ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿ 17 ಜನ ಶಾಸಕರರು ಕುರಿ, ಕೋಳಿ, ಎಮ್ಮೆ ತರ ಮಾರಾಟವಾಗಿದ್ದಾರೆ ಎಂದು ಕೆಟ್ಟ ಪದಗಳಲ್ಲಿ ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದ ಬಿ ಸಿ ಪಾಟೀಲ್| ಜೆಡಿಎಸ್ ನಿಂದ ಕಾಂಗ್ರೆಸ್ ಗೆ ವಲಸೆ ಬಂದಾಗ ಎಷ್ಟು ಹಣಕ್ಕೆ ಮಾರಾಟವಾಗಿದ್ದರು| ಅವರಿಗೆ ಬಂದಿದ್ದು ದೆಹಲಿ ಹಣವೇ ಎಂದು ಪ್ರಶ್ನಿಸಿದ ಬಿ ಸಿ ಪಾಟೀಲ್| 172 ಸ್ಥಾನಗಳಿಂದ 78 ಸ್ಥಾನಕ್ಕೆ ಕಾಂಗ್ರೆಸ್ ತಂದು ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನು ಅಧೋಗತಿಗೆ ತಂದ ನಾಯಕನಾಗಿದ್ದಾನೆ|
ಹಿರೇಕೆರೂರು(ನ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಹರಿಶ್ಚಂದ್ರ ರೀತಿ ಮಾತಾಡ್ತಾರೆ. ಎಚ್ ಸಿ ಮಹಾದೇವಪ್ಪ, ಕೆ.ಜೆ ಜಾರ್ಜ್, ಕೆಂಪಯ್ಯ ಅವರನ್ನು ವಿಚಾರಿಸಿದರೆ ಹಾಗೂ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸಿದ್ದರಾಮಯ್ಯನ ಬಣ್ಣ ಬಯಲಾಗುತ್ತದೆ. ಅವರ ಬಳಿ ತಿಮ್ಮಪ್ಪನ ಹುಂಡಿಯೇ ಇದೆ ಎಂದು ಅನರ್ಹ ಶಾಸಕ ಬಿ ಸಿ ಪಾಟೀಲ್ ಅವರು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ 17 ಜನ ಶಾಸಕರರು ಕುರಿ, ಕೋಳಿ, ಎಮ್ಮೆ ತರ ಮಾರಾಟವಾಗಿದ್ದಾರೆ ಎಂದು ಕೆಟ್ಟ ಪದಗಳಲ್ಲಿ ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ವಲಸೆ ಬಂದಾಗ ಎಷ್ಟು ಹಣಕ್ಕೆ ಮಾರಾಟವಾಗಿದ್ದರು. ಅವರಿಗೆ ಬಂದಿದ್ದು ದೆಹಲಿ ಹಣವೇ ಎಂದು ಪ್ರಶ್ನಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಲು ಸಿದ್ದರಾಮಯ್ಯನೇ ಕಾರಣ, 172 ಸ್ಥಾನಗಳಿಂದ 78 ಸ್ಥಾನಕ್ಕೆ ಕಾಂಗ್ರೆಸ್ ತಂದು ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನು ಅಧೋಗತಿಗೆ ತಂದ ನಾಯಕನಾಗಿದ್ದಾನೆ. ಪೊಲೀಸ್ ಇಲಾಖೆ ಬಗ್ಗೆ ಅತ್ಯಂತ ಕೀಳು ಭಾಷೆಯಲ್ಲಿ ಮಾತನಾಡಿರುವುದು ಅವರ ಘನತೆಗೆ ತಕ್ಕುದ್ದಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹೆಜ್ಜೆ ಹೆಜ್ಜೆಗೂ ಅವರನ್ನು ರಕ್ಷಣೆ ಮಾಡಿದ್ದು ಇದೇ ಪೊಲೀಸ್ ಇಲಾಖೆ ಅಂತಹ ಪೊಲೀಸ್ ಇಲಾಖೆ ಲಂಚ ತಿನ್ನುವ ಪದ್ಧತಿ ಇದೆ ಎಂದು ಹೇಳಿರುವುದು ಬೇಸರ ತಂದಿದೆ. ಕೂಡಲೇ ಪೊಲೀಸ್ ಇಲಾಖೆಯ ಕ್ಷಮೆ ಕೇಳಬೇಕು ಇಲ್ಲವಾದರೆ ಕೆಲವೇ ದಿನಗಳಲ್ಲಿ ಪೊಲೀಸ್ ಇಲಾಖೆ ನಿಮ್ಮ ವಿರುದ್ಧ ತಿರುಗಿ ಬಿದ್ದರೆ ಆಶ್ಚರ್ಯವೇನು ಇಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿವೈಎಸ್ಪಿ ಗಣೇಶ್ ಆತ್ಮಹತ್ಯೆ ಮಾಡಿಕೊಂಡು ಇಂತಹ ಘಟನೆ ಅವರ ಅವಧಿಯಲ್ಲೇ ಆಗಿರುವುದನ್ನು ಅವರು ಮರೆಯಬಾರದು. ನಾವು ಸಿದ್ದರಾಮಯ್ಯನ ಸ್ವಾರ್ಥ ಸಾಧನೆ ಹಾಗೂ ಕುತಂತ್ರ ಬುದ್ದಿಯಿಂದ ಬೇಸತ್ತು ಕಾಂಗ್ರೆಸ್ ನಿಂದ ಹೊರ ಬಂದೆವು, ನಾವೆಂದೂ ಯಾರ ಬೆನ್ನಿಗೆ ಚೂರಿ ಹಾಕಿಲ್ಲ ಆದರೆ ಸಿದ್ದರಾಮಯ್ಯ ನನ್ನ ಎದೆಗೆ ಚೂರಿ ಹಾಕಿದ್ದಾನೆ. ನಾಲ್ಕು ಜನ ಕುರುಬ ಸಮುದಾಯದ ಶಾಸಕರನ್ನು ಉದ್ದೇಶಪೂರ್ವಕವಾಗಿ ಅನರ್ಹ ಮಾಡಿಸಿದ್ದು ಇದೇ ಸಿದ್ದರಾಮಯ್ಯ ಎಂದು ಜರಿದಿದ್ದಾರೆ.
17 ಶಾಸಕರನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿರುವುದಕ್ಕೆ ಸಾಕ್ಷಿ ಕೊಟ್ಟ ಸಿದ್ದರಾಮಯ್ಯ
ಸಿದ್ದರಾಮಯ್ಯನ ವಿರುದ್ಧ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಯೇ ತೀರುತ್ತೇವೆ,. ಹಿರೇಕೆರೂರಿನಲ್ಲಿ ಕಾಂಗ್ರೆಸ್ಸಿಗೆ ಹಾಳೂರಿಗೆ ಉಳಿದವನೇ ಗೌಡ ಎಂಬಂತಾಗಿದೆ ಅವರಿಗೆ ತಾಲೂಕಿನಲ್ಲಿ ಬನ್ನಿಕೊಡ ಗತಿಯಾಗಿದ್ದಾರೆ. ತಾಲೂಕಿನ ಜನತೆ ತೀರ್ಮಾನ ಮಾಡಿಯಾಗಿದೆ ಕಾಂಗ್ರೆಸ್ ಮುಕ್ತ ತಾಲೂಕನ್ನಾಗಿ ಮಾಡುವಲ್ಲಿ ಹಾಗೂ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವಲ್ಲಿ ತಾಲೂಕು ಮೊದಲ ಸ್ಥಾನದಲ್ಲಿರಲಿದೆ. ಇಲ್ಲಿನ ಮತದಾರರು ಪ್ರಜ್ಞಾವಂತರಾಗಿದ್ದಾರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿ ನನ್ನನ್ನ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.