ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ| ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್-ಬಿಜೆಪಿ ಹುನ್ನಾರ| ಶಾಸಕ ದಿ.ನಾರಾಯಣರಾವ್ ಒಳ್ಳೆಯ ಕೆಲಸಗಾರರಾಗಿದ್ದರು. ಹೀಗಾಗಿ ಉಪ ಚುನಾವಣೆಯಲ್ಲಿ ಅವರ ಪತ್ನಿಗೆ ಟಿಕೆಟ್ ನೀಡಲಾಗಿದ್ದು, ಅವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದ ಸಿದ್ದರಾಮಯ್ಯ|
ಕಲಬುರಗಿ(ಮಾ.31): ಎಸ್‌ಐಟಿ ತನಿಖೆಯಿಂದ ಸಿಡಿ ವಿಚಾರದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಮಂಗಳವಾರ ಬಸವಕಲ್ಯಾಣಕ್ಕೆ ತೆರಳುವ ದಾರಿಯಲ್ಲಿ ಕಲಬುರಗಿಯಲ್ಲಿ ಕೆಲಕಾಲ ತಂಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಎಸ್‌ಐಟಿ ತನಿಖೆಯಿಂದ ಸಿಡಿ ವಿಚಾರದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಿಡಿ ವಿಚಾರ ತನಿಖೆ ನಡೆಸುವಂತೆ ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದೆವು. ಎಸ್‌ಐಟಿ ದ ತನಿಖೆಯಾಗಲಿ. ಆದರೆ, ಮುಖ್ಯ ನ್ಯಾಯಮೂರ್ತಿಗಳು ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಕೇಳಲಿಲ್ಲ. ಇದೀಗ ಸಂತ್ರಸ್ತೆಯೇ ಮುಖ್ಯ ನ್ಯಾಯಮೂರ್ತಿಗಳಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾಳೆಂದರು.
ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಕಾರು ಮೇಲೆ ಕಲ್ಲೆಸೆದು ಕಾನೂನು ಕೈಗೆ ತೆಗೆದುಕೊಳ್ಳಲಾಗಿದೆ. ಅದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಕಾನೂನು ಹೋರಾಟ ಮಾಡಬೇಕು, ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಕೇಳಿ ಬಂದಿದೆಯಲ್ಲ ಎಂಬ ಪ್ರಶ್ನೆಗೆ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ನಾನು ಅದಕ್ಕೆ ಉತ್ತರ ಹೇಳುವುದಿಲ್ಲ ಎಂದು ಉತ್ತರಿಸಲು ನಿರಾಕರಿಸಿದರು.
ಮತ್ತೆ ಕೊರೋನಾ ಅಟ್ಟಹಾಸ: ಕರ್ನಾಟಕದ ಈ ಜಿಲ್ಲೆಯಲ್ಲೀಗ ಜನತಾ ಲಾಕ್‌ಡೌನ್..!
ಉಪ ಚುನಾವಣೆ ವಿಚಾರ:
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್-ಬಿಜೆಪಿ ಹುನ್ನಾರ ನಡೆಸಿವೆ. ಮುಂದೆ ಸತ್ಯಾಂಶ ಹೊರಬರಲಿದೆ ಎಂದ ಸಿದ್ದರಾಮಯ್ಯ, ಶಾಸಕ ದಿ.ನಾರಾಯಣರಾವ್ ಒಳ್ಳೆಯ ಕೆಲಸಗಾರರಾಗಿದ್ದರು. ಹೀಗಾಗಿ ಉಪ ಚುನಾವಣೆಯಲ್ಲಿ ಅವರ ಪತ್ನಿಗೆ ಟಿಕೆಟ್ ನೀಡಲಾಗಿದ್ದು, ಅವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮತ ವಿಭಜನೆಗೆ ಜೆಡಿಎಸ್, ಬಿಜೆಪಿ ಜತೆ ಸೇರಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಅವರು, ಆದರೆ ಇಂಥ ಹುನ್ನಾರ ಮತ್ತು ತಂತ್ರಗಳು ಕ್ಷೇತ್ರದ ಮುಸ್ಲಿಂ ಮತದಾರರಿಗೆ ಚೆನ್ನಾಗಿ ಗೊತ್ತಿದೆ. ನಾರಾಯಣ್ ರಾವ್ ಅವರು ಅಲ್ಪಸಂಖ್ಯಾತರೊಂದಿಗೆ ನೇರ ಸಂಪರ್ಕ ಹೊಂದಿದ ಮನುಷ್ಯರಾಗಿದ್ದರು. ಅವರ ವ್ಯಕ್ತಿತ್ವ ಮತ್ತು ಅವರ ಸ್ವಭಾವ ಅಲ್ಪಸಂಖ್ಯಾತರಿಗೆ ಚೆನ್ನಾಗಿ ಗೊತ್ತಿದೆ, ಅಲ್ಪಸಂಖ್ಯಾತರು ಕೈಗೆ ಒಲವು ತೋರೋದು ನಿಶ್ಚಿತ ಎಂದರು.