ಸಿಎಂ ಬೊಮ್ಮಾಯಿಗೆ ಅಂತಿಮ ಗಡುವು ನೀಡಿದ ಯತ್ನಾಳ

By Kannadaprabha News  |  First Published Nov 9, 2022, 10:00 PM IST

ಮೊನ್ನೆ ಸಿಎಂ ಕರೆದು ಯತ್ನಾಳ ನಿಮಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎಂದರು. ಆದರೆ, ನಾನು ನನಗೆ ಮಂತ್ರಿ ಸ್ಥಾನ ಬೇಡ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದೇನೆ ಎಂದ ಯತ್ನಾಳ 


ನಾಲತವಾಡ(ನ.09):  ಡಿ.12ಕ್ಕೆ ಮೀಸಲಾತಿಯನ್ನು ಘೋಷಣೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಅವರಿಗೆ ಅಂತಿಮ ಗಡುವು ನೀಡಿದ್ದೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ವೀರರಾಣಿ ಕಿತ್ತೂರ ಚನ್ನಮ್ಮನವರ 244ನೇ ಜಯಂತ್ಯುತ್ಸವ, 199ನೇ ವಿಜಯೋತ್ಸವ ಹಾಗೂ 2ಎ ಮೀಸಲಾತಿ ಹಕ್ಕೊತ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊನ್ನೆ ಸಿಎಂ ಕರೆದು ಯತ್ನಾಳ ನಿಮಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎಂದರು. ಆದರೆ, ನಾನು ನನಗೆ ಮಂತ್ರಿ ಸ್ಥಾನ ಬೇಡ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದೇನೆ. 2ಎ ಮೀಸಲಾತಿ ನಮಗೆ. ನಾವು ನೀಡಿದ ಗಡುವಿನ ಒಳಗೆ ಸಿಕ್ಕೇ ಸಿಗುತ್ತದೆ. ಎಲ್ಲರೂ ಡಿ.12ಕ್ಕೆ ಬೆಂಗಳೂರಿಗೆ ಹೊರಡು ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದರು.

ಲಪೂಟ ಸ್ವಾಮಿ ಒಬ್ಬ ಮೀಸಲಾತಿ ಸಿಗುವುದು ಪಕ್ಕಾ ಆದ ಮೇಲೆ ಪಂಚಮಸಾಲಿ ಜಾಗೃತ ಸಮಾವೇಶ ಮಾಡುತ್ತಾನಂತೆ. ಇಷ್ಟುದಿವಸ ಮಕ್ಕೊಂಡಿದ್ದಿ ಏನು? .10 ಕೋಟಿ ಮಠಕ್ಕೆ ತಗೊಂಡಿ ಅದರ ಅವ್ಯವಹಾರ ಬೈಲಿಗೆ ಬಿದ್ದಿದೆ. ಮುಂದಿನ ಅಧಿವೇಶನದಲ್ಲಿ ನಿನ್ನ ಚರಿತ್ರೆಯನ್ನು ಬೈಲಿಗೆ ತರುತ್ತೇನೆ ಎಂದು ಹರಿಹಾಯ್ದರು.

Tap to resize

Latest Videos

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್‌

ಮೀಸಲಾತಿ ಹೋರಾಟಕ್ಕೆ ಹಗಲು ರಾತ್ರಿ ಮಠ ಬಿಟ್ಟು, ಪ್ರತಿ ಹಳ್ಳಿ ಹಳ್ಳಿಯಲ್ಲಿ ಅಡ್ಡಾಡಿ ಬಸವಜಯ ಮೃತ್ಯುಂಯಜಯ ಸ್ವಾಮಿಗಳು ಜಾಗೃತಿ ಮೂಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಠವನ್ನು ಬಿಟ್ಟು ಮೀಸಲಾತಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದ ಶ್ರೇಯಸ್ಸು ಮೃತ್ಯುಂಜಯ ಸ್ವಾಮಿಗಳು ಮಾತ್ರ ಸಿಗುತ್ತದೆ ಎಂದರು.

ಪಂಚಮಶಾಲಿ ಹೋರಾಟಕ್ಕೆ ಹಿನ್ನಡೆಯಾಗಬೇಕು ಎಂದು ನನ್ನ ವಿರುದ್ಧ ಕೆಲವರು ಹೋರಾಟ ಮಾಡಿದ್ದಾರೆ. ಆದರೆ, ನಾನು ಇದ್ಯಾವುದಕ್ಕೂ ಜಗ್ಗುವ ಮಗ ಅಲ್ಲ, ನಾನು ಯಾವುದೇ ಕಾರಣಕ್ಕೂ ಅವರಿಗೆ ಕ್ಷಮೆ ಕೇಳುವ ಪ್ರಶ್ನೆ ಬರುವುದಿಲ್ಲ ಎಂದು ಗುಡುಗಿದರು.

ನನ್ನ ವಿರುದ್ಧ ವಿಜಯಪುರದಲ್ಲಿ ಕೆಲವರು ಹೋರಾಟ ಮಾಡಿದ್ದಾರೆ. ಅದರ ಹಿಂದೆ ನಮ್ಮ ಸಮಾಜದ ಇಬ್ಬರು ಶಾಮಿಲಾಗಿದ್ದರು. ಯತ್ನಾಳ ನಮ್ಮ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಕೆಲವರು ಮಾತನಾಡಿದ್ದಾರೆ. ನಾನು ಯಾರಿಗೂ ಕ್ಷಮೆ ಕೇಳುವ ಮಗ ಅಲ್ಲ. ಇಷ್ಟಕ್ಕೆ ಸುಮ್ಮನ್ನಿದರೆ ಒಳ್ಳೆಯದು, ಇಲ್ಲವೆಂದರೆ ನಾನು ಹೋರಾಟ ಮಾಡಲು ಶುರು ಮಾಡಿದರೇ ರಾಜ್ಯದಲ್ಲಿ ನಿಮ್ಮ ಸಮಾಜದಿಂದ ಒಬ್ಬ ಎಂಎಲ್‌ಎ ಕೂಡ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನನ್ನಗೆ ಹಿನ್ನಡೆ ಮಾಡಬೇಕು ಎಂದು ಇತ್ತೀಚೆಗೆ ನಡೆದ ವಿಜಯಪುರ ಚುನಾವಣೆಯಲ್ಲಿ ಸಾಕಷ್ಟುಜನರು ಪ್ರಯತ್ನ ಮಾಡಿದ್ದಾರೆ. ಯತ್ನಾಳಗೆ ಚುನಾವಣೆಯಲ್ಲಿ ಹಿನ್ನಡೆ ಮಾಡಿ ಮೀಸಲಾತಿ ಹೋರಾಟ ಹತ್ತಿಕುವ ಕೆಲಸ ಮಾಡಬೇಕೆಂದು ಬೆಂಗಳೂರಿನಿಂದ ಹಣ ಕೂಡ ಕಳಿಸಿದ್ದರು. ಆದರೆ, ಅವರೆಲ್ಲಿಗೆ ಹಿನ್ನಡೆಯಾಗಿದೆ. ವಿಜಯಪುರ ಜನತೆ ನನ್ನನ್ನು ಕೈಬಿಡಲಿಲ್ಲ ಎಂದರು.

ರಾಷ್ಟ್ರೀಯ ಪಂಚಮಸಾಲಿ ಸಮಾಜದ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಜಯಾನಂದ ಕಾಶಪ್ಪನವರ ಮಾತನಾಡಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಅವರಿಂದ ಹೋರಾಟಕ್ಕೆ ಒಂದು ದೊಡ್ಡ ಶಕ್ತಿ ಬಂದಿದೆ. ನಾವು ಬಹು ಸಂಖ್ಯಾತರು. ಆದರೂ ಕೂಡ ನಮ್ಮ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು ಎಂದು ನಾವೆಲ್ಲರು ಹೋರಾಟ ಮಾಡುತಿದ್ದೇವೆ. ಸಂವಿಧಾನವಾಗಿ ನಾವು ನಮ್ಮ ಹೋರಾಟವನ್ನು ಮಾಡುತಿದ್ದೇವೆ ಎಂದು ತಿಳಿಸಿದರು.

ಈ ಬಾರಿ ಮುದ್ದೇಬಿಹಾಳ ಕ್ಷೇತ್ರದಿಂದ ನಮ್ಮ ಸಮಾಜದಿಂದ ಚುನಾವಣೆ ಕಣಕ್ಕೆ ಇಳಿಯಬೇಕು. ನಮ್ಮ ಸಮುದಾಯ ಮುದ್ದೇಬಿಹಾಳದಲ್ಲಿ ಬಲಿಷ್ಠ ಸಮುದಾಯವಾಗಿದೆ. ಎಲ್ಲ ಮುಖಂಡರು ಒಗ್ಗೂಡಿ ಒಬ್ಬರನ್ನು ಚುನಾವಣೆ ಕಣಕ್ಕೆ ಇಳಿಸಬೇಕು. ಒಂದು ಸಲ ಅರ್ಜಿ ಹಾಕಿ ನಿಮ್ಮ ಬೆಂಬಲಕ್ಕೆ ನಾನು ಮತ್ತು ಬಸನಗೌಡ ಪಾಟೀಲ ಯತ್ನಾಳ ಇರುತ್ತೇವೆ ಎಂದು ಭರವಸೆ ನೀಡಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ನಾವು ಶೇ.80 ರಷ್ಟುಮತ ನೀಡಿದ್ದೇವೆ. ಅದಕ್ಕೆ ಅವರು ನಮಗೆ ಮೀಸಲಾತಿ ನೀಡಲೇಬೇಕು. ನಾವು ಯಾವದೇ ಸಮಾಜದ ವಿರುದ್ಧ ಹೋರಾಟ ಮಾಡುತ್ತಿಲ್ಲ. ನಾವು ನಮ್ಮ ಸಮಾಜದ ಮಕ್ಕಳಿಗಾಗಿ ಮೀಸಲಾತಿ ಕೇಳುತಿದ್ದೇವೆ. ಆದರೆ, ನಮ್ಮ ಹೋರಾಟ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತಿದ್ದಾರೆ. ನಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದರು.

ಈ ವೇಳೆ ಕೊಪ್ಪಳ ಜಿಲ್ಲೆಯ ಸಂಸದರಾದ ಸಂಗಣ್ಣ ಕರಡಿ, ವಿಜಯಪುರ ವಿಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿದರು. ಪ್ರಾಸ್ತಾವಿಕ ನುಡಿ ಎಂ.ಎಸ್‌.ಪಾಟೀಲ, ಸ್ವಾಗತ ಶಶಿಧರ ಬಂಗಾರಿ, ಪ್ರಾರ್ಥನೆ ಹಾಗೂ ರೈತ ಗೀತೆ, ವೀರೇಶ ನವಲಿ ಹಾಗೂ ಹೀರು ನಾಯಕ, ಬಸವರಾಜ ಹಾದಿಮನಿ ಹಾಗೂ ಬಾಬು ಹಾದಿಮನಿ ನಿರೂಪಿಸಿದರು.

ದೇಶಮುಖ, ಜೆ.ಡಿ.ಎಸ್‌ ಮುಖಂಡ ರಾಜುಗೌಡ ಪಾಟೀಲ, ಗುರುಪ್ರಸಾದ ದೇಶಮುಖ, ಬಿ.ಎಂ.ಪಾಟೀಲ, ಎಂ.ಬಿ.ಅಂಗಡಿ, ರುದ್ರುಗೌಡ ಪಾಟೀಲ, ನಾಲತವಾಡ ಪಂಚಮಸಾಲಿ ಸಮಾಜದ ಅಧ್ಯಕ್ಷ ಶರಣು ಗಂಗನಗೌಡರ, ಎ.ಜಿ.ಗಂಗನಗೌಡರ, ಶಿವಶಂಕರ ಹಿರೇಗೌಡರ, ಪಪಂ ಸದಸ್ಯ ಡಾ.ಶರಣಬಸವ ಗಂಗನಗೌಡರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಅಮರೇಶ ಗೂಳಿ, 2ಎ ಮೀಸಲಾತಿ ಕಾರ್ಯದರ್ಶೀ ಕಾಮರಾಜ ಬಿರಾದಾರ, ರಾಮನಗೌಡ ಹಂಪನಗೌಡರ, ಮಹಾಂತೇಶ ಗಂಗನಗೌಡರ, ಕಾಶಿಬಾಯಿ ರಾಂಪೂರ, ಬಸಣ್ಣ ವಡಗೇರಿ, ಪಪಂ ಬಸವರಾಜ ಗಂಗನಗೌಡರ, ಚಂದ್ರಶೇಖರ ಗಂಗನಗೌಡರ, ಅಮರಪ್ಪ ಪಾಟೀಲ, ಗಿರೀಶಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಶಶಿ ಬಂಗಾರಿ ಹಾಗೂ ಇನ್ನಿತರರು ಇದ್ದರು.

ಅದ್ಧೂರಿ ಕುಂಭಮೇಳ

ಕಾರ್ಯಕ್ರಮಕ್ಕು ಮುನ್ನ ವೀರೇಶ್ವರ ಮಹಾಮನೆಯಿಂದ ಎಪಿಎಂಸಿ ಆವರಣದವರೆಗೆ ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ ಭಾವಚಿತ್ರ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರಯ ಕಳಸ ಹೊತ್ತು ಕುಂಭಮೇಳದಲ್ಲಿ ಭಾಗವಹಿಸಿದ್ದರು.

'ಬಿಜೆಪಿ ಬಿರುಗಾಳಿಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗುತ್ತಿದೆ'

ಹೋರಾಟ ಬಗ್ಗು ಬಡೆಯಲು ಕಾಶಪ್ಪನವರಿಗೆ ನನಗೂ ಎಲ್ಲ ರೀತಿಯ ಬ್ಲಾಕ್‌ ಮೇಲ್‌ ಮಾಡಿದರು. ಶ್ರೀಗಳಿಗೂ ಬ್ಲಾಕ್‌ ಮೇಲೆ ಮಾಡಿದರು. ಆದರೆ, ನಾನು ಶ್ರೀಗಳಿಗೆ ಹೇಳಿದೆ ಯಾರಿಗೂ ಅಂಜುವ ಪ್ರಶ್ನೆ ಇಲ್ಲ. ಬೆಂಗಳೂರಿನಲ್ಲಿ ಕುಂತು ಬ್ಲಾಕ್‌ ಮೇಲ್‌ ಮಾಡುವ ಕೆಲಸ ಅವರದ್ದು ಅಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ಮುದ್ದೇಬಿಹಾಳ ಕ್ಷೇತ್ರದಲ್ಲಿ ನಮ್ಮ ಸಮಾಜದವರನ್ನು ತುಳಿಯುವ ಕೆಲಸ ಇಲ್ಲಿಯ ಶಾಸಕರು ಮಾಡುತಿದ್ದಾರೆ. ನಮ್ಮ ಸಮಾಜದ ಯುವಕರಾದ ಶಿವಾನಂದ ವಾಲಿ ಹಾಗೂ ಶರಣಪ್ಪ ಹಳ್ಳಿ ಅವರ ಮೇಲೆ ಡಬ್ಬಾಳಿಕೆ ಮಾಡಿದ್ದಾರೆ. ನೀವು ಯಾರಾದರು ಇಲ್ಲಿಯವರೆಗೆ ಸಮಾಜಕ್ಕೆ ಆದ ಅನ್ಯಾಯದ ಬಗ್ಗೆ ಕೇಳಿದ್ದೀರಿ ಏನು? ನೀವು ರಡಿ ಆಗಿ ನಿಮ್ಮ ಹಿಂದೆ ನಾವು ಇರತೀವಿ. ಸಮಾಜದವರು ಜಾಗೃತರಾಗಿ ಈ ಬಾರಿ ಮುದ್ದೇಬಿಹಾಳ ಕ್ಷೇತ್ರದಿಂದ ಪಂಚಮಸಾಲಿ ಸಮಾಜದಿಂದ ಕಣಕ್ಕೆ ಇಳಿಯಿರಿ ಅಂತ ರಾಷ್ಟ್ರೀಯ ಪಂಚಮಸಾಲಿ ಸಮಾಜದ ಅಧ್ಯಕ್ಷ, ಹುನಗುಂದ ಮಾಜಿ ಶಾಸಕ ಡಾ.ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ. 

ನಾವು ಮೀಸಲಾತಿಯನ್ನು ಪಡೆದು ತೀರುತ್ತೇವೆ. ಸಿ.ಎಂ ಮಾತು ಕೊಟ್ಟು ಮಾತು ತಪ್ಪಿದ್ದಾರೆ. ಎರಡು ವರ್ಷದಿಂದ ಮಠವನ್ನು ಬಿಟ್ಟು ಸಮಾಜಕ್ಕೆ ಮೀಸಲಾತಿ ಸಲುವಾಗಿ ಪ್ರತಿಯೊಂದು ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತಿದ್ದೇನೆ. ಡಿ.12 ರಂದು ನಮ್ಮ ಅಂತಿಮ ಹಂತದ ಹೋರಾಟ. ಇದರಲ್ಲಿ 25 ಲಕ್ಷ ಜನರು ಭಾಗವಹಿಸಲಿದ್ದಾರೆ. ಅದು ನಮ್ಮ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಬೇಕು ಅಂತ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದ್ದಾರೆ. 
 

click me!