ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಗ್ರಾಮಗಳು ಜಲಾವೃತವಾಗಿವೆ.
ಬೆಂಗಳೂರು (ಅ.14): ನಾಲ್ಕೈದು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹದ ಭೀತಿ ತಲೆದೋರಿದೆ. ಕೃಷ್ಣ, ಕಾಗಿಣ, ಡೋಣಿ ಮತ್ತಿತರ ನದಿಗಳು, ಹಿರೇಹಳ್ಳ ಸೇರಿ ಹಲವು ಹಳ್ಳಕೊಳ್ಳಗಳಲ್ಲಿ ನೀರಿನಮಟ್ಟಏರಿಕೆಯಾಗಿ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ, 18ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹಾತಂಕ ಕಾಣಿಸಿಕೊಂಡಿದೆ. 100ಕ್ಕೂ ಹೆಚ್ಚು ಎಕರೆ ಭತ್ತ, ಮೆಕ್ಕೆಜೋಳ, ಕಬ್ಬು ಬೆಳೆ ನಾಶವಾಗಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಜಿಲ್ಲೆಗಳಲ್ಲಿ 11ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, 12ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಮುಂಬೈ ಕರ್ನಾಟಕದ ಕಲಬುರಗಿ ಮತ್ತು ರಾಯಚೂರಲ್ಲಿ ಮಳೆ ಇಳಿಮುಖವಾಗಿದ್ದರೂ ಭೀಮಾ, ಕಾಗಿಣಾ ಮತ್ತು ಕೃಷ್ಣಾ ನದಿ ನೀರಿನಮಟ್ಟಏರಿಕೆಯಾಗುತ್ತಿರುವುದು ನದಿ ತೀರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಭಾರೀ ಮಳೆ ಮುಂದುವರಿದರೆ ಮತ್ತೊಂದು ಮಹಾ ಪ್ರವಾಹ ಎದುರಾಗುವ ಆತಂಕ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಿದೆ.
ಭಾರೀ ಮಳೆ ಸಂಭವ, ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್! ...
ಆಸ್ಪತ್ರೆಯಲ್ಲಿ ಆಶ್ರಯ: ಬಾಗಲಕೋಟೆ ಜಿಲ್ಲೆಯ ಹುನಗುಂದದ ಹಿರೇಹಳ್ಳ ಉಕ್ಕಿಹರಿದಿದ್ದು, 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಅಗತ್ಯವಸ್ತುಗಳನ್ನು ಕೊಚ್ಚಿಹೋಗಿದ್ದು, ಸಂತ್ರಸ್ತರು ಸಮೀಪದ ಆಯುರ್ವೇದ ಆಸ್ಪತ್ರೆಯಲ್ಲಿ ಆಶ್ರಯಪಡೆದಿದ್ದಾರೆ. ವಿಜಯಪುರದಲ್ಲಿ ಡೋಣಿ ನದಿ ಪ್ರವಾಹಕ್ಕೆ ದಾಶ್ಯಾಳ, ಕೋಟ್ಯಾಳ ಸೇರಿದಂತೆ ಹತ್ತಕ್ಕೂ ಹೆಚ್ಚು ನದಿ ತಟದ ಗ್ರಾಮಸ್ಥರು ಪ್ರವಾಹ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹಕ್ಕೆ ಯಾದಗಿರಿಯಲ್ಲಿ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನಗಳು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಐತಿಹಾಸಿಕ ಐಹೊಳೆ ಸ್ಮಾರಕಗಳು ಜಲಾವೃತವಾಗಿವೆ.
ಕೊಚ್ಚಿ ಹೋದ ಸೇತುವೆ: ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭರ್ಜರಿ ಮಳೆ ಪರಿಣಾಮ ನೆರೆಯ ಗದಗ ಜಿಲ್ಲೆ ಮೇಲೂ ಆಗುತ್ತಿದೆ. ಗದಗದ ಕುಷ್ಟಗಿ ಹಾಗೂ ಸುತ್ತಮುತ್ತಲಲ್ಲಿ ಹಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮುದೇನೂರು ಗ್ರಾಮದ ಬಳಿ ಸೇತುವೆಯೊಂದು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದೆ. ಇದರಿಂದ ನಾಲ್ಕಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಮದುರ್ಗ ಸಂಪರ್ಕ ಸೇತುವೆ ಕೂಡ ಮುಳುಗಡೆಯಾಗಿದ್ದು, ಈ ಭಾಗದಿಂದ ಬೆಳಗಾವಿಗೆ ಬಸ್ ಸಂಪರ್ಕ ಸ್ಥಗಿತಗೊಂಡಿದೆ. ಇನ್ನು ಕುಷ್ಟಗಿ ತಾಲೂಕಿನ ಬಂಡರಗಲ್ ಗ್ರಾಮದ ಬಳಿ ಹಳ್ಳ ದಾಟುತ್ತಿದ್ದ ಬೈಕ್ ಸವಾರರಿಬ್ಬರು ಸೋಮವಾರ ರಾತ್ರಿ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ದಳದ ನೆರವಿನಿಂದ ರಕ್ಷಿಸಲಾಗಿದೆ.
200ಕ್ಕೂ ಹೆಚ್ಚು ಮನೆಗೆ ಹಾನಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿಜಯಪುರದಲ್ಲಿ ಒಟ್ಟಾರೆ 126, ಯಾದಗಿರಿಯಲ್ಲಿ 12ಕ್ಕೂ ಹೆಚ್ಚು ಹಾಗೂ ಬಳ್ಳಾರಿಯಲ್ಲಿ ಸುಮಾರು 100 ಮನೆಗಳಿಗೆ ಭಾಗಶಃ ಹಾಗೂ ಪೂರ್ಣ ಹಾನಿಯಾಗಿದೆ.