
ಬೆಂಗಳೂರು: ಪತಿಯ ಕೊ*ಲೆ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪತ್ನಿ ಮತ್ತು ಆಕೆಯ ಪ್ರಿಯಕರ ಮದುವೆಯಾಗಲು ಒಂದು ದಿನದ ಮಟ್ಟಿಗೆ ಪೆರೋಲ್ ನೀಡಿ ಹೈಕೋರ್ಟ್ ಆದೇಶಿಸಿದೆ.
ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೂಡಲಗಿ ತಾಲೂಕಿನ ಭೈರನಟ್ಟಿಯ ನಿವಾಸಿಗಳಾದ ಶ್ರೀಧರ್ ಮತ್ತು ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಎಂಬ ಅಪರಾಧಿಗಳಿಗೆ ಪೆರೋಲ್ ಮಂಜೂರು ಮಾಡಲಾಗಿದೆ.
ಮದುವೆಯಾಗಲು ಪೆರೋಲ್ ಮಂಜೂರು ಮಾಡುವಂತೆ ಕೋರಿ ಶ್ರೀಧರ ಮತ್ತು ಸಿದ್ದವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಪತಿ ಕೊ*ಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸದ್ಯ ಮದುವೆ ಕಾರಣಕ್ಕಾಗಿ ಪೆರೋಲ್ ಕೋರುತ್ತಿದ್ದಾರೆ. ಕೈದಿಗಳು ಮದುವೆಯಾಗಲು ಶಾಸನಬದ್ಧವಾಗಿ ನಿಷೇಧವಿಲ್ಲ. ಹೀಗಿರುವಾಗ ಕೇವಲ ನೈತಿಕತೆ ಆಧಾರದ ಮೇಲೆ ಅವರ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಈ ಅರ್ಜಿಯನ್ನು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಕೈದಿಗಳು ತಮ್ಮ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳನ್ನು ಕಾಯ್ದುಕೊಳ್ಳಲು ಪೆರೋಲ್ ನೀಡುವುದು ಅಪರಾಧ ಸರಿಪಡಿಸುವಿಕೆಯ ಪ್ರಮುಖ ಭಾಗವಾಗಿದೆ. ಇದು ಕೈದಿಗಳ ಪುನರ್ ವಸತಿಗೆ ನೆರವಾಗುತ್ತದೆ. ಜೈಲಿನಲ್ಲಿ ಇವರ ನಡವಳಿಕೆ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯಗಳಿಲ್ಲ. ಹಾಗಾಗಿ, ಅವರಿಗೆ ಮದುವೆಯಾಗಲು ಒದು ದಿನದ ಮಟ್ಟಿಗೆ ಪೆರೋಲ್ ಮಂಜೂರು ಮಾಡಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರ ಕೈದಿಗಳು ಮದುವೆಯಾಗಲು ನಿಶ್ಚಯಿಸುವ ದಿನದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪೆರೋಲ್ ನೀಡಬೇಕು. ಮದುವೆ ಸಮಾರಂಭದ ವೇಳೆ ಜೈಲರ್ ಸೂಕ್ತ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಒದಗಿಸಬೇಕು. ಅಂದು ಸಂಜೆ 5 ಗಂಟೆಯ ಒಳಗಾಗಿ ಅರ್ಜಿದಾರರು ಮರಳಿ ಬೆಳಗಾವಿ ಕಾರಾಗೃಹಕ್ಕೆ ಹಿಂದಿರುಗಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ವಿಜಯಪುರ: 10 ದಿನಗಳ ಪೆರೋಲ್ ರಜೆ ಪಡೆದು ಪರಾರಿಯಾಗಿದ್ದ ಆರೋಪಿ, 21 ವರ್ಷಗಳ ಬಳಿಕ ಸೆರೆ
ಶ್ರೀಧರ್ ಜೊತೆಗೂಡಿ ಸಿದ್ದವ್ವ ತನ್ನ ಪತಿಯನ್ನು ಹ*ತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಸದ್ಯ ಪ್ರಸ್ತುತ ಬೆಳಗಾವಿಯ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅವರು, ತಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ. ಅದಕ್ಕಾಗಿ 90 ದಿನಗಳ ಕಾಲ ಪೆರೋಲ್ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.