಗಳೂರು/ಉಡುಪಿ (ಜು.೬) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ವ್ಯಾಪಕ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸತತ ಮೂರನೇ ದಿನ ಗುರುವಾರವೂ ಶಾಲೆ ಹಾಗೂ ಪದವಿ ಪೂರ್ವ ಹಂತದ ವರೆಗಿನ ಕಾಲೇಜುಗಳಿಗೆ ರಜೆ ನೀಡಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು.6ರಂದೂ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ 1077 ಹಾಗೂ ದೂರವಾಣಿ: 0824 - 2442590 ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
undefined
Uttara kannada rain: ಕರಾವಳಿಯಲ್ಲಿ ಮುಂದುವರಿದ ಮಳೆ: ವೃದ್ಧೆ ಬಲಿ
ಉಡುಪಿ ಜಿಲ್ಲಾದ್ಯಂತ ಎಲ್ಲ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಗುರುವಾರ ರೆಡ್ ಅಲರ್ಚ್ ಹಾಗೂ ಹೆಚ್ಚಿನ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ರಜೆ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಗಡಿನಾಡು ಕಾಸರೋಗುಡು ಜಿಲ್ಲೆಯಲ್ಲಿ ಸತತ ಮೂರನೇ ದಿನ ಗುರುವಾರವೂ ಅಲ್ಲಿನ ಜಿಲ್ಲಾಧಿಕಾರಿ ಭಾರಿ ಮಳೆ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.
ಉಡುಪಿ ಜಡಿಮಳೆಗೆ ಇನ್ನೆರಡು ಜೀವಹಾನಿ
ಉಡುಪಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿಮಳೆಗೆ ಉಡುಪಿ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ಮಳೆ ಕಾರಣ ಮೃತರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.
ಕೋಟ ಸಮೀಪ ತೀವ್ರ ಮಳೆಯಲ್ಲಿ ಸ್ಕೂಟರ್ ಸವಾರರೊಬ್ಬರು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಮಲಶಿಲೆ ದೇವಾಲಯಕ್ಕೆ ಪೂಜೆಗೆಂದು ಬಂದಿದ್ದ ಭಕ್ತರೊಬ್ಬರು ಕಾಲು ತೊಳೆಯುತ್ತಿದ್ದಾಗ ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಮಹಿಳೆಯೊಬ್ಬರು ನೀರು ಸೇದುತ್ತಿದ್ದಾಗ ಬಾವಿ ಕುಸಿದು ಒಳಗೆ ಬಿದ್ದು ಮೃತಪಟ್ಟಿದ್ದರು.
ಸೋಮವಾರ ಆರಂಭವಾಗಿರುವ ಮಳೆ ರಾತ್ರಿಹಗಲು ಎನ್ನದೆ ಬಿಡದೇ ಸುರಿಯುತ್ತಿದ್ದು, ಜಿಲ್ಲೆಯ ನದಿಗಳಲ್ಲಿ ನೀರು ತುಂಬುತ್ತಿದೆ. ಉಡುಪಿ ನಗರ ಸಮೀಪದ ಸುವರ್ಣಾ ನದಿಯ ಬಜೆ ಅಣೆಕಟ್ಟೆತುಂಬಿದ್ದು, ನೀರು ಉಕ್ಕಿ ಹರಿಯಲಾರಂಭಿಸಿದೆ.
ಕೃತಕ ಪ್ರವಾಹದ ಭೀತಿ: ಉಡುಪಿ ನಗರದಲ್ಲಿ ಅವೈಜ್ಞಾನಿಕ ಒಳಚರಂಡಿಯಿಂದಾಗಿ ಪ್ರತಿವರ್ಷ ಕೃತಕ ನೆರೆ ಸಂಭವಿಸುತ್ತಿದ್ದು, ಈ ಬಾರಿಯೂ ನಗರದ ಸುತ್ತಲಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ, ಸ್ಥಳೀಯರಲ್ಲಿ ಪ್ರವಾಹದ ಭೀತಿಗೆ ಕಾರಣವಾಗಿದೆ.
ತಗ್ಗು ಗದ್ದೆ ಪ್ರದೇಶಗಳಲ್ಲಿರುವ ಉಡುಪಿಯ ಬನ್ನಂಜೆ ವಾರ್ಡಿನ ಗರಡಿಯ ಅಂಗಣಕ್ಕೆ, ಮೂಡನಿಡುಂಬೂರು ಗ್ರಾಮದ ಗರಡಿ, ಶಿರಿಬೀಡು ವಾರ್ಡ್‌ನಲ್ಲಿರುವ ಗರಡಿಗೆ ಮಳೆ ನೀರು ನುಗ್ಗಿದೆ. ನಗರದ ಕಲ್ಸಂಕ, ಮಠದಬೆಟ್ಟು, ನಿಟ್ಟೂರು ಭಾಗದಲ್ಲಿಯೂ ನೀರು ಹೆಚ್ಚಿದ್ದು, ಕೃತಕ ನೆರೆ ಆತಂಕ ಉಂಟಾಗಿದೆ.
ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ವರುಣನ ಆರ್ಭಟಕ್ಕೆ ಮಂಗಳೂರಲ್ಲಿ ಮೊದಲ ಬಲಿ
ಹೆಚ್ಚಿದ ಕಡಲು ಕೊರೆತ:
ಸಮುದ್ರ ತೀರದಲ್ಲಿ ಮಳೆಯ ಜೊತೆ ಭಾರೀ ಗಾಳಿಯೂ ಬೀಸುತ್ತಿದ್ದು, ಭಾರೀ ಅಲೆಗಳು ಕಾಣಿಸಿಕೊಳ್ಳುತ್ತಿವೆ. ಪಡುಬಿದ್ರಿಯ ಕಾಡಿಪಟ್ಣ ಬೀಚ್‌ನಲ್ಲಿ ರಕ್ಕಸ ಅಲೆಗಳ ಹೊಡೆತಕ್ಕೆ ಭೂಭಾಗ ಸಮುದ್ರ ಪಾಲಾಗುತ್ತಿದೆ. ಈಗಾಗಲೇ 6 ತೆಂಗಿನಮರಗಳು ಕಡಲ ಒಡಲು ಸೇರಿದೆ. ಬೀಚ್‌ನಲ್ಲಿ ಅಳವಡಿಸಲಾಗಿದ್ದ ಇಂಟರ್‌ಲಾಕ್ ಅಲೆಗಳ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾಗಿದೆ. ಸ್ಥಳೀಯ ಮೀನುಗಾರರು ಕೈರಂಪಣಿ ಬೋಟು, ಸಾಮಾಗ್ರಿಗಳನ್ನು ಇಡುವ ಗೋದಾಮಿನವರೆಗೆ ಸಮುದ್ರ ಅಲೆಗಳು ಚಾಚುತ್ತಿದ್ದು, ಗೋದಾಮು ಸಮುದ್ರ ಪಾಲಾಗುವ ಅಪಾಯದಲ್ಲಿದೆ.