ಮದ್ದಳೆ ಮಾಂತ್ರಿಕ ಗೋಪಾಲರಾಯ ಇನ್ನಿಲ್ಲ

By Kannadaprabha News  |  First Published Oct 18, 2020, 7:17 AM IST

ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲಯರಾಯ ನಿಧನರಾಗಿದ್ದಾರೆ. ತಮ್ಮ 101ನೇ ವಯಸ್ಸಿನಲ್ಲಿ ಮೃತರಾಗಿದ್ದಾರೆ. 


ಉಡುಪಿ (ಅ.18):  ಮದ್ದಳೆ ಮಾಂತ್ರಿಕ ಎಂದೇ ಪ್ರಸಿದ್ಧರಾಗಿದ್ದ ಯಕ್ಷಗಾನ ಮದ್ದಳೆ ಕಲಾವಿದ, ಯಕ್ಷಗುರು, ಶತಾಯುಷಿ ಹಿರಿಯಡ್ಕ ಗೋಪಾಲ ರಾವ್‌ (101) ಶನಿವಾರ ರಾತ್ರಿ 8.30ಕ್ಕೆ ನಿಧನರಾದರು.

ಯಕ್ಷಗಾನದ ಮದ್ದಳೆ ವಾದ್ಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದ ಅವರು, ಯಕ್ಷಗಾನಕ್ಕೆ ಏರುಮದ್ದಳೆಯನ್ನು ಪರಿಚಯಿಸಿದ ಖ್ಯಾತಿ ಪಡೆದಿದ್ದರು.

Latest Videos

undefined

ಅವರು 1919ರ ಡಿ.5ರಂದು ಶೇಷಗಿರಿ ರಾವ್‌​-ಲಕ್ಷ್ಮೀ ಭಾಯಿ ದಂಪತಿ ಮಗನಾಗಿ ಜನಿಸಿದರು. ಅವರು ದೇಶದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿರದಿಂದ ನೋಡಿದ್ದವರು. 7ನೇ ತರಗತಿ ವರೆಗೆ ಶಿಕ್ಷಣ ಪಡೆದ ಅವರು, ಬತ್ತದ ಕೃಷಿಯಲ್ಲಿ ತೊಡಗಿಕೊಂಡರು. ನಂತರ ತಂದೆಯಿಂದ ಪ್ರೇರಿತರಾಗಿ ಯಕ್ಷಗಾನ ರಂಗಕ್ಕೆ ಕಾಲಿಟ್ಟು, ಯಕ್ಷಗಾನದ ನಾಟ್ಯ, ಗಾನ ಎಲ್ಲ ವಿಭಾಗಗಳನ್ನು ಕಲಿತರು. ಆದರೆ ಅವರು ತಮ್ಮ ಜೀವನನ್ನು ಅರ್ಪಿಸಿಕೊಂಡದ್ದು ಮಾತ್ರ ಮದ್ದಳೆವಾದನಕ್ಕೆ.

ಉಡುಪಿಯಲ್ಲಿ 6 ತಿಂಗಳ ಬಳಿಕ ಕೃಷ್ಣ ದರ್ಶನ ಆರಂಭ : ಇನ್ಮುಂದೆ ಎಳ್ಳು ಅರ್ಪಣೆ ..

ಉಡುಪಿಯ ಪ್ರಸಿದ್ಧ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿ ನೂರಾರು ಯಕ್ಷಗಾನ ಕಲಾವಿದರನ್ನು ಸಿದ್ಧ ಮಾಡಿದ ಅವರು, ಕೋಟ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿಯೂ ಕೈಜೋಡಿಸಿದ್ದರು. ನಂತರ ಕಾರಂತರ ಯಕ್ಷ ಪ್ರಯೋಗಗಳ ಬಗ್ಗೆ ಭಿನ್ನಾಭಿಪ್ರಾಯವನ್ನೂ ಹೊಂದಿದ್ದರು.

ಗೋಪಾಲ ರಾಯರ ಮಾರ್ಗದರ್ಶನದಲ್ಲಿ ಅಮೆರಿಕದ ಮಾರ್ತಾ ಆಸ್ಟಿನ್‌ ಅವರು ಯಕ್ಷಗಾನದ ಬಗ್ಗೆ ಪಿಎಚ್‌ಡಿ ಸಂಶೋಧನೆ ನಡೆಸಿದ್ದು, ನಂತರ ಅವರು 2 ಬಾರಿ ಅಮೆರಿಕಕ್ಕೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಅವರು ರಾಜ್ಯೋತ್ಸವ ಪ್ರಶಸ್ತಿ, ಜನಪದ ಅಕಾಡೆಮಿ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮೊದಲಾದ ಪ್ರಶಸ್ತಿ ಪಡೆದುಕೊಂಡಿದ್ದರು. ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತಿದ್ದ ಅವರು ಪುತ್ರ ಮತ್ತು ನೂರಾರು ಶಿಷ್ಯರು, ಅಭಿಮಾನಿಗಳನ್ನು ಅಗಲಿದ್ದಾರೆ.

click me!