ಸಚಿವರಿಂದ ಕುರುಬರಹಳ್ಳಿಯಲ್ಲಿ 600 ಕೋಟಿ ಮೌಲ್ಯದ 36 ಎಕರೆ ಭೂಮಿ ಕಬಳಿಕೆ? A ಮಂಜುನಾಥ್ ಆರೋಪ

Published : Oct 02, 2026, 08:49 AM IST
Real Estate

ಸಾರಾಂಶ

ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅವರು 600 ಕೋಟಿ ರೂ. ಮೌಲ್ಯದ 36 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಸಚಿವರು ತಮ್ಮ ಪತ್ನಿ ಹಾಗೂ ಆಪ್ತರ ಹೆಸರಿಗೆ ಈ ಭೂಮಿಯನ್ನು ಅಕ್ರಮವಾಗಿ ನೋಂದಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಪೌರಾಡಳಿತ ಸಚಿವ ಎಚ್‌.ಸಿ.ಬಾಲಕೃಷ್ಣ ಅವರೇ ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ ಸುಮಾರು 500ರಿಂದ 600 ಕೋಟಿ ರು. ಮೌಲ್ಯದ 36 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್‌.ಸಿ.ಬಾಲಕೃಷ್ಣ ಅವರ ಪತ್ನಿ ಹೆಸರಿನಲ್ಲಿ ಖರೀದಿಸಿರುವ ಭೂ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭೂ ಕಬಳಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ. ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಬಡವರಿಗೆ ಹಂಚಿಕೆ ಆಗಬೇಕಿದ್ದ ಸರ್ಕಾರಿ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಸಚಿವ ಎಚ್‌.ಸಿ.ಬಾಲಕೃಷ್ಣ ಅವರು ತಮ್ಮ ಪತ್ನಿ ರಾಧಾ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಕೇವಲ 15 ದಿನಗಳ ಹಿಂದೆ ಆ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ಮಾಡಿದ್ದಾರೆ. ಬಿಬಿಎಂಪಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಯಾರಿಗೂ ಮಂಜೂರು ಮಾಡಲು ಬರುವುದಿಲ್ಲ ಆದರೆ, ಬಾಲಕೃಷ್ಣ ಅವರಿಗೆ ಆ ಭೂಮಿ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು.

ಪತ್ನಿ ಹೆಸರಲ್ಲಿ 10 ಎಕರೆ ಕಬಳಿಕೆ

ಸಚಿವ ಬಾಲಕೃಷ್ಣ ತಾವರೆಕೆರೆಯ ಕುರುಬಹಳ್ಳಿ ಬಳಿ ಸರ್ವೆ ನಂಬರ್‌ 158ರಲ್ಲಿ ಸುಮಾರು 500ರಿಂದ 600 ಕೋಟಿ ರು. ಮೌಲ್ಯದ 36 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದಾರೆ. ಅವರ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ. ಉಳಿದ 26 ಎಕರೆಯನ್ನು ಅವರ ಜತೆ ಇರುವ ವ್ಯಕ್ತಿ ನಟರಾಜ ನಾಯ್ಡು ಎನ್ನುವವರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ಉಳುಮೆ ಚೀಟಿಯಿಂದ ಹಿಡಿದು ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಈ ಜಮೀನಿನಲ್ಲಿ 1950ರಿಂದ ಉಳುಮೆ ಮಾಡಿದ ಜನರನ್ನು ಕರೆದುಕೊಂಡು ಬಂದಿದ್ದೇನೆ ಕೆಲ ವ್ಯಕ್ತಿಗಳನ್ನು ತೋರಿಸಿದರು.

ಐಎಎಸ್‌ ಅಧಿಕಾರಿಯೂ ಶಾಮೀಲು

ಈ ಬೃಹತ್ ಅಕ್ರಮದಲ್ಲಿ ಅಂದು ವಿಶೇಷ ಜಿಲ್ಲಾಧಿಕಾರಿ ಆಗಿದ್ದ ವಾಸಂತಿ ಅಮರ್ ಎನ್ನುವ ಐಎಎಸ್ ಅಧಿಕಾರಿ ಇವರೊಂದಿಗೆ ಶಾಮೀಲಾಗಿದ್ದಾರೆ. ಈಗ ದೇವರಾಜ ಎನ್ನುವವನ ಹೆಸರಿನಲ್ಲಿ ಜಿಪಿಎ ಆಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್ ಇಬ್ಬರಿಗೂ ಈ ವ್ಯಕ್ತಿ ಆಪ್ತನಾಗಿದ್ದಾನೆ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಬಿಡದಿ ಟೌನ್‌ಶಿಪ್‌ಗೆ ನೋಟಿಫಿಕೇಶನ್ ಆಗಿದ್ದರೆ ಸಚಿವ ಕೃಷ್ಣ ಬೈರೇಗೌಡ ಅವರು ದಾಖಲಾತಿ ತೋರಿಸಿಲಿ. ದಾಖಲಾತಿ ತೋರಿಸಿದರೆ ಬಿಡದಿ ಹೋರಾಟದಿಂದ ಹಿಂದೆ ಸರಿಯುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದ್ದಾರೆ

PREV
Read more Articles on
click me!

Recommended Stories

ಒಂದಲ್ಲ, ಎರಡಲ್ಲ… ಬರೋಬ್ಬರಿ 3 ಗಂಟೆ ಟ್ರಾಫಿಕ್! ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ ಬೆಂಗಳೂರು IT ಉದ್ಯೋಗಿ!
ಎಚ್.ವಿಶ್ವನಾಥ್, ಮಂಜುಗೆ ಹೈಕೋರ್ಟ್ ಆಘಾತ: ಶಿವಣ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ಅರ್ಜಿ ವಜಾ