ಕಾಲುವೆ ದುರಸ್ತಿ ಪಡಿಸುವಲ್ಲಿ ಪಿಡಿಒ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮ ಹಳ್ಳದ ಮೂಲಕ ನೀರು ಹರಿಯಲು ಸಾಧ್ಯವಾಗದೆ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನುಗ್ಗಿದ್ದರಿಂದ ಅನೇಕ ಮನೆಗಳು ಜಲಾವೃತಗೊಂಡ ಘಟನೆ ತಾಲೂಕಿನ ತುಮಕುಂಟೆ ಗ್ರಾಮದಲ್ಲಿ ನಡೆದಿದೆ.
ಪಾವಗಡ (ಅ.12): ಕಾಲುವೆ ದುರಸ್ತಿ ಪಡಿಸುವಲ್ಲಿ ಪಿಡಿಒ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮ ಹಳ್ಳದ ಮೂಲಕ ನೀರು ಹರಿಯಲು ಸಾಧ್ಯವಾಗದೆ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನುಗ್ಗಿದ್ದರಿಂದ ಅನೇಕ ಮನೆಗಳು ಜಲಾವೃತಗೊಂಡ ಘಟನೆ ತಾಲೂಕಿನ ತುಮಕುಂಟೆ ಗ್ರಾಮದಲ್ಲಿ ನಡೆದಿದೆ.
ಪಾವಗಡ ತಾಲೂಕು ನಿಡಗಲ್ ಹೋಬಳಿ ಅರಸೀಕೆರೆ (Arasikere) ಗ್ರಾಪಂ ವ್ಯಾಪ್ತಿಯ ತುಮಕುಂಟೆ ಹಳೇ ಗ್ರಾಮ ಜಲಾವೃತಗೊಂಡಿದ್ದು, ಭಾರಿ ಪ್ರಮಾಣದ ಮಳೆಯ (Heavy Rain) ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಸೋಮವಾರ ರಾತ್ರಿಯಿಡಿ ಸುರಿದ ಮಳೆಯಿಂದ ಪಾವಗಡ (Pavagada) ನಗರ ಸೇರಿದಂತೆ ಎಲ್ಲೆಡೆ ಕೆಸರುಗದ್ದೆಯಂತಾಗಿದ್ದು, ವರುಣನ ಅರ್ಭಟಕ್ಕೆ ಕೆರೆ ಕುಂಟೆಗಳು ಭರ್ತಿಯಾಗಿ ಕೋಡಿ ಬಿದ್ದು ಹಳ್ಳಕೊಳ್ಳಗಳ ಮೂಲಕ ಹೆಚ್ಚು ಪ್ರಮಾಣದ ನೀರು ಹೊರ ಹೊಗುತ್ತಿರುವುದು ಸಾಮಾನ್ಯವಾಗಿದೆ.
ತಾಲೂಕಿನ ಕನ್ನಮೇಡಿ, ಬ್ಯಾಡನೂರು ರಾಜವಂತಿ ಹಾಗೂ ಪಟ್ಟಣದ ಅಗಸರ ಕುಂಟೆ ಕೆರೆಗಳಲ್ಲಿ ಹೆಚ್ಚು ಪ್ರಮಾಣದ ನೀರು ಸಂಗ್ರಹವಾಗಿ ಎರಡನೇ ಬಾರಿಗೆ ಕೋಡಿ ಬಿದ್ದಿವೆ. ಮಳೆಯ ಅರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದ್ದು ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತುಮಕುಂಟೆ ಕೆರೆ ಬಳಿ ಸೀಮೆಜಾಲಿ ಬೆಳೆದು ಹಳ್ಳ ಮುಚ್ಚಿಹೋದ ಕಾರಣ ನೀರು ಹರಿಯಲು ಸಾಧ್ಯವಾಗದೆ, ಇತ್ತ ಚೆಕ್ ಡ್ಯಾಂಗಳು ಭರ್ತಿಯಾಗಿ ನೀರು ನುಗ್ಗಿದ ಪರಿಣಾಮ ಗ್ರಾಮ ಜಲಾವೃತಗೊಂಡಿದೆ. ಬಹುತೇಕ ಮನೆಗಳು ಮುಳುಗಡೆಯಾಗಿದ್ದು ಬಟ್ಟೆ, ಆಹಾರ ಸಾಮಗ್ರಿ ಮತ್ತು ಇತರೆ ಅಗತ್ಯ ವಸ್ತುಗಳಿಗೆ ಪರದಾಡುವ ಪರಿಸ್ಥಿತಿ ಉಂಟಾಗಿ ಆ ಕುಟುಂಬಗಳು ಆತಂಕಕ್ಕೀಡಾಗಿವೆ.
ಗ್ರಾಮಕ್ಕೆ ನೀರು ನುಗ್ಗಿದ ವಿಷಯ ತಿಳಿಯುತ್ತಿದ್ದಂತೆ ಶಾಸಕ ವೆಂಕಟರಮಣಪ್ಪ ಮಂಗಳವಾರ ತಾಲೂಕಿನ ತುಮಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಮುಳುಗಡೆಯಾದ ಮನೆಗಳ ಪರಿಶೀಲನೆ ನಡೆಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಾಂಜನೇಯಗೆ ತರಾಟೆಗೆ ತೆಗೆದುಕೊಂಡು, ಸಂತ್ರಸ್ತ ಕುಟುಂಬ ಸದಸ್ಯರ ಸ್ಥಿತಿಗತಿ ಬಗ್ಗೆ ವಿವರ ಪಡೆದು ತಾತ್ಕಾಲಿಕವಾಗಿ ಗ್ರಾಮದ ಸಮೀಪದ ದೇವಸ್ಥಾನದಲ್ಲಿ ಅಶ್ರಯ ಕಲ್ಪಿಸಿ, ಗಂಜಿ ಕೇಂದ್ರ ತೆರೆಯಲು ಸೂಚಿಸಿದರು. ಆಹಾರ ಪೂರೈಕೆ ಮತ್ತು ಇತರೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಕರೆ ಮೂಲಕ ತಹಸೀಲ್ದಾರ್ ವರದರಾಜ್ ಹಾಗೂ ತಾಪಂ ಇಒ ಶಿವರಾಜಯ್ಯನಿಗೆ ಆದೇಶಿಸಿದರು.
ಇದೇ ವೇಳೆ ಮನೆ ಮುಳುಗಡೆಯ ಸಂತ್ರಸ್ತ ಮಹಿಳೆ ಲಕ್ಷ್ಮಿದೇವಿ ಮಾತನಾಡಿ, ಹಳ್ಳದ ಮೂಲಕ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಗ್ರಾಮಕ್ಕೆ ನುಗ್ಗಿದೆ ಎಂದು ಸಂಕಷ್ಟತೋಡಿಕೊಂಡರು. ಮೊದಲು ಮಳೆಬಂದ ಸಂದರ್ಭದಲ್ಲಿ ಹಳ್ಳ ದುರಸ್ತಿಗೆ ಕ್ರಮವಹಿಸುವಂತೆ ಗ್ರಾಮಸ್ಥರು ಗ್ರಾಪಂನ ಗಮನ ಸೆಳೆದಿದ್ದರು. ಗ್ರಾಪಂ ನಿರ್ಲಕ್ಷ್ಯವಹಿಸಿದ್ದ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ ಎಂದು ಆಳಲು ತೋಡಿಕೊಂಡರು. ಶಾಸಕ ವಂಕಟರಮಣಪ್ಪ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.
ಭಾರಿ ಮಳೆಗೆ ಕೋಡಿಬಿದ್ದ ಕೆರೆ: ಮನೆಗಳು ಮುಳುಗಡೆ
ಪಾವಗಡ ತಾಲೂಕು ನಿಡಗಲ್ ಹೋಬಳಿ ಅರಸೀಕೆರೆ ಗ್ರಾಪಂ ವ್ಯಾಪ್ತಿಯ ತುಮಕುಂಟೆ ಹಳೇ ಗ್ರಾಮ ಜಲಾವೃತ
- ಕಾಲುವೆ ದುರಸ್ತಿಯಲ್ಲಿ ಗ್ರಾಪಂ ವಿಫಲ
, ಭಾರಿ ಪ್ರಮಾಣದ ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ
ಹಳ್ಳ ದುರಸ್ತಿಯಲ್ಲಿ ನಿರ್ಲಕ್ಷ್ಯ - ಕಾಲುವೆ ದುರಸ್ತಿ ಪಡಿಸುವಲ್ಲಿ ಪಿಡಿಒ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ
ಅರಸೀಕರೆ ಪಿಡಿಒ ವಿರುದ್ಧ ಆಕ್ರೋಶ -ಶಾಸಕ ವೆಂಕಟರಮಣಪ್ಪ ಗ್ರಾಮಕ್ಕೆ ಭೇಟಿ
ತಾಲೂಕಿನ ಕನ್ನಮೇಡಿ, ಬ್ಯಾಡನೂರು ರಾಜವಂತಿ ಹಾಗೂ ಪಟ್ಟಣದ ಅಗಸರ ಕುಂಟೆ ಕೆರೆಗಳಲ್ಲಿ ಹೆಚ್ಚು ಪ್ರಮಾಣದ ನೀರು ಸಂಗ್ರಹ