10 ವರ್ಷಗಳ ಕಾಲ ಕಾಮಗಾರಿ ನಡೆದು ಕೊನೆಗೂ ಮಂಗಳೂರಿನ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಮುಗಿದು ಉದ್ಘಾಟನೆಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ತುಳುವಿನಲ್ಲಿಯೇ ಎಲ್ಲರನ್ನೂ ಆಹ್ವಾನಿಸಿದೆ.
ಮಂಗಳೂರು(ಜ.31): ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗಿ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮಂಗಳೂರು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಇದೀಗ ಮುಕ್ತಾಯವಾಗಿದ್ದು ಜ.31ರಂದು ಉದ್ಘಾಟನೆಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಪಂಪ್‌ವೆಲ್‌ನಲ್ಲಿ ರಚಿಸಲಾದ ಮೇಲ್ಸೇತುವೆಯ ಉದ್ಘಾಟನೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬಳಿಕ 10 ಗಂಟೆಯಿಂದ ಮೇಲ್ಸೇತುವೆ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಸಮಾರಂಭದಲ್ಲಿ ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಹಾಗೂ ನವಯುಗ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ.
‘ಬಲೇ ಪಂಪ್‌ವೆಲ್‌ಗ್’:
ಈ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಪರಿಣಾಮ ವಿಪಕ್ಷ ಮಾತ್ರವಲ್ಲ, ಸ್ವಪಕ್ಷೀಯರಿಂದಲೂ ಸಾಕಷ್ಟುಟೀಕೆಗೆ ಒಳಗಾಗಿತ್ತು. ಇದಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಭಾರೀ ಟ್ರಾಲ್‌ಗೊಳಗಾಗಿದ್ದರು. ಜಾಲತಾಣಿಗರು ‘ಬಲೇ ಪಂಪ್‌ವೆಲ್‌ಗು’ ಎಂದು ಈ ಹಿಂದೆ ಮೇಲ್ಸೇತುವೆ ಕಾಮಗಾರಿಯ ದುಸ್ಥಿತಿಯ ಬಗ್ಗೆ ಅಣಕು ಸಂದೇಶಗಳನ್ನು ಹಾಕಿ ವ್ಯಂಗ್ಯ ಮಾಡಿದ್ದರು. ಅದನ್ನೇ ಈಗ ಬಿಜೆಪಿಗರು ತಿರುಗಿಸಿ ಉದ್ಘಾಟನೆಗೆ ಬನ್ನಿ ಪಂಪ್‌ವೆಲ್‌ಗೆ ಎಂಬ ಅರ್ಥದಲ್ಲಿ ಪ್ರತಿ ಸಂದೇಶಗಳನ್ನು ತುಳು ಭಾಷೆಯಲ್ಲಿ ಹಾಕುತ್ತಿದ್ದಾರೆ. ಈ ಸಂದೇಶ ಕೂಡ ವೈರಲ್ ಆಗುತ್ತಿದೆ.
ಉದ್ಘಾಟನೆಗೆ ಭರ್ಜರಿ ಆಹ್ವಾನ:
ಈ ಹಿಂದೆ ತೊಕ್ಕೊಟ್ಟಿನ ಮೇಲ್ಸೇತುವೆ ಸರಳವಾಗಿ ಉದ್ಘಾಟನೆಯಾಗಿತ್ತು. ಅದನ್ನು ಕೂಡ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದ್ದರು. ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಹೊರತುಪಡಿಸಿದರೆ, ಅದ್ದೂರಿಯ ಜನಸಾಗರ ಇರಲಿಲ್ಲ. ಇದೀಗ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೆ ಬಿಜೆಪಿ ಜಾಲತಾಣಗಳಲ್ಲಿ ಅಧಿಕೃತ ಪ್ರಚಾರ ನಡೆಯುತ್ತಿದೆ. ಮಾತ್ರವಲ್ಲ ಎಲ್ಲರನ್ನೂಆಗಮಿಸುವಂತೆ ಆಹ್ವಾನವನ್ನೂ ನೀಡಲಾಗಿದೆ. ಹಾಗಾಗಿ ಈ ಮೇಲ್ಸೇತುವೆ ಉದ್ಘಾಟನೆಗೆ ಜನಸಾಗರ ಆಗಮಿಸುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.