
ಬೆಂಗಳೂರು: ನೈಸ್ ರಸ್ತೆ ಯೋಜನೆಗೆ ನೋಟಿಫಿಕೇಶನ್ ಆಗಿದ್ದ ಕೊಡಿಗೆಹಳ್ಳಿ ಸರ್ವೆ ನಂಬರ್ 86ರ ಸುಮಾರು 500 ಕೋಟಿ ರು. ಮೌಲ್ಯದ 14 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಆಪ್ತರು ಕಬಳಿಸಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಕೆಲ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, ನೋಟಿಫಿಕೇಶನ್ ಆಗಿದ್ದ ಈ 14 ಜಾಗವನ್ನು ನಕಲಿ ಆಧಾರ್ ಕಾರ್ಡ್ ಬಳಸಿ ಶ್ರೀಧರ್, ಚಂದ್ರನ್, ಪುಟ್ಟಗೌರಮ್ಮ ಹೆಸರಿಗೆ ದಾಖಲಾತಿ ಮಾಡಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುವ ಚಂದ್ರನ್‌ಗೆ ಜಮೀನು ದಾಖಲಾತಿ ಮಾಡಿದ್ದಾರೆ. ಈ ಚಂದ್ರನ್ ಎಂಬಾತ 1957ರಲ್ಲಿ ಜನಿಸಿದ್ದಾನೆ. ಆದರೆ, ಅವನ ಹೆಸರಿನಲ್ಲಿ 1954ರಲ್ಲೇ ಜಮೀನು ಮಂಜೂರಾಗಿರುವ ದಾಖಲೆ ಸೃಷ್ಟಿಸಿದ್ದಾರೆ ಎಂದರು.
ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಆಗಮನದ ಬಳಿಕ ಈ ಜಮೀನಿನ ಮೇಲೆ ಹಾಕಿದ್ದ ಕೋರ್ಟ್ ಕೇಸ್ ಕೈ ಬಿಡಲಾಗಿದೆ. ಶೇ.40ರಷ್ಟು ತಮಗೂ ಕೊಡುವಂತೆ ಮಾತುಕತೆ ಮಾಡಿಕೊಂಡು ಕೇಸ್ ಕೈಬಿಡಲಾಗಿದೆ ಎಂದು ಆರೋಪಿಸಿದರು. ಶುಕ್ರವಾರ ಕೇಂದ್ರ ಸಚಿವರಾದ ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದರು,
ಇವರೆಲ್ಲಾ ಯಾರು? ನೈಸ್ ಯೋಜನೆಗೆ ನೋಟಿಫಿಕೇಶನ್ ಆಗಿರುವ ಜಮೀನು ಪಡೆಯಲು ಹೇಗೆ ಸಾಧ್ಯ? ಇವರೆಲ್ಲರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಆಪ್ತರು. ಇವರೆಲ್ಲರೂ ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಎ.ಮಂಜುನಾಥ್ ಆಗ್ರಹಿಸಿದರು.