ಬೀದರ್ ವಿಮಾನ ನಿಲ್ದಾಣ: GMR ಜೊತೆ ಐತಿಹಾಸಿಕ ಒಪ್ಪಂದ

By Kannadaprabha News  |  First Published Jan 31, 2020, 11:19 AM IST

ಬೀದರ್ ಜಿಲ್ಲೆಯ ಅಭಿವೃದ್ಧಿಗೆ ವೇದಿಕೆಯಾಗುತ್ತೆ ಐತಿಹಾಸಿಕ ಒಪ್ಪಂದ | ಬೀದರ್ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಜಿಎಂಆರ್ ಒಪ್ಪಿಗೆ| ರಾಜ್ಯ ಸರ್ಕಾರ ಮತ್ತು ಜಿಎಂಆರ್ ಮಧ್ಯೆ 13 ವರ್ಷಗಳ ಒಡಂಬಡಿಕೆ | ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದ ಖೂಬಾ ಭಾಗಿ|


ಬೀದರ್[ಜ.31]: ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಎಂಆರ್ ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಜಿಎಚ್‌ಐಎಎಲ್) ಇವರೊಂದಿಗೆ ಐತಿಹಾಸಿಕವಾದ ಒಡಂಬಡಿಕೆಗೆ ಸಹಿ ಮಾಡಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು. 

ಕರ್ನಾಟಕ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ್ ಹಾಗೂ ಜಿಎಂಆರ್ ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಜಿಎಚ್ ಐಎಎಲ್) ಪರವಾಗಿ ರಾಜೇಶ್ ಅರೋರಾ ಅವರು ಒಡಂಬಡಿಕೆಗೆ ಸಹಿ ಮಾಡಿದರು. ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್, ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಟ್ರೂಜೆಟ್ ಸಿಇಓ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರ ಕುಮಾರ ಗಂಗವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 

Latest Videos

undefined

CM BSY ಬ್ಯುಸಿ: ಬೀದರ್ ವಿಮಾನ ನಿಲ್ದಾಣ ಉದ್ಘಾಟನೆ ಮುಂದೂಡಿಕೆ

ಕರ್ನಾಟಕ ಸರ್ಕಾರವು ಬೀದರ್ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಬೀದರ್ ವಿಮಾನ ನಿಲ್ದಾಣವು (ಉಡಾನ್-೧) ಯೋಜನೆಯಡಿ ಆರ್‌ಸಿಎಸ್ ವಿಮಾನ ನಿಲ್ದಾಣ ಎಂದು ಆಯ್ಕೆಯಾಗಿ ಬೀದರ್ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಜಿಎಚ್‌ಐಎಎಲ್ ಮುಖಾಂತರ ನಿರ್ವಹಿಸಲು ಫೆ. 7ರಂದು ಪ್ರಾರಂಭಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. 

ನಾಗರಿಕ ವಿಮಾನಯಾನ ಸೇವೆಯನ್ನು ಟರ್ಬೋ ಮೇಘಾ ಏರ್‌ಲೈನ್‌ರವರ ಟ್ರೂ ಜೆಟ್ ವಿಮಾನದ ಮೂಲಕ ಬೀದರ್‌ನಿಂದ ಬೆಂಗಳೂರಿನವರೆಗೆ ಒದಗಿಸಲಾಗುವುದು. ಬೀದರ್ ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಜಿಎಚ್‌ಐಎಎಲ್ ಮುಖಾಂತರ ನಿರ್ವಹಿಸಲು ರಾಜ್ಯ ಸರ್ಕಾರವು ಅನುಮೋದಿಸಿದ್ದು, ಇದರ ಒಪ್ಪಂದ ಮಾಡಿಕೊಂಡಿದ್ದು ಜಿಲ್ಲೆಯ ಮಟ್ಟಿಗೆ ಇದೊಂದು ಐತಿಹಾಸಿಕ ಮೈಲುಗಲ್ಲು ಎಂದರು. 

ಬೀದರ್‌ ವಿಮಾನ ಯಾನದ ಕನಸು ನನಸು: ಬಸ್‌ಗಿಂತ ಫ್ಲೈಟ್‌ ದರ ಅಗ್ಗ!

ಬೀದರ್ ವಿಮಾನ ನಿಲ್ದಾಣದ ಸಿವಿಲ್ ಅಭಿವೃದ್ಧಿ ಕಾಮಗಾರಿಗಳನ್ನು ಕೆಎಸ್‌ಐಐಡಿಸಿ ಅವರ ತಾಂತ್ರಿಕ ಮಾರ್ಗದರ್ಶನದಲ್ಲಿ 12.28 ಕೋಟಿ ರು.ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಬೀದರ್ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಮಗಾರಿಯು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಈ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಧ್ಯ 4.02  ಎಕರೆ ಜಮೀನನ್ನು 3.39  ಕೋಟಿ ರು. ವೆಚ್ಚದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಭವಿಷ್ಯದಲ್ಲಿ ಅವಶ್ಯಕವಿರುವ ಜಮೀನನ್ನು ಸಹ ಸೇರಿಸಿ ಒಟ್ಟಾರೆ 13 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು, ನಾಗರಿಕ ವಿಮಾನಯಾನ ಸೇವೆಯಿಂದ ಬೆಂಗಳೂರು ಹಾಗೂ ದೇಶದ ಇತರೆ ಭಾಗಗಳಿಗೆ ವಿಮಾನ ಯಾನ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಾಗಲಿದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿಶೇಷವಾಗಿ ಬೀದರ್ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. 

ಚವ್ಹಾಣ್, ಖೂಬಾರಿಂದ ವಿಮಾನ ನಿಲ್ದಾಣ ವೀಕ್ಷಣೆ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದ ಭಗವಂತ ಖೂಬಾ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೀದರ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಟರ್ಮಿನಲ್ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ವಿಮಾನದ ನಿಲ್ದಾಣದ ಬಳಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಾಗಬೇಕು. ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಆವರಣ ಸುಂದರವಾಗಿ ಕಾಣುವಂತೆ ಮಾಡಬೇಕು. ವಿಮಾನಯಾನ ಸೇವೆ ಉತ್ತಮವಾಗಿ ಲಭ್ಯವಾ ಗುವಂತಾಗಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕ ಕಲ್ಪಿಸಬೇಕು. ರಕ್ಷಣೆಯ ವಿಷಯದಲ್ಲಿ ಯಾವುದೇ ರೀತಿಯ ಲೋಪಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ್ ವಿಮಾನ ನಿಲ್ದಾಣ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. 

ಈ ವೇಳೆ ಟ್ರೂ ಜೆಟ್ ಸಿಇಓ ಕರ್ನಲ್ ಎಲ್ ಎಸ್‌ಎನ್ ಮೂರ್ತಿ, ಜಿಪಂ ಸಿಇಒ, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್, ಲೋಕೋ ಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಿಆರ್, ನಗರಸಭೆ, ಕೆಎಸ್‌ಐಐಡಿಸಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.

click me!