ಕೊರೋನಾ ಮಧ್ಯೆ ಮತ್ತೊಂದು ಅಪಾಯಕಾರಿ ರೋಗದ ಕಾಟ: ಆತಂಕದಲ್ಲಿ ಜನತೆ

By Kannadaprabha News  |  First Published Mar 18, 2020, 11:21 AM IST

ಕಳೆದ ವರ್ಷ 204 ರೋಗಿಗಳ ಸಾವು | ಚಿಕಿತ್ಸೆಗೆ ರೋಗಿಗಳ ಹಿಂದೇಟು|ಕ್ಷಯರೋಗ ನಿಯಂತ್ರಣಕ್ಕೆ ಮದ್ದಿದ್ದರೂ ಜಾಗೃತಿಯ ಕೊರತೆ ಮತ್ತು ಚಿಕಿತ್ಸೆಗೆ ಜನರ ಹಿಂದೇಟು|


ಸೋಮರಡ್ಡಿ ಅಳವಂಡಿ 

ಕೊಪ್ಪಳ(ಮಾ.18): ಜಿಲ್ಲೆಯಲ್ಲಿ ಪ್ರತಿ ಒಂದೂವರೆ ದಿನಕ್ಕೊಬ್ಬರು ಕ್ಷಯರೋಗಕ್ಕೆ ಬಲಿಯಾಗುತ್ತಿದ್ದಾರೆ! ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೋಗಕ್ಕೆ ಜನರು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

Latest Videos

undefined

ಕೊರೋನಾ ಭೀತಿ: ಬೀಚ್‌ಗೆ ಹೋದ್ರೆ ಬೀಳುತ್ತೆ ದಂಡ

ಕ್ಷಯರೋಗ ನಿಯಂತ್ರಣಕ್ಕೆ ಮದ್ದಿದ್ದರೂ ಜಾಗೃತಿಯ ಕೊರತೆ ಮತ್ತು ಚಿಕಿತ್ಸೆಗೆ ಜನರು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಅದರಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ಕ್ಷಯರೋಗಿಗಳು ಪತ್ತೆಯಾಗಿರುವುದನ್ನು ನೋಡಿದರೆ ಇದು ಅತ್ಯಂತ ವೇಗವಾಗಿ ಹರಡುತ್ತಿರುವುದು ಗೋಚರವಾಗುತ್ತಿದೆ. ಉಸಿರಾಟದಿಂದಲೇ ಹರಡುವ ಅಪಾಯಕಾರಿ ಕ್ಷಯರೋಗ ನಿಯಂತ್ರಣಕ್ಕೆ ಒತ್ತು ನೀಡುವ ಅಗತ್ಯವಿದೆ. 

ಏನಿದೆ ಲೆಕ್ಕಾಚಾರ?: 

ಜಿಲ್ಲಾ ಕ್ಷಯರೋಗ ನಿಯಂತ್ರಣ ಇಲಾಖೆಯ ವರದಿಯ ಪ್ರಕಾರ ಕಳೆದ ಐದು ವರ್ಷಗಳಿಂದ ಕ್ಷಯರೋಗಕ್ಕೆ ಬಲಿಯಾಗಿರುವವರ ಸಂಖ್ಯೆ ಏರುತ್ತಲೇ ಇದೆ. 2019ನೇ ವರ್ಷದಲ್ಲಿ ಇದು ಅತ್ಯಧಿಕ. ಕಳೆದ ಸಾಲಿನಲ್ಲಿ ಬರೋಬ್ಬರಿ 204 ಜನರು ಜಿಲ್ಲೆಯಲ್ಲಿ ಟಿಬಿಯಿಂದಲೇ ಮೃತಪಟ್ಟಿದ್ದಾರೆ ಎನ್ನುವ ವರದಿ ನೀಡಿದ್ದಾರೆ. ಅಂದರೆ ಪ್ರತಿ ಒಂದೂವರೆ ದಿನಕ್ಕೊಬ್ಬರು ಜಿಲ್ಲೆಯಲ್ಲಿ ಟಿಬಿಗೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ 3261 ಜನರಿಗೆ ಕ್ಷಯರೋಗ ಇರುವುದನ್ನು ಪತ್ತೆ ಮಾಡಲಾಗಿದೆ. ಇನ್ನೂ ಪತ್ತೆ ಮಾಡುವ ಕಾರ್ಯ ಭರದಿಂದ ನಡೆದಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಚಿಕಿತ್ಸೆಗೆ ಜನ ಮುಂದೆ ಬರುತ್ತಿಲ್ಲ ಮತ್ತು ಕ್ಷಯರೋಗ ಪತ್ತೆಯಾದವರು ಔಷಧಿಯನ್ನು ಸರಿಯಾದ ಸಮಯಕ್ಕೆ ಬಳಕೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಪತ್ತೆಯಾಗಿರುವವರ ಪೈಕಿ 61 ಜನರು ಔಷಧಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದು ಇನ್ನೂ ಅಪಾಯಕಾರಿ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. 2014ರಲ್ಲಿ ಕ್ಷಯರೋಗದಿಂದ ಕೇವಲ 29 ಜನರು ಮೃತಪಟ್ಟಿದ್ದರು. 2015ರಲ್ಲಿ 38, 2016ರಲ್ಲಿ 43, 2017ರಲ್ಲಿ 37, 2018 ರಲ್ಲಿ 54, 2019ರಲ್ಲಿ 204 ಜನರು ಕ್ಷಯರೋಗಕ್ಕೆ ತುತ್ತಾಗಿದ್ದಾರೆ. 

ಪತ್ತೆಗೆ ಹಿಂದೇಟು: 

ಜಿಲ್ಲೆಯಲ್ಲಿ ಕ್ಷಯರೋಗ ಇರುವವರ ಸಂಖ್ಯೆ ದುಪ್ಪಟ್ಟು ಇರುವ ಸಾಧ್ಯತೆ ಇದೆ. ಆದರೆ, ವಾಸ್ತವದಲ್ಲಿ ಚಿಕಿತ್ಸೆಗೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಹೇಗಾದರೂ ಮಾಡಿ ನಿಯಂತ್ರಣ ಮಾಡುವ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ಕ್ಷಯರೋಗ ಪತ್ತೆಯಾದರೆ ಅವರಿಗೆ ತಿಂಗಳಿಗೆ 500 ನೀಡುವುದರ ಜತೆಗೆ ಉಚಿತ ಔಷಧಿಯನ್ನು ಮನೆಗೆ ಕಳಿಸಲಾಗುತ್ತದೆ. ಅಲ್ಲದೆ ಔಷಧಿಯನ್ನು ನಿತ್ಯವೂ ಸ್ವೀಕಾರ ಮಾಡುವುದಕ್ಕೂ ಮಾರ್ಗದರ್ಶನ ನೀಡಲಾಗುತ್ತದೆ. ಆದರೆ, ಪಡೆದ ಔಷಧಿಯನ್ನು ಸ್ವೀಕಾರ ಮಾಡದೆ ಸಾವಿಗೀಡಾಗುತ್ತಿದ್ದಾರೆ. ಸಂಪೂರ್ಣ ಗುಣಮುಖ: ಕ್ಷಯರೋಗ ವಾಸಿಯಾಗದೆ ಇರುವ ಕಾಯಿಲೆಯಲ್ಲ. ಅದನ್ನು ಕೇವಲ 6 ತಿಂಗಳಲ್ಲಿ ಗುಣಮುಖವನ್ನಾಗಿ ಮಾಡುವುದಕ್ಕೆ ಕೇಂದ್ರ ಸರ್ಕಾರವೇ ಉಚಿತವಾಗಿ ಔಷಧಿಯನ್ನು ಪೂರೈಕೆ ಮಾಡುತ್ತದೆ. ಆದರೆ, ಕ್ಷಯರೋಗ ಪತ್ತೆಗೆ ಜನರು ಸಹಕರಿಸುತ್ತಿಲ್ಲ. ಕ್ಷಯರೋಗ ತಪಾಸಣೆಗೆ ಹೋದರೆ ಸಮಾಜದಲ್ಲಿ ನನ್ನನ್ನು ಕೆಟ್ಟದ್ದಾಗಿ ನೋಡಲಾಗುತ್ತದೆ ಎನ್ನುವ ಭಾವನೆ ಬೇರೂರಿವುದರಿಂದಲೇ ಹೀಗಾಗುತ್ತಿದೆ ಎನ್ನಲಾಗುತ್ತಿದೆ.

ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ

ಕ್ಷಯರೋಗಕ್ಕೆ ಒಂದೂವರೆ ದಿನಕ್ಕೊಬ್ಬರು ಜಿಲ್ಲೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಚಿಕಿತ್ಸೆಗೆ ಜನ ಮುಂದೆ ಬರುತ್ತಿಲ್ಲ. ಈಗ ಪತ್ತೆಯಾಗಿರುವುದಕ್ಕಿಂತ ದುಪ್ಪಟ್ಟು ರೋಗಿಗಳು ಇದ್ದಾರೆ. ಪತ್ತೆಗಾಗಿ ದೊಡ್ಡ ಆಂದೋಲನವೇ ಆಗಬೇಕಿದೆ ಎಂದು ಕೊಪ್ಪಳ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಹೇಳಿದ್ದಾರೆ. 
 

click me!