ರಾಯಚೂರು (ಸೆ.9) : ನಗರ ಸೇರಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಭರ್ಜರಿಯಾಗಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ದಾಖಲೆ ಪ್ರಮಾಣದಲ್ಲಿ ಸುರಿದ ಮಳೆಯಿಂದ ರಾಯಚೂರು ತಗ್ಗು ಪ್ರದೇಶದ ಬಡಾವಣೆಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ರಾಜಾ ಕಾಲುವೆ ಹಾದು ಹೋಗಿರುವ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಂಚಕಾರವಾಗಿ ಮಾರ್ಪಟ್ಟಿತು. ಸ್ಥಳೀಯ ಸಿಯಾತಲಾಬ್, ಸುಖಾಣಿ ಕಾಲೋನಿ, ಜಲಾಲ್‌ನಗರ, ಹಾಜಿ ಕಾಲೋಜಿ, ಅರಬ್ ಮೊಹಲ್ಲಾ ಸೇರಿ ಕೊಳಚೆ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಗೊಂಡು ಮನೆಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಸಾಮಾಗ್ರಿಗಳು ನೀರು ಪಾಲಾಗಿದೆ. ವಿದ್ಯುತ್ ಸಂಪರ್ಕ ಕಡಿತ, ಮನೆಗೆ ನುಗ್ಗಿದ ನೀರು ಹೊರಹಾಕುತ್ತಲೆಯೇ ಜನರು ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿದ್ದ ಕಸ ಮಳೆ ನೀರಿನ ಪ್ರವಾಹಕ್ಕೆ ಜನವಸತಿ ಪ್ರದೇಶದ ಮನೆ ಹೊಕ್ಕು ಜನರು ಹೊಲಸಿನಲ್ಲಿ ಕಾಲ ಕಳೆಯುವ ದುಸ್ಥಿತಿ ನಿವಾಸಿಗಳದ್ದಾಗಿದೆ.\
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಗೆ ಉರುಳಿದ ಕಾರು: ಇಬ್ಬರು ಬಲಿ
undefined
ಶಾಸಕರಿಂದ ಪರಿಶೀಲನೆ: ಗುರುವಾರ ಬೆಳಗ್ಗೆ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತಡರಾತ್ರಿ ಸುರಿದ ಮಳೆಯಿಂದ ತೊಂದರೆಗೊಳಗಾದ ವಿವಿಧ ಬಡಾವಣೆ ನಿವಾಸಿಗಳಿಗೆ ತಕ್ಷಣ ಉಪಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ನೀರು ನಿರ್ವಹಣೆಗೆ ಆದೇಶಿಸಲಾಗಿದೆ ಎಂದರು.
ರಾಜಕಾಲುವೆ ಮತ್ತು ಚರಂಡಿ ಸ್ವಚ್ಛತೆ ಹಿನ್ನೆಲೆಯಲ್ಲಿ ಮಳೆ ನೀರು ಕೇವಲ 2 ಗಂಟೆಗಳಲ್ಲಿ ಸಂಪೂರ್ಣ ಇಳಿದು ಹೋಗಿತ್ತು. ರಾಜಕಾಲುವೆ ಸ್ವಚ್ಛತೆ ಒಂದಿಷ್ಟುಬಾಕಿಯಿದ್ದು, ಮಳೆ ನಿಂತ ನಂತರ ಇದನ್ನು ಪೂರ್ಣಗೊಳಿಸಲಾಗುತ್ತದೆ. ಈ ಹಿಂದೆ ಮಳೆ ಬಂದಾಗ ಬಡಾವಣೆಗಳಲ್ಲಿ ನೀರು ನಿಲ್ಲುತ್ತಿತ್ತು. ಆದರೆ, ಕಾಲುವೆಗಳ ಸ್ವಚ್ಛತೆ ಹಿನ್ನೆಲೆಯಲ್ಲಿ ಮಳೆ ನೀರು ಹರಿದು ಹೋಗಲು ಅನುಕೂಲವಾಗಿದೆ. ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಲಾವೃತ:ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ತುಂಗಭದ್ರಾ ನದಿಗೆ ಹೆಚ್ಚುವರಿಯಾಗಿ 1 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿರುವುದರಿಂದ ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ವಿಜಯದಾಸರಕಟ್ಟೆಮತ್ತು ಮಾರಿಕಾಂಭದೇವಿ ದೇವಸ್ಥಾನದ ಸುತ್ತಲೂ ಜಲಾವೃಗೊಂಡಿದೆ. ಇಲ್ಲಿನ ಎಲ್ಲಾ ಹೊಲಗದ್ದೆಗಳಲ್ಲಿ ನೀರು ನಿಂತಿರುವುದು ಮತ್ತು ಬೆಳೆಗಳು ನೀರಿನಲ್ಲಿ ಮುಳುಗಿ ನಷ್ಟವನ್ನುಂಟು ಮಾಡಿದೆ.
ಗರ್ಭಿಣಿಯನ್ನು ತುಂಬಿದ ಹಳ್ಳದಲ್ಲಿಯೇ ಕರೆದೊಯ್ದ ಆ್ಯಂಬುಲೆನ್ಸ್
ಮಸ್ಕಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ತಾಲೂಕಿನ ವೆಂಕಟಾಪುರ ಗ್ರಾಮದ ಹಳ್ಳದ ಸೇತುವೆ ಮುಳುಗಿದ್ದರಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡಬೇಕಾಯ್ತು. ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲೇ ಆ್ಯಂಬುಲೆನ್ಸ್ ಮೂಲಕ ಗರ್ಭಿಣಿಯನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ರಾಯಚೂರು ಕೃಷಿ ವಿವಿಗೆ ಕೇಂದ್ರ ಹಣಕಾಸು ಸಚಿವರಿಂದ ಭರ್ಜರಿ ಗಿಫ್ಟ್..!
ಆ್ಯಂಬುಲೆನ್ಸ್ ಚಾಲಕ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಬಸವಲಿಂಗ ಸಾಹಸ ಮಾಡಿ ವೆಂಕಟಾಪುರದಿಂದ ಗರ್ಭಿಣಿ ಮಹಿಳೆಯನ್ನು ಕರೆದೊಯ್ದು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದುರಗಮ್ಮ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.