ಕೊರೋನಾ ಭೀತಿ 22 ಜನರ ಮೇಲೆ ನಿಗಾ: ಕೊಪ್ಪಳದಲ್ಲಿ ಹೈಅಲರ್ಟ್‌

By Kannadaprabha NewsFirst Published Mar 18, 2020, 11:35 AM IST
Highlights

ವಿದೇಶದಿಂದ ಬಂದ 12 ಜನರು ಸೇರಿದಂತೆ 22 ಜನರ ಮೇಲೆ ಕೊರೋನಾ ಕುರಿತು ನಿಗಾ| ಜಿಲ್ಲೆಯಲ್ಲಿ ಆತಂಕಪಡುವ ಸ್ಥಿತಿ ಇಲ್ಲ: ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ| ವ್ಯಾಪಾರ- ವಹಿವಾಟು ಹಾಗೂ ತರಕಾರಿ ಮಾರುಕಟ್ಟೆಯ ವ್ಯಾಪಾರ ವಹಿವಾಟನ್ನು ಮಾ. 14ರಿಂದ ಒಂದು ವಾರದ ವರೆಗೆ ಸ್ಥಗಿತ| 

ಕೊಪ್ಪಳ(ಮಾ.18): ಜಿಲ್ಲೆಯಲ್ಲಿ ಇದುವರೆಗೂ ವಿದೇಶದಿಂದ ಬಂದ 12 ಜನರು ಸೇರಿದಂತೆ 22 ಜನರ ಮೇಲೆ ಕೊರೋನಾ ಕುರಿತು ನಿಗಾ ಇಡಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ಇದುವರೆಗೂ ಪತ್ತೆಯಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಪ್ರಕಟಣೆ ನೀಡಿದ್ದು, ಜಿಲ್ಲೆಯಲ್ಲಿ ಆತಂಕಪಡುವ ಸ್ಥಿತಿ ಇಲ್ಲ ಎಂದಿದ್ದಾರೆ. 

ಕೊರೋನಾ ಮಧ್ಯೆ ಮತ್ತೊಂದು ಅಪಾಯಕಾರಿ ರೋಗದ ಕಾಟ: ಆತಂಕದಲ್ಲಿ ಜನತೆ

ಇದುವರೆಗೂ ವಿದೇಶದಿಂದ ಬಂದ 12 ಜನರು ಸೇರಿದಂತೆ 22 ಜನರ ಮೇಲೆ ನಿಗಾ ಇರಿಸಲಾಗಿದ್ದು, ಈ ಪೈಕಿ ಈಗಾಗಲೇ 14 ದಿನಗಳನ್ನು ಪೂರೈಸಿದ ಐವರನ್ನು ನಿಗಾದಿಂದ ಮುಕ್ತಿಗೊಳಿಸಲಾಗಿದೆ. ಉಳಿದ 17 ಜನರ ಮೇಲೆ ಮಾತ್ರ ನಿಗಾ ಇರಿಸಲಾಗಿದೆ. ಇವರ್ಯಾರು ಅನುಮಾನಾಸ್ಪದ ಸೋಂಕಿತರು ಅಲ್ಲ. ಆದರೆ, ಇದರಲ್ಲಿ ಕೆಲವರು ಸ್ವಯಂಪ್ರೇರಣೆಯಿಂದ ಚಿಕಿತ್ಸೆಗೆ ಮುಂದಾಗಿದ್ದರೆ ಇನ್ನು ಕೆಲವರು ವಿದೇಶದಿಂದ ಬಂದಿದ್ದಾರೆ ಎನ್ನುವ ಕಾರಣಕ್ಕೆ ಅವರ ಮನೆಯಲ್ಲಿಯೇ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಅನುಮಾನಾಸ್ಪದ ಸೋಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಕಳಿಸಿಕೊಟ್ಟಿಲ್ಲ ಹಾಗೂ ಆಸ್ಪತ್ರೆಯಲ್ಲಿ ನಿಗಾ ಇರಿಸಬಹುದಾದ ಪ್ರಕರಣ ಕಂಡುಬಂದಿಲ್ಲ. 

ಹೈಅಲರ್ಟ್: 

ವಿದೇಶದವರು ಬರುವ ಆನೆಗೊಂದಿ ಮತ್ತು ಅಂಜನಾದ್ರಿ ಬೆಟ್ಟದ ಸುತ್ತಲೂ ಪ್ರದೇಶ ವ್ಯಾಪ್ತಿಯಲ್ಲಿ ವಿಶೇಷ ನಿಗಾ ಇಡಲಾಗಿದೆ. ಅಲ್ಲದೆ ಮುಂಜಾಗ್ರತೆಯನ್ನು ವಹಿಸಲಾಗಿದೆ. ಇನ್ನು ಯಾವುದೇ ಜಿಲ್ಲೆಯಿಂದ ಬರುವವರ ಚೆಕ್‌ಪೋಸ್ಟ್ ತೆರೆಯುವ ಪ್ರಶ್ನೆಯೂ ಬಂದಿಲ್ಲ. ಆದರೆ, ವಿದೇಶದಿಂದ ಬರುವವರ ಕುರಿತು ಮಾಹಿತಿಯನ್ನು ನೀಡುವಂತೆ ಜಾಗೃತಿಯನ್ನು ಮೂಡಿಸಲಾಗಿದೆ. ವಿದೇಶದಿಂದ ಬಂದಿದ್ದರೂ ಮಾಹಿತಿಯನ್ನು ನೀಡದಿದ್ದರೆ ಅಂಥವರ ಬಗ್ಗೆ ಗೊತ್ತಾದ ಕೂಡಲೇ ಮಾಹಿತಿಯನ್ನು ನೀಡುವಂತೆ ಪ್ರಕಟಣೆಯನ್ನು ನೀಡಲಾಗಿದೆ. ಆದರೆ, ಇದುವರೆಗೂ ಜಿಲ್ಲೆಗೆ ವಿದೇಶದಿಂದ ಬಂದಿರುವ 12 ಜನರು ಸ್ವಯಂ ಆಗಿ ತಾವೇ ಮಾಹಿತಿಯನ್ನು ನೀಡಿದ್ದಾರೆ.ಕೆಲವೊಂದು ಕೊರೋನಾ ಪ್ರಕರಣ ದೇಶದಲ್ಲಿ ಹರಡಲಾರಂಭಿಸಿದ ಮೇಲೆಯೂ ಬಂದಿದ್ದರೂ ಅವರು ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೆ, ಅನಿವಾರ್ಯವಾಗಿ ಅವರ ಮೇಲೆ ನಿಗಾ ಇಡಲಾಗಿದೆ. 

ಭಾರತೀಯ ಸೇನೆಯಲ್ಲಿ ಮೊದಲ ಕೊರೋನಾ ಸೋಂಕು ದೃಢ!

ವ್ಯಾಪಾರ, ವಹಿವಾಟು ಸ್ಥಗಿತ: 

ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಮಾರುಕಟ್ಟೆ ಪ್ರಾಂಗಣಗಳಾದ ಗಿಣಗೇರಿ, ಕೂಕನಪಳ್ಳಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಜರುಗುವ ಜಾನುವಾರು ಮತ್ತು ಕುರಿ ವ್ಯಾಪಾರ- ವಹಿವಾಟನ್ನು ಹಾಗೂ ತರಕಾರಿ ಮಾರುಕಟ್ಟೆಯ ವ್ಯಾಪಾರ ವಹಿವಾಟನ್ನು ಮಾ. 14ರಿಂದ ಒಂದು ವಾರದ ವರೆಗೆ ಸ್ಥಗಿತಗೊಳಿಸಲಾದೆ. ಸಂತೆಗಳನ್ನು ಮರು ಪ್ರಾರಂಭಿಸುವ ದಿನಾಂಕವನ್ನು ಸರ್ಕಾರದ ಮುಂದಿನ ಆದೇಶದ ಅನ್ವಯ ರೈತರು, ಸಾರ್ವಜನಿರು ಹಾಗೂ ಎಲ್ಲ ಪೇಟೆ ಕಾರ್ಯಕರ್ತರಿಗೆ ತಿಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!