* ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ರೈತ
* ಲಕ್ಷಾಂತರ ರೂ ಬೆಳೆ ನಷ್ಟ
* ರೈತರಿಗೆ ಗಾಯದ ಮೇಲೆ ಬರೆ ಎಳೆದ ವರುಣ
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಮೇ.10): ಕಳೆದ ಎರಡು ದಿನಗಳಿಂದ ಕೋಟೆ ನಾಡಿನಾದ್ಯಂತ ಸುರಿದ ಧಾರಾಕಾರ ಮಳೆ(Rain) ಹಾಗೂ ಬಿರುಗಾಳಿಗೆ ಅಕ್ಷರಶಃ ರೈತರು ಕಂಗಾಲಾಗಿ ಹೋಗಿದ್ದಾರೆ. ಅದ್ರಲ್ಲಂತೂ ಚಿತ್ರದುರ್ಗ(Chitradurga) ಜಿಲ್ಲೆಯ ಹಿರಿಯೂರು ಭಾಗದ ರೈತರ ಗೋಳು ಹೇಳತೀರದು. ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯ ಅರ್ಭಟಕ್ಕೆ ಜಮೀನಿನಲ್ಲಿದ್ದ ಬೆಳೆಗಳೆಲ್ಲಾ ನೆಲಕಚ್ಚಿವೆ. ಇತ್ತ ಕೊರೊನಾ ಸಂಕಷ್ಟ, ಬೆಳೆ ನಷ್ಟ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲ್ಲೂಕಿನ ವಿವಿದೆಡೆ ಇದೇ ರೀತಿಯ ಹಾನಿಗಳು ಉಂಟಾಗಿದ್ದು ರೈತರಲ್ಲಿ (Farmers) ಆತಂಕ ಮೂಡಿಸಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ತೆಂಗು, ಅಡಿಕೆ ಬೆಳೆಯಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ನಿರಾಸೆ ಮೂಡಿಸಿದೆ. ಇತ್ತ ಬೆಂಕಿ ಕಾಟನಹಟ್ಟಿ ಗ್ರಾಮದ ರೈತ ಹೊಂಬಾಳಪ್ಪನ ಜಮೀನಿನಲ್ಲಿ ಸುಮಾರು 200 ಅಡಕೆ ಮರಗಳು ನೆಲಕ್ಕುರುಳಿದ ಕಾರಣ ಲಕ್ಷಾಂತರ ರೂ. ನಷ್ಟವಾಗಿದ್ದು ಎಂದು ರೈತ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾನೆ.
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಟಾಯ್ಲೆಟ್‌ನಲ್ಲಿ ದಂಧೆ!
ಅಕಾಲಿಕ ಮಳೆಯ ಅರ್ಭಟಕ್ಕೆ ರೈತರು ಕಂಗಾಲಿರೋ ಸುದ್ದಿ ತಿಳಿದ ಕೂಡಲೇ ಹಿರಿಯೂರು ಶಾಸಕಿ ಪೂರ್ಣಿಮಾ(Purnima Shrinivas) ಶ್ರೀನಿವಾಸ್ ಬೆಳೆ ಹಾನಿಗೊಳಗಾದ(Crop Damage) ರೈತರ ಜಮೀನುಗಳಿಗೆ ಭೇಟಿ ನೀಡಿ ತಾಲ್ಲೂಕಿನ ಹೊಸಕೆರೆ, ಧರ್ಮಪುರ, ಅರಳಿಕೆರೆ, ಹಲಗಲದ್ದಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಓರ್ವ ರೈತ ಮಹಿಳೆ ಶಾಸಕರ ಮುಂದೆ ಬೆಳೆ ಹಾನಿ ಆಗಿರೋದಕ್ಕೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ರೈತ ಮಹಿಳೆಗೆ ಶಾಸಕಿ ಅಳಬೇಡಮ್ಮ ಅತ್ತರೆ ಸಮಸ್ಯೆಗೆ ಪರಿಹಾರ ಆಗಲ್ಲ. ನೈಸರ್ಗಿಕ ಮಳೆ ಗಾಳಿಗೆ ಯಾರು ಏನೂ ಮಾಡಲು ಆಗಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ(Compensation) ಒದಗಿಸುವ ಪ್ರಯತ್ನ ಮಾಡ್ತೀನಿ ಎಂದು ಭರವಸೆ ನೀಡಿದರು.
ಒಟ್ಟಾರೆಯಾಗಿ ಏನಂದ್ರೆ ಪ್ರತೀ ಬಾರಿಯೂ ಮಳೆಗಾಳಿಗೆ ಬೆಳೆಗಳು ಹಾನಿಯಾದಾಗ ರೈತರು ಸಂಕಷ್ಟಕ್ಕೆ ಸಿಲುಕ್ಕುತ್ತಾರೆಯೇ ಹೊರೆತು ಬೇರೊಬ್ಬರಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿ ತೆರಳುತ್ತಾರಷ್ಟೆ, ಲಕ್ಷಾಂತರ ರೂ ಬೆಳೆ ನಷ್ಟ ಅನುಭವಿಸಿದ ರೈತರ ಗೋಳಿಗೆ ಸರಿಯಾಗಿ ಯಾರೂ ಪರಿಹಾರ ಒದಗಿಸಲ್ಲ. ಇನ್ನಾದ್ರೂ ಜಿಲ್ಲೆಯ ಉಸ್ತುವಾರಿ ಸಚಿವರೇ ಕೃಷಿ ಮಂತ್ರಿ ಆಗಿರೋದ್ರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಕೂಡಲೇ ಸೂಕ್ತಮಟ್ಟದ ಪರಿಹಾರ ಒದಗಿಸಲಿ ಎಂಬುದು ಹಿರಿಯೂರು ತಾಲ್ಲೂಕಿನ ರೈತರ ಆಗ್ರಹವಾಗಿದೆ.