ಮೈಸೂರು ಡೀಸಿ ವಿರುದ್ಧ ಗಂಭೀರ ಆರೋಪ : ಹೈ ಕೋರ್ಟ್ ವಾರ್ನಿಂಗ್

By Kannadaprabha NewsFirst Published Mar 31, 2021, 12:09 PM IST
Highlights

ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪ ಒಂದು ಎದುರಾಗಿದ್ದು ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ.  ಹೈ ಕೋರ್ಟ್ ಹೀಗೆ ಮುಂದುವರಿದಲ್ಲಿ ನ್ಯಾಯಾಂಗ ನಿಂದನೆ ಆರೋಪದ ಬಗ್ಗೆ ಎಚ್ಚರಿಕೆ ನೀಡಿದೆ. 

 ಬೆಂಗಳೂರು (ಮಾ.31):  ನ್ಯಾಯಾಲಯದ ಆದೇಶವಿದ್ದರೂ ನಾಲ್ವರು ನಿವೃತ್ತ ಯೋಧರಿಗೆ ಸರ್ಕಾರಿ ಜಮೀನು ನೀಡದ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಕೂಡಲೇ ಅರ್ಜಿದಾರರಿಗೆ ಹಂಚಿಕೆ ಮಾಡಲು ಭೂಮಿ ಗುರುತಿಸಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಆರೋಪ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.

ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠದ ಆದೇಶವಿದ್ದರೂ ತಮಗೆ ಸರ್ಕಾರ ಜಮೀನು ಮಂಜೂರು ಮಾಡಿಲ್ಲ ಎಂದು ಆರೋಪಿಸಿ ಮೈಸೂರಿನ ನಿವೃತ್ತ ಯೋಧರಾದ ಕೆ.ಬಿ.ನಾಣಯ್ಯ, ಬಿ.ಎನ್‌. ಶಿವಲಿಂಗಪ್ಪ, ಕೆ.ಬಿ.ಭೀಮಯ್ಯ ಮತ್ತು ಇಕ್ಬಾಲ್‌ ಹುಸೈನ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು.

Latest Videos

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರಿಗೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಿ 2013ರಲ್ಲೇ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ. ಆದರೆ, ಈವರೆಗೂ ಜಮೀನು ನೀಡಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಮೈಸೂರಿಂದ ವರ್ಗವಾಗ್ತಾರಾ ರೋಹಿಣಿ ಸಿಂಧೂರಿ..?

ಅಲ್ಲದೆ, ಮಾಜಿ ಯೋಧರ ವಿಚಾರದಲ್ಲಿ ಸರ್ಕಾರ ಈ ರೀತಿ ನಡೆದುಕೊಳ್ಳಬಾರದು. ಯೋಧರು ಸರ್ಕಾರದ ದಾಕ್ಷಿಣ್ಯದಲ್ಲಿ ಇರುವಂತೆ ಮಾಡಬಾರದು. ಜಮೀನು ನೀಡಲು ಸಾಧ್ಯವಾಗದಿದ್ದರೆ, ಅಂತಹ ಸಂದರ್ಭದಲ್ಲಿ ಯೋಧರಿಗೆ ಜಮೀನು ಮಂಜೂರು ಮಾಡಲಾಗುವುದಿಲ್ಲ ಎಂಬುದಾಗಿ ಸರ್ಕಾರ ನಿರ್ಣಯ ಕೈಗೊಳ್ಳಲಿ. ಅದು ಬಿಟ್ಟು ಕೆಲವು ಯೋಧರಿಗೆ ಜಮೀನು ಮಂಜೂರು ಮಾಡಿ, ಉಳಿದವರಿಗೆ ನೀಡದೇ ತಾರತಮ್ಯ ಎಸಗುವುದು ಸರಿಯಲ್ಲ ಎಂದು ಖಾರವಾಗಿ ನುಡಿಯಿತು.

ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜಗಿದ್ದ ರೋಹಿಣಿ ಸಿಂಧೂರಿ, ಜಮೀನು ಮಂಜೂರಾತಿಗೆ ಕೋರಿ ಒಟ್ಟು 10 ಮಂದಿ ಮಾಜಿ ಯೋಧರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಈ ನಾಲ್ವರು ಅರ್ಜಿದಾರರು ಇದ್ದರು. ಆರು ಜನರಿಗೆ ತಲಾ ಎರಡು ಎಕರೆ ಸರ್ಕಾರಿ ಜಮೀನು ನೀಡಲಾಗಿದೆ ಎಂದು ವಿವರಿಸಿದರು.

ಜತೆಗೆ, ಹುಣಸೂರು ತಾಲೂಕಿನ ಹಾನಗೋಡು ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂಬರ್‌ 12ರಲ್ಲಿ ಆರು ಎಕರೆ ಸರ್ಕಾರಿ ಜಾಗವಿದೆ. ಆದರೆ, ಅರ್ಜಿದಾರರು ನಾಲ್ವರಿದ್ದಾರೆ. ಒಂದೇ ಸ್ಥಳದಲ್ಲಿ ಜಾಗ ಮಂಜೂರು ನೀಡಬೇಕೆಂಬ ಉದ್ದೇಶದಿಂದ ತಲಾ ಒಂದೂವರೆ ಎಕರೆ ಜಮೀನು ನೀಡಲು ಉದ್ದೇಶಿಸಲಾಗಿತ್ತು. ಆದರೆ, ಎರಡು ಎಕರೆ ಕೊಡಬೇಕಿರುವ ಕಾರಣ ಮೂವರಿಗೆ ಶೆಟ್ಟಿಹಳ್ಳಿಯಲ್ಲಿ ತಲಾ ಎರಡು ಎಕರೆ, ಮತ್ತೊಬ್ಬರಿಗೆ ಐದು ಕಿ.ಮೀ ದೂರದಲ್ಲಿರುವ ಮತ್ತೊಂದು ಹಳ್ಳಿಯಲ್ಲಿ ಎರಡು ಎಕರೆ ನೀಡಲು ಉದ್ದೇಶಿಸಲಾಗಿದೆ. ಜಾಗದ ಲಭ್ಯತೆಯಿಂದ ಈ ತೀರ್ಮಾನಕ್ಕೆ ಬರಲಾಗಿದೆ ಹೊರತು ತಾರತಯ್ಯ ಅಥವಾ ವಿಳಂಬ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಮನಸ್ಸಿಗೆ ಬಂದಂತೆ ತೀರ್ಮಾನ ಬದಲಿಸಲು ಸಾಧ್ಯವಿಲ್ಲ. ಎರಡು ಎಕರೆ ನೀಡಬೇಕು ಎಂಬುದಾಗಿ ತಿರ್ಮಾನಿಸಿರುವಾಗ ಅಷ್ಟನ್ನು ಕೊಡಬೇಕು. ಒಂದೇ ಜಾಗದಲ್ಲಿ ನೀಡಬೇಕೆಂದು ಕಡಿಮೆ ಜಮೀನು ನೀಡಲು ಕಾನೂನಿನಲ್ಲಿ ಅವಕಾಶ ಇದೆಯೆ, ಮೂವರಿಗೆ ಜಮೀನು ನೀಡುವ ಹಳ್ಳಿಯಲ್ಲಿಯೇ ಮತ್ತಷ್ಟುಸರ್ಕಾರಿ ಜಮೀನು ಇರುವುದನ್ನು ಗುರುತಿಸಲು ಪ್ರಯತ್ನಿಸಲಾಗಿದೆಯೇ, ಒಂದೊಮ್ಮೆ ಅಂತಹ ಪ್ರಯತ್ನ ಮಾಡಿದ್ದರೆ ನಿಮ್ಮ ಈ ಹೇಳಿಕೆ ಒಪ್ಪಬಹುದಾಗಿತ್ತು ಎಂದು ನುಡಿಯಿತು.

ನಂತರ ಅರ್ಜಿದಾರರಿಗೆ ನೀಡಲು ಸರ್ಕಾರಿ ಜಮೀನನ್ನು ಗುರುತಿಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮುಂದುವರಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

click me!