ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಗೇಟ್ ಬಳಿ ನಡೆದ ಘಟನೆ
ವರದಿ: ಟಿ.ಮಂಜುನಾಥ, ಹೆಬ್ಬಗೋಡಿ
ಬೆಂಗಳೂರು(ನ.10): ಆ ಗ್ರಾಮವೊಂದರ ಇತಿಹಾಸ ಪ್ರಸಿದ್ಧವಾದ ಅರಳಿಕಟ್ಟೆಯ ನಾಗದೇವರಿಗೆ ಅಲ್ಲಿನ ಜನರು ಸಾಕಷ್ಟು ವರ್ಷಗಳಿಂದ ಪ್ರತಿದಿನವೂ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ರು. ಅದೇ ರೀತಿ ನಿನ್ನೆ(ಬುಧವಾರ)ಯೂ ಸಹ ಬೆಳಿಗ್ಗೆ ನಾಗದೇವರಿಗೆ ಪೂಜೆ ಸಲ್ಲಿಸಲು ಹೋದ ಜನರಿಗೆ ಅಲ್ಲಿ ಕಿಡಿಗೇಡಿಗಳು ನಡೆಸಿದ್ದ ವಿಕೃತ ಕೃತ್ಯ ಕಂಡು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದಾದ್ರು ಏನು ಅಂತೀರ ನೋಡಿ ಈ ಸ್ಟೋರಿಯಲ್ಲಿ.
ಕಿಡಿಗೇಡಿಗಳಿಂದ ನಾಗದೇವರ ಮೂರ್ತಿ ಧ್ವಂಸ
ಇದೊಂದು ಹತ್ತಾರು ವರ್ಷಗಳ ಹಳೆಯದಾದ ನಾಗದೇವರ ಅರಳಿಕಟ್ಟೆಯ ಜಾಗ, ಕಳೆದ ರಾತ್ರಿ ಕಿಡಿಗೇಡಿಗಳು ನಾಗದೇವರ ಮೂರ್ತಿಯನ್ನ ಕಲ್ಲಿನಿಂದ ಧ್ವಂಸಗೊಳಿಸಿ ವಿಕೃತಿಯನ್ನ ಮೆರೆದಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಗೇಟ್ ಬಳಿ ನಡೆದಿದೆ.
ಹಿಂದು ಸಾಮರ್ಥ್ಯ ಏನೆಂಬುದು ಸತೀಶ್ ಜಾರಕಿಹೊಳಿಗೆ ತೋರಿಸಬೇಕು: ಸಿ.ಟಿ. ರವಿ
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ನಾಗದೇವರ ಮೂರ್ತಿಯನ್ನ ಕಿಡಿಗೇಡಿಗಳು ಕಳೆದ ರಾತ್ರಿ ಕಲ್ಲಿನಿಂದ ಹೊಡೆದು ಧ್ವಂಸ ಮಾಡಿದ್ದಾರೆ. ಮುಂಜಾನೆ ಎಂದಿನಂತೆ ಅಲ್ಲಿನ ಸುತ್ತಮುತ್ತಲಿನ ಜನರು ಪೂಜೆಗೆಂದು ನಾಗರಕಟ್ಟೆ ಬಳಿ ಬಂದು ನೋಡಿದಾಗ ದೇವರ ಮೂರ್ತಿ ವಿರೋಪಗೊಂಡಿರುವುದನ್ನ ಕಂಡು ಅಲ್ಲಿನ ಭಜರಂಗದಳ ಹಾಗೂ ಹಿಂದೂ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾರೆ. ಕಳೆದ ರಾತ್ರಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಕಲ್ಲಿನಿಂದ ಧ್ವಂಸ ಮಾಡಿ ವಿಕೃತಿ ಮೆರೆದಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಭಜರಂಗದಳ ಕಾರ್ಯಕರ್ತೆ ರಮ್ಯ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿಗೆ ಒಳಪಡುವ ಚಿಕ್ಕ ತೋಗೂರಿನಲ್ಲಿ ಇಪ್ಪತ್ತು ಮೂವತ್ತು ವರ್ಷಗಳಿಗಿಂತ ಹಳೆಯದಾದ ನಾಗದೇವತೆಯ ಅರಳಿಕಟ್ಟೆಯಾಗಿದ್ದು ಜನರು ಪೂಜೆಗಳನ್ನ ಮಾಡಿಕೊಂಡು ಬರುತ್ತಿದ್ದಾರೆ. ರಾತ್ರೋರಾತ್ರಿ ಕಿಡಿಗೇಡಿಗಳು ಈ ರೀತಿಯ ದುಷ್ಕೃತ್ಯವನ್ನ ನಡೆಸಿ ಹೋಗಿದ್ದು, ಹಿಂದೂ ಕಾರ್ಯಕರ್ತರನ್ನ ಕೆರಳಿಸುವಂತೆ ಮಾಡಿದೆ. ದೇವರ ವಿಗ್ರಹವನ್ನ ವಿಕೃತಿಗೊಳಿಸಿರುವ ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೋಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದು, ದುಷ್ಕೃತ್ಯ ಎಸಗಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಭಜರಂಗದಳ ಹಾಗೂ ಹಿಂದೂ ಕಾರ್ಯಕರ್ತ ಸಂತೋಷ್ ಕರ್ತಾಲ್ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಪದೇ ಪದೇ ಹಿಂದೂ ದೇವಾಲಯ ಹಾಗೂ ದೇವರ ಮೂರ್ತಿಗಳನ್ನ ಧ್ವಂಸ ಗೊಳಿಸುವ ಕೃತ್ಯ ಎಸಗಿ ಧರ್ಮ- ಧರ್ಮದ ನಡುವೆ ಸಂಘರ್ಷವನ್ನ ಉಂಟು ಮಾಡುತ್ತಿರುವ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಪೋಲೀಸರು ಕಾನೂನು ಕ್ರಮ ಜರುಗಿಸಬೇಕಿದೆ.