ಉಳಿದಂತೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ಚಿತ್ರದುರ್ಗ ನಗರದಲ್ಲಿ ಸೋಮವಾರ ಒಂದೇ ರಾತ್ರಿ 105 ಮಿಮೀ ಮಳೆಯಾಗಿದೆ. ನಗರಕ್ಕೆ ಹೊಂದಿಕೊಂಡಂ ತಿರುವ ಪುರಾತನ ಕಾಲದ ಕೆರೆಗಳಿಗೆ ನೀರು ಬಂದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿತ್ರದುರ್ಗ(ಜು.22): ಚಿತ್ರದುರ್ಗ ತಾಲೂಕು ಸೇರಿ ಜಿಲ್ಲೆಯ ಉಳಿದ ಭಾಗದಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು ಪಂಡರಹಳ್ಳಿ ಬಳಿಯ ಹಳ್ಳದಲ್ಲಿ ಮಹಿಳೆಯೋರ್ವರು ಕೊಚ್ಚಿಕೊಂಡು ಹೋಗಿದ್ದರೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದ ಚಾವಡಿ ಕುಸಿದಿದೆ.
ಉಳಿದಂತೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ಚಿತ್ರದುರ್ಗ ನಗರದಲ್ಲಿ ಸೋಮವಾರ ಒಂದೇ ರಾತ್ರಿ 105 ಮಿಮೀ ಮಳೆಯಾಗಿದೆ. ನಗರಕ್ಕೆ ಹೊಂದಿಕೊಂಡಂ ತಿರುವ ಪುರಾತನ ಕಾಲದ ಕೆರೆಗಳಿಗೆ ನೀರು ಬಂದಿವೆ. ಕೋಟೆ ತಪ್ಪಲಿನಲ್ಲಿ ಇರುವ ತಿಮ್ಮಣ್ಣನಾಯಕನಕೆರೆ, ವಡ್ಡುಗೆ ನೀರು ಹರಿದು ಬಂದಿದೆ. ಇದಲ್ಲದೇ ಮಲ್ಲಾಪುರ ಹಾಗೂ ಗೋನೂರು ಕೆರೆಗಳಿಗೂ ನೀರು ಬಂದಿದೆ. ಮಳೆ ಪ್ರಮಾಣ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ತುಸು ಬಿರುಸಾಗಿತ್ತು. ರಾತ್ರಿಯಿಡೀ ಸುರಿಯಿತು. ಕಾತ್ರಾಳೆ ಕೆರೆಗೂ ಅಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಮಳೆ ರೈತರ ಮೊಗದಲ್ಲಿ ಸಂತಸದ ನಗೆ ಬೀರಿಸಿದೆ. ಮೆಕ್ಕೇಜೋಳ ಸೇರಿ ಈರುಳ್ಳಿ ಫಸಲಿಗೆ ನೀರು ಬೇಕಾಗಿತ್ತು. ಬಾಡುವ ಹಂತದಲ್ಲಿದ್ದ ಬೆಳೆ ಒಂದೇ ದಿನ ಸುರಿದ ಮಳೆಗೆ ಕಳೆಗಟ್ಟಿದೆ.
undefined
ಕೋವಿಡ್ ವೈರಸ್ ಏನೂ ಮಾಡಲ್ಲ; ಉಂಡು ಧೈರ್ಯವಾಗಿರಬೇಕಷ್ಟೇ..!
ಕೊಚ್ಚಿಹೋದ ಮಹಿಳೆ: ಚಿತ್ರದುರ್ಗ ತಾಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆಕೆಯ ಶವ ಮಂಗಳವಾರ ಮುಂಜಾನೆ ಗೋಚರಿಸಿದೆ. ಜಮೀನಿಗೆ ಹೋಗಿ ಹಳ್ಳದ ದಾರಿಯಲ್ಲಿ ಹಿಂತಿರುಗುವಾಗ ರಭಸವಾಗಿ ಹರಿದು ಬಂದ ನೀರು ಕೊಚ್ಚಿಕೊಂಡು ಹೋಗಿದೆ. ಮೃತಪಟ್ಟ ಮಹಿಳೆಯನ್ನು ಪಂಡರಹಳ್ಳಿ ಗ್ರಾಮದ ನಾಗಮ್ಮ(45) ಎಂದು ಗುರುತಿಸಲಾಗಿದ್ದು ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಳ್ಳಕೆರೆ ವರದಿ: ಸೋಮವಾರ ಸುರಿದ ಮಳೆಗೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಸ್ವಾತಂತ್ರ್ಯಪೂರ್ವದ ಚಾವಡಿ ಕುಸಿದು ಬಿದ್ದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಜನರ ಸಮಸ್ಯೆಗಳನ್ನು ಗ್ರಾಮೀಣ ಮಟ್ಟದಲ್ಲೇ ಇತ್ಯರ್ಥಗೊಳಿಸುವ ನ್ಯಾಯಾಲಯಗಳಾಗಿ ಗ್ರಾಮೀಣ ಭಾಗದ ಚಾವಡಿಗಳು ಕಾರ್ಯನಿರ್ವಹಿಸುತ್ತಿದ್ದವು. 1939ರಲ್ಲಿ ನಿರ್ಮಿಸಿದ ಚಾವಡಿ ಇದಾಗಿದ್ದು, ಕಟ್ಟಡ ಸಂಪೂರ್ಣ ಶಿಥಿಲಗೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಗ್ರಾಮ ಲೆಕ್ಕಿಗರ ಕಾರ್ಯಾಲಯ, ಅಂಚೆ ಕಚೇರಿ ಇದೇ ಚಾವಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾತ್ರಿ ವೇಳೆಯಾದ್ದರಿಂದ ಯಾವುದೇ ಅಪಾಯವಾಗಿಲ್ಲ. ಚಾವಡಿ ಬಿದ್ದ ಸುದ್ದಿ ತಿಳಿದ ತಕ್ಷಣವೇ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನನ್ನಿವಾಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಚಾವಡಿಯ ಮೇಲ್ಭಾಗದ ಒಂದು ಮೂಲೆ ಕುಸಿದು ಬಿದಿದ್ದು, ಅದನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಂಬಂಧಪಟ್ಟ ಎಂಜಿನಿಯರ್ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ದುರಸ್ತಿಗೊಳಿಸುವುದಾಗಿ ಪಿಡಿಒ ತಿಳಿಸಿದ್ಧಾರೆ. ಕಳೆದ 81 ವರ್ಷಗಳಿಂದ ನನ್ನಿವಾಳ ಗ್ರಾಮವೂ ಸೇರಿ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮದ ಸಾವಿರಾರು ಜನರಿಗೆ ನ್ಯಾಯ ಒದಗಿಸಿದ ಈ ಹಳೇ ಚಾವಡಿ ಕಟ್ಟಡ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.