ಹೊರ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಬೆಂಗಳೂರಲ್ಲಿ ಚಿಕಿತ್ಸೆ

By Kannadaprabha NewsFirst Published Oct 14, 2020, 7:48 AM IST
Highlights

ಬೇರೆ ಜಿಲ್ಲೆಗಳಿಂದ ಅನುಮತಿ ಇಲ್ಲದೇ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯುವವರಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದಿಷ್ಟ ನಿರ್ದೇಶನ ನೀಡುವಂತೆ ಪ್ರಸ್ತಾವನೆ| ಪರೀಕ್ಷೆ ಸಂಖ್ಯೆ 50 ಸಾವಿರಕ್ಕೆ ಹೆಚ್ಚಳ| ಬೆಂಗಳೂರಲ್ಲಿ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣ ದಿನಕ್ಕೆ 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ|  

ಬೆಂಗಳೂರು(ಅ.14): ರಾಜ್ಯದ ವಿವಿಧ ಜಿಲ್ಲೆಗಳ ಕೊರೋನಾ ಸೋಂಕಿತರು ಬೆಂಗಳೂರಿಗೆ ಆಗಮಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಕೊರೋನಾ ಸೋಂಕಿತ ರೋಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಿ ಚಿಕಿತ್ಸೆ ಪಡೆಯಲು ಆಯಾ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕು. ಆದರೆ, ಯಾವುದೇ ಅನುಮತಿ ಪಡೆಯದೇ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಸುಮಾರು 350ಕ್ಕೂ ಅಧಿಕ ಸೋಂಕಿತರು ವಿವಿಧ ಜಿಲ್ಲೆಗಳಿಂದ ಆಗಮಿಸಿ ಚಿಕಿತ್ಸೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದ ಅನುಮತಿ ಇಲ್ಲದೇ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯುವವರಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದಿಷ್ಟ ನಿರ್ದೇಶನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸುವ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಬಿಬಿಎಂಪಿಯಿಂದ ಹಾಸಿಗೆ ವ್ಯವಸ್ಥೆ ಸೇರಿದಂತೆ ಇನ್ನಿತರ ವೈದ್ಯಕೀಯ ವ್ಯವಸ್ಥೆ ಮಾಡಬಹುದು ಎಂದು ವಿವರಿಸಿದರು.

ಆಘಾತಕಾರಿ ಸುದ್ದಿ: ಕೊರೋನಾ ಸೋಂಕು ಲಕ್ಷಣವೇ ಇಲ್ಲದ 43 ಮಂದಿ ಬಲಿ..!

ಶೇ.20 ಲಕ್ಷಣ ರಹಿತ ರೋಗಿಗಳ ಆಸ್ಪತ್ರೆಗೆ ದಾಖಲು:

ಲಕ್ಷಣ ಇಲ್ಲದ ಮತ್ತು ಕಡಿಮೆ ಲಕ್ಷಣ ಹೊಂದಿರುವ ಕೊರೋನಾ ಸೋಂಕಿತರು ಮನೆಯಲ್ಲಿಯೇ ಇದ್ದು ಆರೈಕೆ ಪಡೆದು ಗುಣಮುಖರಾಗಬಹುದು. ಆದರೂ ನಗರದಲ್ಲಿ ಶೇ.15 ರಿಂದ 20 ರಷ್ಟು ಲಕ್ಷಣ ರಹಿತ ಮತ್ತು ಕಡಿಮೆ ಲಕ್ಷಣ ಹೊಂದಿರುವ ರೋಗಿಗಳು ಆಸ್ಪತ್ರೆಗಳಿಗೆ ಹೋಗಿ ದಾಖಲಾಗುತ್ತಿದ್ದಾರೆ. ಇದರಿಂದ ತೀವ್ರ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.

ಲಕ್ಷಣ ರಹಿತರನ್ನು 7 ದಿನಕ್ಕೆ ಬಿಡುಗಡೆಗೆ ಮನವಿ:

ಇನ್ನು ಲಕ್ಷಣ ರಹಿತ ಮತ್ತು ಕಡಿಮೆ ಲಕ್ಷಣ ಇರುವವರು ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಅವರನ್ನು 10 ದಿನಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಅದನ್ನು ಏಳು ದಿನಕ್ಕೆ ಇಳಿಸಲು ಹಾಗೂ ಆಸ್ಪತ್ರೆಯ ಆರೈಕೆ ಅವಶ್ಯಕತೆ ಇಲ್ಲ ಎಂದು ವೈದ್ಯರಿಗೆ ತಿಳಿದು ಬಂದರೆ ಅಂತಹ ಸೋಂಕಿತರನ್ನು ಮೂರು ಅಥವಾ ನಾಲ್ಕೇ ದಿನಕ್ಕೆ ಬಿಡುಗಡೆ ಮಾಡುವುದಕ್ಕೆ ಅವಕಾಶ ನೀಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪರೀಕ್ಷೆ ಸಂಖ್ಯೆ 50 ಸಾವಿರಕ್ಕೆ ಹೆಚ್ಚಳ

ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಸೋಂಕಿತರ 10 ಪಟ್ಟು ಪರೀಕ್ಷೆ ನಡೆಸಬೇಕು. ಸದ್ಯ ನಗರದಲ್ಲಿ ಪ್ರತಿದಿನ ಸರಾಸರಿ ಐದು ಸಾವಿರ ಹೊಸ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ, ನಗರದಲ್ಲಿ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣವನ್ನು ದಿನಕ್ಕೆ 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಸೋಂಕು ಪರೀಕ್ಷೆ ಹೆಚ್ಚು ಹೆಚ್ಚು ಮಾಡಿದಷ್ಟುಮರಣ ಪ್ರಮಾಣ ಹಾಗೂ ಸೋಂಕು ಹರಡುವಿಕೆ ಕಡಿಮೆ ಮಾಡಬಹುದಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.
 

click me!