ಕೊರೋನಾ ಅಟ್ಟಹಾಸದಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಕ್ಷಣಕ್ಷಣಕ್ಕೂ ಆತಂಕ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವು ಕೊರೋನಾದಿಂದ ಫುಲ್ ಸೇಫ್ ಆಗಿದೆ.
ಬೆಳಗಾವಿ (ಏ.28) : ಮಹಾಮಾರಿ ಕೊರೋನಾ ಅಟ್ಟಹಾಸದಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಕ್ಷಣಕ್ಷಣಕ್ಕೂ ಆತಂಕ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವು ಕೈದಿ ಹಾಗೂ ಸಿಬ್ಬಂದಿ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಇತರ ಜೈಲುಗಳಿಗೆ ಮಾದರಿಯಾಗಿದೆ.
ಕಳೆದ ವರ್ಷ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ 15 ಮಂದಿ ಕೈದಿ, ಐದು ಕಾರಾಗೃಹ ಸಿಬ್ಬಂದಿ ಸೇರಿ ಒಟ್ಟು 20 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ವೇಳೆ ಸೂಕ್ತ ಚಿಕಿತ್ಸೆ ನೀಡಿ ನಿಟ್ಟುಸಿರು ಬಿಟ್ಟಿದ್ದ ಅಧಿಕಾರಿಗಳು ನಂತರದ ದಿನಗಳಲ್ಲಿ ನಿರ್ಲಕ್ಷ್ಯ ತೋರದೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರ ಫಲವಾಗಿ ಜೈಲಲ್ಲಿರುವ ಕೈದಿ ಹಾಗೂ ಅಧಿಕಾರಿ, ಸಿಬ್ಬಂದಿಗೆ ಆ ನಂತರ ಯಾವುದೇ ಸೋಂಕು ತಗುಲಿಲ್ಲ.
ಕೈದಿಗಳಿಗೆ ಹಾಗೂ ಸಿಬ್ಬಂದಿಗೆ ಕಷಾಯ, ಬಿಸಿ ನೀರು, ಬಿಸಿ ಬಿಸಿ ಉಪಹಾರ ಹಾಗೂ ಊಟ, ಸ್ಯಾನಿಟೈಸರ್, ಸಾಮಾಜಿಕ ಅಂತರ, ಸ್ವಚ್ಛತೆ ಸೇರಿ ಇನ್ನಿತರ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಜೈಲು ಅಧಿಕಾರಿಗಳು ತಿಳಿವಳಿಕೆ ನೀಡುತ್ತಿದ್ದಾರೆ. ಜತೆಗೆ ಇವುಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆಯೂ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂಡಲಗಾ ಕಾರಾಗೃಹವು ಕೋವಿಡ್ ಸೋಂಕಿನಿಂದ ಹೆಚ್ಚು ಸುರಕ್ಷಿತ ಎನ್ನುವಂತೆ ಮಾಡಿದ್ದಾರೆ.
46 ದಿನಗಳ ಬಳಿಕ ದೇಶದಲ್ಲಿ ಕೊರೋನಾ ಸ್ವಲ್ಪ ಇಳಿಕೆ! ...
900 ಕೈದಿಗಳು: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ 900 ಕೈದಿಗಳಿದ್ದಾರೆ. ಈ ಪೈಕಿ 45 ವರ್ಷ ಮೇಲ್ಪಟ್ಟ200ಕ್ಕೂ ಹೆಚ್ಚು ಕೈದಿಗಳಿಗೆ ಹಾಗೂ 196 ಕಾರಾಗೃಹದ ಸಿಬ್ಬಂದಿ ಪೈಕಿ 180 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಜೈಲಲ್ಲಿ ಮೂಲೆ ಸೇರಿದ್ದ ಎರಡು ಆಕ್ಸಿಜನ್ ಸಿಲಿಂಡರ್‌ಗಳನ್ನು ತುಂಬಿಸಿ ತುರ್ತು ಸಂದರ್ಭಕ್ಕಾಗಿ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಕೈದಿಗಳಿಂದಲೇ 20 ಸಾವಿರಕ್ಕೂ ಅಧಿಕ ಮಾಸ್ಕ್‌ಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ.
ಸುರಕ್ಷತಾ ಕ್ರಮ: ಇಷ್ಟೇ ಅಲ್ಲದೆ, ಹೊಸದಾಗಿ ಜೈಲು ಸೇರುವ ಆರೋಪಿ ಅಥವಾ ಅಪರಾಧಿಗಳನ್ನು ನೇರವಾಗಿ ಸೆಲ್‌ನಲ್ಲಿ ಹಾಕದೆ, ಪ್ರತ್ಯೇಕ ಕೊಠಡಿಯಲ್ಲಿ 15 ದಿನ ಕಾಲ ಇಟ್ಟು ನಿಗಾವಹಿಸಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬರದಿದ್ದಲ್ಲಿ ಮಾತ್ರ ಸೆಲ್‌ಗೆ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕೈದಿಗಳ ಭೇಟಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.
ಬೇಲ್ ಮೇಲೆ ತೆರಳಿದ್ದ ಕೈದಿಗೆ ಕೊರೊನಾ?:
ಕೊಕಾ ಕಾಯ್ದೆ ಅಡಿ ಜೈಲುಪಾಲಾಗಿದ್ದ ಗೋಕಾಕ ಮೂಲದ ಕೈದಿ, ತನ್ನ ಮಗಳಿಗೆ ಕಿಡ್ನಿ ಟಾನ್ಸ್‌ಫರ್ ಮಾಡುವ ಹಿನ್ನೆಲೆಯಲ್ಲಿ ಕೋರ್ಟ್ ಮೂಲಕ ಜಾಮೀನು ಪಡೆದು ಮನೆಗೆ ತೆರಳಿದ್ದ. ವಾಪಸ್ ಜೈಲಿಗೆ ಬಂದ ಆತನನ್ನು ಅಧಿಕಾರಿಗಳು ಕೋವಿಡ್ ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ವರ್ಷ 15 ಜನ ಕೈದಿಗಳು ಹಾಗೂ 5 ಜನ ಸಿಬ್ಬಂದಿಗೆ ಸೋಂಕು ತಗುಲಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕೈದಿ ಹಾಗೂ ಸಿಬ್ಬಂದಿಗೆ ಕಷಾಯ ಹಾಗೂ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕೈದಿಗಳ ಭೇಟಿಯನ್ನು ರದ್ದುಪಡಿಸಲಾಗಿದೆ. ಕೊರೋನಾದಿಂದ ರಕ್ಷಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ಕೃಷ್ಣಕುಮಾರ್, ಅಧೀಕ್ಷಕ ಹಿಂಡಲಗಾ ಕೇಂದ್ರ ಕಾರಾಗೃಹ ಬೆಳಗಾವಿ