ತಡರಾತ್ರಿ ಸುರಿದ ಮಳೆಗೆ ರಾಮನಗರ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ(ಆ.02): ರಾಮನಗರ ತಾಲ್ಲೂಕಿನ ಮೇಳೆಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಸೇತುವೆ ನಿನ್ನೆ(ಸೋಮವಾರ) ರಾತ್ರಿ ಸುರಿದ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಕಳೆದ 8 ತಿಂಗಳ ಹಿಂದೆ ಇದೇ ಗ್ರಾಮದ ಹಳೆಯ ಸೇತುವೆ ಕೊಚ್ಚಿ ಹೋಗಿತ್ತು. ಸುಮಾರು 18 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ರು. ಆದರೆ ಆ ಸೇತುವೆ ಕೂಡ ನೀರಿನಲ್ಲಿ ಕೊಚ್ಚಿ ಹೋಗಿ ಗ್ರಾಮಕ್ಕೆ ಸಂಪರ್ಕ ಇಲ್ಲದೆ ಹತ್ತಾರು ಗ್ರಾಮದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರ ಬೆಳೆ ಸಂಪೂರ್ಣ ಜಲ ಸಮಾಧಿ
ಇನ್ನೂ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಹಳ್ಳಕೊಳ್ಳದ ಪಕ್ಕದಲ್ಲಿದ್ದ ರೈತರ ಜಮೀನಿನ ಮೇಲೆ ನೀರು ಹರಿದು ರೈತರ ಬೆಳೆಗಳಿಗೆ ಹಾನಿಯಾಗಿದೆ. ತಾಲೂಕಿನ ಎರೆಹಳ್ಳಿ, ಅಂಕನಹಳ್ಳಿ, ಮಾರೇಗೌಡನ ದೊಡ್ಡಿ, ಇನ್ನು ಹಲವಾರು ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದಿದ್ದ ರೇಷ್ಮೆ, ಮೇವು, ತೆಂಗು ಹಾಗೂ ಬಾಳೆ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ.
ಮಾಗಡಿ ಪತ್ರಕರ್ತರ ಸಂಘದಿಂದ ಅಜಿತ್ ಹನುಮಕ್ಕನವರ್‌ಗೆ ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ಪ್ರಧಾನ
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ
ಇನ್ನೂ ಕಾಮಗಾರಿ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ರಾಮನಗರ ತಾಲ್ಲೂಕಿನ ಬಸವನಪುರ ಬಳಿಯ ಅಂಡರ್ ಪಾಸ್ ನಲ್ಲಿ ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರೋಸಿ ಹೋಗಿದ್ದ ವಾಹನ ಸವಾರರು ಹೈವೇ ಅಧಿಕಾರಿಗಳಿಗೆ ಇಡೀ ಶಾಪ ಹಾಕಿದರು.
ಒಟ್ಟಾರೆ ರಾಮನಗರ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಹಲವು ಅವಾಂತರ ಸೃಷ್ಟಿಯಾಗಿದ್ದು, ಹಲವು ಮನೆಗಳಿಗೆ ಶಾಲೆಗಳಿಗೆ ಮಳೆಯ ನೀರು ನುಗ್ಗಿದ್ದು, ಇಡೀ ದಿನ ನೀರನ್ನು ಹೊರ ಹಾಕುವ ಕೆಲಸದಲ್ಲೇ ನಿರತರಾಗಿದ್ರು,
ತುಂಬಿ ಹರಿಯುತ್ತಿರುವ ಜನನ ಜೀವ ನದಿಗಳು
ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜೀವ ನದಿಗಳು ತುಂಬಿ ಹರಿಯುತ್ತಿವೆ, ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಭಾರಿ ಪ್ರಮಾಣದಲ್ಲಿ ಡ್ಯಾಂ ನಿಂದ ನೀರನ್ನು ಹೊರಬಿಡಲಾಗಿದೆ.
ರಾಮನಗರ: ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಯಶಸ್ವಿ
ಮೈದುಂಬಿ ಹರಿಯುತ್ತಿರುವ ಅರ್ಕಾವತಿ ನದಿ
ಮಂಚನಬೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗಿದ್ದು, ಸುಮಾರು 20 ವರ್ಷಗಳ ನಂತರ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಭೋರ್ಗರೆದು ಹರಿಯುತ್ತಿರುವ ಅರ್ಕಾವತಿ ನದಿ ನೋಡಲು ಜನರು ಮುಗಿಬಿದ್ದು ನೋಡುವ ದೃಶ್ಯಗಳು ಸಹ ಕಂಡುಬಂದಿತ್ತು. ಕೆಲ ಕಡೆ ಜಮೀನುಗಳಿಗೆ ನೀರು ನುಗ್ಗಿ ಅವಾಂತರಗಳನ್ನು ಸೃಷ್ಟಿಸಿದೆ.
ಪುರಾಣ ಪ್ರಸಿದ್ದ ಕಣ್ವ ಜಲಾಶಯ ಭರ್ತಿ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಕಣ್ವ ಜಲಾಶಯ 0.8 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಚನ್ನಪಟ್ಟಣ ಭಾಗದಲ್ಲಿನ ಜನರ ಜೀವನಾಡಿಯಾಗಿದ್ದ ಈ ಜಲಾಶಯ ಭರ್ತಿಯಿಂದಾಗಿ ಆ ಭಾಗದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಒಟ್ಟಾರೆ ಸತತವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆ ಅವಾಂತರ ಸೃಷ್ಟಿಯಾಗಿದ್ದು, ಮತ್ತೊಂದು ಕಡೆ ಜಿಲ್ಲೆಯ ಜೀವನಾಡಿ ಜಲಾಶಯಗಳು, ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಜನರಲ್ಲಿ ಸಂಭ್ರಮ ಮನೆ ಮಾಡಿದೆ.