
ಬೆಂಗಳೂರು(ಅ.14): ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ, ತಮ್ಮ ಮನೆಗೆ ಬೆಂಕಿ ಹಾಕಿದ ಪ್ರಕರಣದ ಹಿಂದೆ ನಮ್ಮ ಪಕ್ಷದವರೇ ಆದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಇದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಿರುವುದು ಕೇಳಿ ತೀವ್ರ ಬೇಸರವಾಗಿದೆ ಎಂದು ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾರ್ಪೊರೇಟರ್‌ಗಳಿಗೆ ನನ್ನ ಮೇಲೆ ದ್ವೇಷವಿದ್ದರೆ ನಮ್ಮ ಮುಖಂಡರಾದ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಬಹುದಿತ್ತು. ಆದರೆ, ಈ ರೀತಿ ಮನೆ ಸುಡುವ ದಾಂಧಲೆ ಮಾಡುವ ಮಟ್ಟಕ್ಕೆ ಹೋಗಿರುವುದು ತೀವ್ರ ನೋವುಂಟು ಮಾಡಿದೆ ಎಂದರು.
ಬೆಂಗಳೂರು ಗಲಭೆ: ಶಾಸಕ ಅಖಂಡ ಮನೆ ಬೆಂಕಿಗೆ ಕಾಂಗ್ರೆಸ್ಸಿಗರ ದ್ವೇಷವೇ ಕಾರಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ. ಅಪರಾಧಿಗಳು ಯಾರೇ ಇದ್ದರೂ ಅವರ ವಿರುದ್ಧ ಸಿಸಿಬಿ ಪೊಲೀಸರು ಚಾಜ್‌ರ್‍ಶೀಟ್ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ. ಇದರಿಂದ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಿದರು.
ಗಲಭೆ ಆದಾಗ ಯಾರೋ ಕಿಡಿಗೇಡಿಗಳು ಮಾಡಿದ್ದಾರೆ ಎಂದುಕೊಂಡಿದ್ದೆ. ನಾನು ನಮ್ಮ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಸಹೋದರ ಭಾವದಿಂದ ಇದ್ದೆ. ಆದರೆ ನಮ್ಮ ಮನೆ ಹಾಗೂ ನನ್ನ ತಮ್ಮನ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಸಂಪತ್ ರಾಜ್ ಇರಲಿ, ಜಾಕೀರ್ ಇರಲಿ ನನ್ನ ಮೇಲೆ ದ್ವೇಷವಿದ್ದರೆ ನಾಯಕರಿಗೆ ದೂರು ನೀಡಬೇಕಿತ್ತು. ನನ್ನ ಜೊತೆ ಇದ್ದವರು ಹಾಗೂ ಪರಸ್ಪರ ಸಹಕಾರ ನೀಡಿ ಕೆಲಸ ಮಾಡಬೇಕಿದ್ದವರೇ ಈ ರೀತಿ ಮಾಡಿರುವುದು ಬೇಸರ ಮೂಡಿಸಿದೆ ಎಂದರು.