ಮಂಗಳೂರು ಮಹಾನಗರ ಪಾಲಿಕೆ: ಐವರು ಎಂಜಿನಿಯರ್‌ ಕೆಲಸ ಒಬ್ಬರಿಗೆ!

Published : Jul 06, 2023, 07:02 AM IST
ಮಂಗಳೂರು ಮಹಾನಗರ ಪಾಲಿಕೆ: ಐವರು ಎಂಜಿನಿಯರ್‌ ಕೆಲಸ ಒಬ್ಬರಿಗೆ!

ಸಾರಾಂಶ

ಮಳೆಗಾಲ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ ಎನ್ನುತ್ತಿರುವ ಪಾಲಿಕೆ ಆಡಳಿತ ಅದಕ್ಕೆ ಬೇಕಾದ ಎಂಜಿನಿಯರ್‌ಗಳ ತೀವ್ರ ಕೊರತೆ ಎದುರಿಸುತ್ತಿದೆ. ಸದ್ಯದ ಮಟ್ಟಿಗೆ ಪಾಲಿಕೆಯಲ್ಲಿ ಇರುವುದು ಒಬ್ಬರೇ ಎಕ್ಸಿಕ್ಯೂಟಿವ್‌ ಎಂಜಿನಿಯರ್‌.

ಆತ್ಮಭೂಷಣ್‌

ಮಂಗಳೂರು (ಜು.6) : ಮಳೆಗಾಲ ಆರಂಭವಾಗಿದೆ. ಸೋಮವಾರ ಮಂಗಳೂರಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಧಾರಾಕಾರ ಮಳೆಗೆ ಅಲ್ಲಲ್ಲಿ ಕೃತಕ ನೆರೆ, ದ್ವೀಪಸದೃಶ್ಯ ವಾತಾವರಣ ನಿರ್ಮಾಣವಾಗಿದೆ. ವಾಹನ ಸಂಚಾರ ಸಮೇತ ಜನಜೀವ ಅಸ್ತವ್ಯಸ್ತಕ್ಕೆ ಕಾರಣವಾಗಿದೆ. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಎದುರಿಸಲು ಪಾಲಿಕೆಯಲ್ಲಿ ಇರುವುದು ಒಬ್ಬರೇ ಒಬ್ಬ ಎಂಜಿನಿಯರ್‌ ಎಂದರೆ ನಂಬಲೇ ಬೇಕು. ಅಚ್ಚರಿಯ ಸಂಗತಿ ಎಂದರೆ, ಇವರ ಕೆಲಸವಲ್ಲದೆ, ಖಾಲಿ ಬಿದ್ದಿರುವ ಉಳಿದ ನಾಲ್ವರು ಎಂಜಿನಿಯರ್‌ಗಳ ಕೆಲಸವನ್ನೂ ಇವರೊಬ್ಬರೇ ಮಾಡಬೇಕು. ಹೀಗಾಗಿ ಈ ಬಾರಿಯ ಮುಂಗಾರು ಮಳೆಯನ್ನು ಎದುರಿಸುವುದು ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಮುಂಗಾರು ಆರಂಭಕ್ಕೆ ಮುನ್ನ ಮೇ ತಿಂಗಳಲ್ಲೇ ಪಾಲಿಕೆ ಆಡಳಿತ ಗ್ಯಾಂಗ್‌ಮೆನ್‌ಗಳನ್ನು ಸಿದ್ಧಗೊಳಿಸಿದ್ದಾಗಿ ಹೇಳಿತ್ತು. ಅಲ್ಲಲ್ಲಿ ರಾಜಾ ಕಾಲುವೆಗಳಿಂದ ಹೂಳೆತ್ತುವ ಶಾಸ್ತ್ರವನ್ನೂ ಮಾಡಿಮುಗಿಸಿತ್ತು. ಭಾರಿ ಮಳೆ ಬಂದರೂ ಈ ಬಾರಿ ಪರಿಸ್ಥಿತಿ ನಿಯಂತ್ರಣದಲ್ಲಿ ಇರುತ್ತದೆ ಎಂಬ ವಿಶ್ವಾಸದಲ್ಲಿ ಪಾಲಿಕೆ ಆಡಳಿತ ಹಾಗೂ ಅಧಿಕಾರಗಳು ಇದ್ದರು. ಆದರೆ ಸೋಮವಾರ ಕೆಲವೇ ಗಂಟೆ ಬಂದುಹೋದ ಧಾರಾಕಾರ ಮಳೆ ಪಾಲಿಕೆಯ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿತ್ತು. ಕೃತಕ ನೆರೆಯಿಂದ ಜನತೆ ಕಂಗೆಟ್ಟು ಹೋಗುವಂತೆ ಆಗಿತ್ತು.

 

ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!

ಎಕ್ಸಿಕ್ಯೂಟಿವ್‌ ಎಂಜಿನಿಯರ್‌ಗಳೇ ಇಲ್ಲ:

ಮಳೆಗಾಲ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ ಎನ್ನುತ್ತಿರುವ ಪಾಲಿಕೆ ಆಡಳಿತ ಅದಕ್ಕೆ ಬೇಕಾದ ಎಂಜಿನಿಯರ್‌ಗಳ ತೀವ್ರ ಕೊರತೆ ಎದುರಿಸುತ್ತಿದೆ. ಸದ್ಯದ ಮಟ್ಟಿಗೆ ಪಾಲಿಕೆಯಲ್ಲಿ ಇರುವುದು ಒಬ್ಬರೇ ಎಕ್ಸಿಕ್ಯೂಟಿವ್‌ ಎಂಜಿನಿಯರ್‌. ಸುಪರಿಂಟೆಂಡೆಂಟ್‌ ಎಂಜಿನಿಯರ್‌ ಇಲ್ಲ, ಜಲಸಿರಿ ಯೋಜನೆಗೆ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಇಲ್ಲ, ಸುರತ್ಕಲ್‌, ಕದ್ರಿ ವಲಯದಲ್ಲೂ ಎಂಜಿನಿಯರ್‌ ಇಲ್ಲ. 60 ವಾರ್ಡ್‌ಗಳಿದ್ದು, ಮಂಜೂರಾದ 16 ಸಹಾಯಕ ಎಂಜಿನಿಯರ್‌ ಪೈಕಿ ಇರುವುದು ಕೇವಲ ಮೂರು ಮಂದಿ.

ಐವರ ಕೆಲಸ ಒಬ್ಬರಿಗೆ!:

ಮಹಾನಗರ ಪಾಲಿಕೆಯಲ್ಲಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಇದ್ದಾರೆ. ಅವರಿಗೆ ಅವರದೇ ಇಲಾಖೆಯಲ್ಲಿ ಸಾಕಷ್ಟುಕೆಲಸಗಳು ಇದೆ. ಈಗ ಉಳಿದವರ ಕೆಲಸವನ್ನೂ ಇವರಿಗೆ ಹೊರಿಸಲಾಗಿದೆ.

ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ವರ್ಗಾವಣೆಗೊಂಡ ಬಳಿಕ ಆ ಹುದ್ದೆ ಖಾಲಿ ಬಿದ್ದಿದೆ. ಅದರ ಹೊಣೆಯನ್ನು ಈ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ಗೆ ವಹಿಸಲಾಗಿದೆ. ಅಷ್ಟೇ ಸಾಲದು ಎಂಬಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್‌ ಮಿಷನ್‌ನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಜವಾಬ್ದಾರಿ ನೀಡಲಾಗಿದೆ. ಜಲಜೀವನ್‌ ಮಿಷನ್‌ ವಿಭಾಗಕ್ಕೆ ಹೊಸಬರ ನೇಮಕವಾದರೂ ಅವರು ಇನ್ನೂ ಆಗಮಿಸಿಲ್ಲ. ಇಷ್ಟಕ್ಕೆ ಅವರನ್ನು ಬಿಟ್ಟಿಲ್ಲ, ಕದ್ರಿ, ಸುರತ್ಕಲ್‌ಗಳಲ್ಲಿ ವಲಯಗಳಲ್ಲಿ ಎಂಜಿನಿಯರ್‌ ಹುದ್ದೆ ಇನ್ನೂ ಭರ್ತಿಯಾಗಿಲ್ಲ. ಅವುಗಳ ಜವಾಬ್ದಾರಿಯನ್ನು ಕೂಡ ಇವರೊಬ್ಬರೇ ಮಾಡಬೇಕು. ಹೀಗೆ ತನ್ನ ಇಲಾಖೆ ಸೇರಿದಂತೆ ಒಟ್ಟು ಐವರು ಎಂಜಿನಿಯರ್‌ಗಳ ಕೆಲಸ ಇವರೊಬ್ಬರೇ ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ಸವಾಲು:

ಮಂಗಳೂರಲ್ಲಿ ಭಾರಿ ಮಳೆ ಬಂದರೆ ಕೃತಕ ನೆರೆ, ಮುಳುಗುವುದು ಸಾಮಾನ್ಯವಾಗಿದೆ. ಇದನ್ನು ಎದುರಿಸಬೇಕಾದರೆ ಎಂಜಿನಿಯರ್‌ಗಳ ಉಪಸ್ಥಿತಿ ಇರಲೇ ಬೇಕು. ಆದರೆ ವಿಭಾಗಗಳು ಹಲವು ಇದ್ದರೂ ಇರುವುದು ಇವರೊಬ್ಬರೇ ಎಂಜಿನಿಯರ್‌. ಕೃತಕ ನೆರೆ, ಪ್ರವಾಹ, ಪ್ರಾಕೃತಿಕ ವಿಕೋಪಗಳನ್ನು ಇತರೆ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಒಬ್ಬರೇ ಎಂಜಿನಿಯರ್‌ ನಿರ್ವಹಿಸಬೇಕಾದ ಪ್ರಮೇಯ ಬಂದೊದಗಿದೆ.

ಪದೇ ಪದೇ ಕೃತಕ ನೆರೆ ಯಾಕೆ?

ಸ್ಮಾರ್ಟ್ ಸಿಟಿ ಎಂದೇ ಕರೆಸಿಕೊಳ್ಳುತ್ತಿರುವ ಮಂಗಳೂರು ಮಹಾನಗರ ಒಂದು ಗಂಟೆಯ ನಿರಂತರ ಮಳೆಗೆ ಉಡುಗಿ ಹೋಗುವುದು ಹೇಗೆ? ತಂತ್ರಜ್ಞರಿಂದ ನಿರ್ಮಾಣಗೊಂಡ ಕಾಂಕ್ರಿಟ್‌ ರಸ್ತೆ, ಮೇಲ್ಸೇತುವೆ, ಸಂಪರ್ಕ ರಸ್ತೆಗಳು ಕೃತಕ ನೆರೆಗೆ ಒಳಗಾಗುತ್ತಲೇ ಇರುತ್ತವೆ. ಪ್ರತಿ ವರ್ಷ ಇದು ನಡೆಯುತ್ತಲೇ ಇದ್ದರೂ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರಕ್ಕೆ ಚಿಂತಿಸಿದಂತೆ ಕಂಡುಬರುತ್ತಿಲ್ಲ. ಕೃತಕ ನೆರೆ, ಪ್ರವಾಹದಿಂದ ಜನಸಾಮಾನ್ಯರು ಬವಣೆ ಪಡುತ್ತಲೇ ಇದ್ದಾರೆ.

ಮಂಗಳೂರು ಪಾಲಿಕೆ: ಗೃಹ ಬಳಕೆ ನೀರಿನ ದರ ಇಳಿಕೆ ಆದೇಶ

ಮಳೆಗಾಲಕ್ಕೂ ಮುನ್ನ ಚರಂಡಿ ಹೂಳೆತ್ತುವಿಕೆ, ಹಗಲು- ರಾತ್ರಿಗೆ ಸಿದ್ಧಗೊಂಡ ಗ್ಯಾಂಗ್‌ಮೆನ್‌ ತಂಡಗಳು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಷ್ಟಾಗಿ ನೆರವಿಗೆ ಬರುತ್ತಿಲ್ಲ ಯಾಕೆ ಎನ್ನುವುದು ನಾಗರಿಕರ ಪ್ರಶ್ನೆ.

ಮಂಗಳೂರಲ್ಲಿ ಮಳೆಗಾಲದಲ್ಲಿ ಪ್ರಾಕೃತಿಕ ತೊಂದರೆಯಾದಾಗ ಒಬ್ಬರೇ ಎಂಜಿನಿಯರ್‌ ನಿಭಾಯಿಸಬೇಕಾದ ಅನಿವಾರ್ಯತೆಗೆ ಪಾಲಿಕೆ ಸಿಲುಕಿದೆ. ಒಬ್ಬರಿಂದಲೇ ಎಲ್ಲವನ್ನೂ ನಿರ್ವಹಿಸುವುದು ಸುಲಭದ ಮಾತಲ್ಲ, ಸಾಧ್ಯವೂ ಇಲ್ಲ. ಖಾಲಿ ಹುದ್ದೆ ಭರ್ತಿಗೆ ಪಾಲಿಕೆ ಆಡಳಿತ ಸರ್ಕಾರದ ಗಮನಕ್ಕೆ ಬಂದು ಈ ಸಮಸ್ಯೆ ಬಗೆಹರಿಸಬೇಕು.

-ಹನುಮಂತ ಕಾಮತ್‌, ಸಂಚಾಲಕ, ನಾಗರಿಕ ಹಿತರಕ್ಷಣಾ ವೇದಿಕೆ

ಪಾಲಿಕೆಯಲ್ಲಿ ಎಂಜಿನಿಯರ್‌ಗಳ ಕೊರತೆ ಇದೆ. ಹಾಗೆಂದು ಲಭ್ಯ ಎಂಜಿನಿಯರ್‌ರನ್ನು ಬಳಸಿಕೊಂಡು ನಾಗರಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳನ್ನೂ ಸಮರ್ಥವಾಗಿ ಎದುರಿಸಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

-ಆನಂದ, ಕಮಿಷನರ್‌, ಮಹಾನಗರ ಪಾಲಿಕೆ, ಮಂಗಳೂರು

PREV
Read more Articles on
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು